ಶೀಘ್ರದಲ್ಲಿ ಬಳ್ಳಾರಿಗೆ ವಿದ್ಯುತ್ ಚಾಲಿತ ರೈಲು

ಬಳ್ಳಾರಿ:

      ಭಾರತ ಸರ್ಕಾರದ ರೈಲ್ವೆ ಇಲಾಖೆಯಿಂದ ಗಣಿನಾಡು ಬಳ್ಳಾರಿಗೆ ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಲು ಸಕಲ ತಯಾರಿ ನಡೆದಿದೆ.

      ಈ ರೈಲು ಹದ್ದಿನಗುಂಡು ಮಾರ್ಗದಿಂದ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನವರೆಗೆ, ಜಿಂದಾಲ್ – ಬನ್ನಿಹಟ್ಟಿ ಮತ್ತು ರಂಜಿತಪುರ‌ ಮಾರ್ಗವಾಗಿ ಈಗಾಗಲೇ ವಿದ್ಯುತ್ ಸಂಪರ್ಕವುಳ್ಳ ಟ್ರ್ಯಾಕ್ ಅಳವಡಿಸುವ ಕಾರ್ಯ ಅತ್ಯಂತ ವೇಗವಾಗಿ ಸಾಗಿದೆ. ಮುಂಬರುವ ಮೇ 15 ರೊಳಗಾಗಿ ವಿದ್ಯುತ್ ಚಾಲಿತ ರೈಲನ್ನು ಪ್ರಾಯೋಗಿಕ ಚಾಲನೆ ಮಾಡುವ ಇರಾದೆ ಇದೆ‌.

ಪ್ರಾಯೋಗಿಕ ಚಾಲನೆ:

     ಮೇ. 15ರೊಳಗೆ ಟ್ರೈಯಲ್ ರನ್ ಟೆಸ್ಟ್ ಮಾಡಿ. ಆ ಬಳಿಕ ಬಳ್ಳಾರಿ – ತೋರಣಗಲ್ಲು ಮಾರ್ಗವಾಗಿ ವಿದ್ಯುತ್ ಚಾಲಿತ ರೈಲನ್ನು ಓಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. 2018ರ ಜನವರಿ ತಿಂಗಳಲ್ಲಿ ಈ ವಿದ್ಯುತ್ ಚಾಲಿತ ರೈಲ್ವೆ ಟ್ರ್ಯಾಕ್ ಅಳವಡಿಸುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, 2019ರ ಮೇ ತಿಂಗಳಲ್ಲಿ ಮೊದಲನೇ ಹಂತದಲ್ಲಿ ವಿದ್ಯುತ್ ಚಾಲಿತ ರೈಲನ್ನು‌‌ ಓಡಿಸಲು ರೈಲ್ವೆ ಇಲಾಖೆಯು ಸನ್ನದ್ಧವಾಗಿದೆ.‌

       ಎರಡನೇ ಹಂತದಲ್ಲಿ ತೋರಣಗಲ್ಲು – ಹೊಸಪೇಟೆ ಮಾರ್ಗದ ವಿದ್ಯುತ್ ಚಾಲಿತ ರೈಲನ್ನು‌ ಓಡಿಸುವ ಸಲುವಾಗಿ ಈಗಾಗಲೇ ವಿದ್ಯುತ್ ಟ್ರ್ಯಾಕ್ ಅಳವಡಿಸಲಾಗುತ್ತಿದೆ.‌ ಇದಲ್ಲದೇ, ಚಿಕ್ಕಜಾಜೂರು – ಬೆಂಗಳೂರು ಮಾರ್ಗದಲ್ಲೂ ವಿದ್ಯುತ್ ಚಾಲಿತ ಟ್ರ್ಯಾಕ್ ಅಳವಡಿಸಲಾಗುತ್ತಿದೆ. ಅದು ಕೂಡ ಶೀಘ್ರವೇ ಪೂರ್ಣಗೊಳ್ಳಲಿದ್ದು, ಈ ಮಾರ್ಗವಾಗಿಯೂ ಕೂಡ ವಿದ್ಯುತ್ ಚಾಲಿತ ರೈಲು ಗಾಡಿ ಓಡುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ವಿದ್ಯುತ್ ಚಾಲಿತ ರೈಲಿನಿಂದ ಉಳಿತಾಯ ಜಾಸ್ತಿ, ವೇಗವೂ ಜಾಸ್ತಿ:

       ಈ ವಿದ್ಯುತ್ ಚಾಲಿತ ರೈಲು ಸಂಚರಿಸುವುದರಿಂದ ಆದಾಯದಲ್ಲಿ ಬಹುಪಾಲು ಉಳಿತಾಯ ಆಗಲಿದೆ. ಈಗಾಗಲೇ ಡೀಸೆಲ್​ ರೈಲುಗಳು ಸಂಚರಿಸುತ್ತಿವೆ. ಅದರಿಂದ ಆದಾಯದ ಬಹುಪಾಲು ಹಣವನ್ನ ಡಿಸೇಲ್​ ಖರೀದಿಗೆ ವ್ಯಯಿಸಬೇಕಾಗುತ್ತದೆ. ಹಾಗಾಗಿ, ಡೀಸೆಲ್​ ರೈಲ್​​​​ಗಿಂತಲೂ ವಿದ್ಯುತ್ ಚಾಲಿತ ರೈಲ್​​ ಸೂಕ್ತ. ವಿದ್ಯುತ್ ದರವೂ ಕಡಿಮೆಯಿದೆ. ಅಗತ್ಯಕ್ಕನುಗುಣವಾಗಿ ವಿದ್ಯುತ್ ಲಭ್ಯವಿದೆ. ಹೀಗಾಗಿ, ವಿದ್ಯುತ್ ಚಾಲಿತ ರೈಲು ಸಂಚರಿಸುವುದರಿಂದ ಆದಾಯದ ಮಿತಿ ದುಪ್ಪಟ್ಟಾಗಲಿದೆ.

       ವೇಗದ ಮಿತಿಯೂ ಕೂಡ ಜಾಸ್ತಿಯಿರುತ್ತದೆ. ವಾಯು ಹಾಗೂ ಪರಿಸರ ಮಾಲಿನ್ಯ ತಡೆಗಟ್ಟಬಹುದಾಗಿದೆ. ಈ ಡೀಸೆಲ್​ ರೈಲುಗಳಿಂದ ವಾಯು ಹಾಗೂ ಪರಿಸರ ಮಾಲಿನ್ಯ ಜಾಸ್ತಿಯಾಗುತ್ತದೆ.‌ ರೈಲ್ವೆ ಇಲಾಖೆಗೆ ವಾರ್ಷಿಕವಾಗಿ ಬರುವ ಆದಾಯದಲ್ಲಿ ಶೇ. 40ರಷ್ಟು ಉಳಿತಾಯ ಆಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ .

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap