ಹರಿದಳೋ ಹೇಮೆ.., ಬರದ ನಾಡಿಗೆ.

ಚಿಕ್ಕನಾಯಕನಹಳ್ಳಿ :

    ಹರಿದಳೋ ಹೇಮೇ.. ಅದೆಷ್ಟು ಜನರ ಕನಸೋ?, ಹೋರಾಟವೋ? ಶ್ರಮವೋ? ಈ ಎಲ್ಲಾ ಮನಗಳಿಗೆ ಈಗ ಸಂತೃಪ್ತಿ ಭಾವನೆ. ರೈತರಿಗೆ, ಸಾರ್ವಜನಿಕರಿಗೆ ಸಂಭ್ರಮ. ಅವರು ಹರಿಯುತ್ತಿರುವ ಹೇಮೆಯನ್ನು ಮೈಗಪ್ಪಿಕೊಂಡು ಪಡುತ್ತಿರುವ ಖುಷಿ ಹೇಳಲು ಅಸಾಧ್ಯ. ಸಾಸಲು ಕೆರೆ ಅರ್ಧ ಆಗಿದ್ದು ಇನ್ನೂ ನಾಲ್ಕು ದಿನಗಳಲ್ಲಿ ತುಂಬ ಬಹುದೆಂದು ಅಂದಾಜಿಸಲಾಗಿದೆ.

    ಮಳೆ ಬರದೆ ಈ ಭಾಗದ ರೈತರೆಲ್ಲರೂ ಬರಕ್ಕೆ ಹೆದರಿ, ಜಮೀನುಗಳನ್ನು ಮಾರಿ ಗುಳೇ ಹೋಗುತ್ತಿದ್ದ ಕಾಲವದು, ಆ ಸಮಯದಲ್ಲಿ ಭೂಮಿಯನ್ನೇ ನೆಚ್ಚಿಕೊಂಡ ಕೆಲ ರೈತರು, ಹೋರಾಟಗಾರರು ಪಕ್ಕದ ಜಿಲ್ಲೆಗಳಲ್ಲಿ ಚಾನಲ್ ಮೂಲಕ ಹರಿಯುವ ನದಿ ನೀರಿನಿಂದ ಬೆಳೆದ ಬೆಳೆಗಳನ್ನು ಕಂಡು ನಮ್ಮೂರಿನಲ್ಲೂ ನದಿ ನೀರು ಹರಿದರೆ ತಾಲ್ಲೂಕಿನ ರೈತರು ಸಮೃದ್ಧಿಯಾಗುತ್ತಾರೆಂಬ ಭಾವನೆಯಿಂದ ಶೆಟ್ಟಿಕೆರೆ ಭಾಗದ ಸುತ್ತಮುತ್ತಲ ರೈತರು 2003ರಲ್ಲಿ ಕಟ್ಟೆ ರಂಗಪ್ಪ ದೇವಸ್ಥಾನದ ಬಳಿ ಸಭೆ ಸೇರಿ ಸರ್ಕಾರಕ್ಕೆ ನೀರಿಗಾಗಿ ಮನವಿ ಸಲ್ಲಿಸಿದ್ದರು.

    ಅಂದು ಸಲ್ಲಿಸಿದ ಮನವಿ, ಜೊತೆಗೆ ಕಾಲ ಕ್ರಮೇಣ ರಾಜಕಾರಣಿಗಳು, ಜನಪ್ರತಿನಿಧಿಗಳು, ಸ್ವಾಮೀಜಿಗಳು, ರೈತರು, ಹೋರಾಟ ಗಾರರು, ಸಾರ್ವಜನಿಕರು ಸೇರಿದಂತೆ ನಡೆಸಿದ ಪ್ರತಿಭಟನೆ, ಹೋರಾಟ, ಸತ್ಯಾಗ್ರಹ, ಧರಣಿ, ಕಾಲ್ನಡಿಗೆ ಜಾಥಾ, ರಸ್ತೆ ತಡೆ ಮುಂತಾದವುಗಳ ಹೋರಾಟದ ಫಲವಾಗಿ 17 ವರ್ಷಗಳ ನಂತರ ನೀರು ಸಾಸಲು ಕೆರೆಗೆ ಹರಿದಿದೆ.

    ಹೇಮಾವತಿ ನೀರಿಗಾಗಿ ತಾಲ್ಲೂಕು ಬಂದ್ ಸಹ ನಡೆದಿತ್ತು, ಜನರೆಲ್ಲರೂ ಒಕ್ಕೊರಲಿನಿಂದ ಹೇಮಾವತಿ ಹರಿಯಲೇಬೇಕು ಎಂದು ಗಟ್ಟಿತನ ಮೆರೆದಿದ್ದರು, ಹಲವು ಸಂಘ ಸಂಸ್ಥೆಗಳು ಬೀದಿಗಿಳಿದಿದ್ದವು. ಅದರ ಪರಿಣಾಮ ಸಿದ್ದವಾಗಿರುವ ಹೇಮಾವತಿ ಚಾನಲ್ ನಲ್ಲಿ ಪ್ರಾಯೋಗಿಕವಾಗಿ ನೀರನ್ನು ಬಿಳಿಗೆರೆ ಕಡೆಯಿಂದ ಸಾಸಲು ಕೆರೆಗೆ ಹರಿಸಲಾಗುತ್ತಿದೆ. ನಿರಂತರವಾಗಿ ನೀರು ಹರಿದರೆ ಸಾಸಲು ಕೆರೆ ತುಂಬುತ್ತಿದ್ದಂತೆ ಶೆಟ್ಟಿಕೆರೆ, ಹೆಸರಹಳ್ಳಿ, ಅಂಕಸಂದ್ರ, ಜೋಡಿತಿಮ್ಮಲಾಪುರ, ಹುಳಿಯಾರು ಕೆರೆಗೆ ನೀರು ಹರಿಯಲಿದೆ ನಂತರ ಬೋರನಕಣಿವೆಗೆ ನೀರು ಹರಿಯಲಿದೆ.

ಜನರ ಸಂಭ್ರಮ :

    ತಾಲ್ಲೂಕಿಗೆ ಹೇಮಾವತಿ ನೀರು ಹರಿಯುತ್ತಿದೆ ಎಂದು ತಿಳಿಯುತ್ತಿದ್ದಂತೆ ಸಾಸಲು ಕೆರೆ ಸುತ್ತಮುತ್ತಲಿನ ಜನರಷ್ಟೇ ಅಲ್ಲದೆ ತಾಲ್ಲೂಕಿನ ಹಲವು ಹೋಬಳಿಗಳ ಜನರು ನೀರು ತಾಲ್ಲೂಕಿಗೆ ಸಂಪರ್ಕಿಸುವ ಸ್ಥಳಕ್ಕೆ ತಂಡೋಪತಂಡವಾಗಿ ತೆರಳಿ ಹರಿಯುವ ನೀರನ್ನು ಕಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹೇಮಾವತಿ ನೀರಿನಲ್ಲಿ ಮಿಂದೆಂದ್ದು ಖುಷಿ ಹಂಚಿಕೊಳ್ಳುತ್ತಿದ್ದಾರೆ. ವಾಟ್ಸ್ ಪ್, ಪೇಸ್ ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿರುವ ನೀರಿನ ವಿಡೀಯೋ ಮಾಡಿ ಎಲ್ಲರಿಗೂ ತಾಲ್ಲೂಕಿಗೆ ನೀರು ಹರಿದುದರ ಬಗ್ಗೆ ಹಂಚಿಕೊಳ್ಳುತ್ತಾ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

ಸಮೃದ್ದಿಯಾಗುವ ನಿರೀಕ್ಷೆ :

     ಹೇಮಾವತಿ ಚಾನಲ್ ಮೂಲಕ ತಾಲ್ಲೂಕಿನ ಕೆರೆಗಳಿಗೆ ನೀರು ಹರಿದರೆ ಸುತ್ತಮುತ್ತಾ ಇರುವ ಹೊಲ, ತೋಟ, ಗದ್ದೆಗಳ ಬೋರ್ ಗಳು ತುಂಬಲಿವೆ, ತೋಟಗಳ ಸುತ್ತಮುತ್ತ ನೀರು ಹರಿದರೆ ಮರಗಳು ಒಣಗದೆ ಉತ್ತಮ ಫಸಲು ದೊರಕಲಿದೆ, ರೈತರು ಸಂತುಷ್ಠರಾಗುತ್ತಾರೆಂಬ ಆಶಾಭಾವನೆ ರೈತರಲ್ಲಿದೆ.

ಹಲವು ಅಡೆತಡೆ :

    ತಾಲ್ಲೂಕಿಗೆ ನೀರು ಹರಿಸಲು ಹಲವು ಅಡೆತಡೆಗಳನ್ನು ಎದುರಿಸಬೇಕಾಯಿತು, ಚಾನಲ್ ಗಾಗಿ ಜಮೀನು ಬಿಟ್ಟುಕೊಟ್ಟ ರೈತರಿಗೆ ಪರಿಹಾರ ದೊರಕದ ಹಿನ್ನೆಲೆ, ರಾಜ್ಯದಲ್ಲಿ ಇದ್ದ ಸರ್ಕಾರದ ಪಕ್ಷ ತಾಲ್ಲೂಕಿನಲ್ಲಿ ಶಾಸಕರು ಆಯ್ಕೆಯಾಗದ ಹಿನ್ನೆಲೆಯೂ ಅನುದಾನ ಬಿಡುಗಡೆಗೆ ವಿಳಂಬವಾಯಿತು, ಜಮೀನು ಬಿಟ್ಟುಕೊಟ್ಟ ರೈತರು ಕೇಂದ್ರ ಸರ್ಕಾರದ ಮೂರುಪಟ್ಟ ಪರಿಹಾರಕ್ಕಾಗಿ ಆಗ್ರಹಿಸಿದ್ದು ಸೇರಿದಂತೆ ಹಲವು ಅಡೆತಡೆಗಳು ಚಾನಲ್ ಕಾಮಗಾರಿ ಪೂರ್ಣಗೊಳ್ಳಲು ತಡೆಯಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap