ಬೆಂಗಳೂರು
ಸಿರಿಧಾನ್ಯಗಳಿಗೆ ಪ್ರೋತ್ಸಾಹ ನೀಡಲು ಹಾಗೂ ಉತ್ತಮ ಮಾರುಕಟ್ಟೆ ಒದಗಿಸುವ ಸಲುವಾಗಿ ಮುಂಬರುವ ಬಜೆಟ್ ನಲ್ಲಿ ವಿಶೇಷ ಅನುದಾನ ಘೋಷಿಸುವುದಾಗಿ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಭರವಸೆ ನೀಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಸಾವಯವ ಹಾಗೂ ಸಿರಿಧಾನ್ಯ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪದಲ್ಲಿ ಮಾತನಾಡಿದ ಅವರು, ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಅಗತ್ಯವಿದೆ. ಜೊತೆಗೆ, ಸಿರಿಧಾನ್ಯದ ಸಂಸ್ಕರಣೆ, ಸಂಗ್ರಹ ಹಾಗೂ ಪ್ಯಾಕೇಜಿಂಗ್ ಗೆ ಆರ್ಥಿಕ ನೆರವು ಒದಗಿಸಲು ಬಜೆಟ್ನಲ್ಲಿ ಹೊಸ ಯೋಜನೆ ಘೋಷಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದರು.
ಹಿಂದೆ ಬಡಜನರ ಆಹಾರವಾಗಿದ್ದ ನವಣೆ ಮತ್ತಿತರರ ಸಿರಿಧಾನ್ಯಗಳು ಇಂದು ನಗರ ಪ್ರದೇಶಗಳ ಸಿರಿವಂತರ ಬೇಡಿಕೆಯ ಆಹಾರವಾಗಿದೆ. ಮಧುಮೇಹ, ರಕ್ತದೊತ್ತಡಗಳಂತಹ ಸಮಸ್ಯೆಗಳನ್ನು ಸಿರಿಧಾನ್ಯ ಸೇವನೆಯಿಂದ ನಿಯಂತ್ರಿಸಬಹುದಾಗಿದೆ. ಆದ್ದರಿಂದ ಅವುಗಳಿಗೆ ಬೇಡಿಕೆ ಹೆಚ್ಚಿದೆ ಎಂದರು.
ಮೂರು ದಿನದ ಸಮ್ಮೇಳನದಲ್ಲಿ 2 ಲಕ್ಷ ಜನರು ಪಾಲ್ಗೊಂಡಿದ್ದು, 240 ಕೋಟಿ ರೂ. ವಹಿವಾಟು ನಡೆದಿದೆ. ಜರ್ಮನಿ, ಫ್ರಾನ್ಸ್, ಅಮೆರಿಕ ಸೇರಿ ಹಲವು ವಿದೇಶಿ ಸಂಸ್ಥೆಗಳು ಕೂಡ ಪಾಲ್ಗೊಂಡು, ರಾಜ್ಯದೊಂದಿಗೆ ಸಿರಿಧಾನ್ಯ ವಹಿವಾಟು ನಡೆಸಲು ಆಸಕ್ತಿ ತೋರಿದ್ದು, ಇದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮದಲ್ಲಿ ಉತ್ತಮ ಮಳಿಗೆಗಳಿಗೆ ಪ್ರಶಸ್ತಿ ನೀಡಲಾಯಿತು. ಮೂರು ದಿನಗಳ ಅವಧಿಯಲ್ಲಿ ಒಟ್ಟು 154 ಕೋಟಿ ರೂ. ಮೌಲ್ಯದ 67 ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದ್ದು, ಒಪ್ಪಂದ ಪತ್ರಗಳನ್ನು ಸಂಬಂಧಿಸಿದ ಸಂಸ್ಥೆಗಳಿಗೆ ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ