ಜಿಲ್ಲೆಗೆ ರೂ.100 ಕೋಟಿ ವಿಶೇಷ ಅನುದಾನ : ಬಿ.ಎಸ್.ಯಡಿಯೂರಪ್ಪ

ಹಾವೇರಿ
 
    ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ವಿವಿಧ ಇಲಾಖೆಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಒಂದು ನೂರು ಕೋಟಿ ರೂ. ವಿಶೇಷ ಅನುದಾನವನ್ನು ಹಾವೇರಿ ಜಿಲ್ಲೆಗೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಿಸಿದರು.
      ಹಾವೇರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿ ಮತ್ತು ಪರಿಹಾರ ಕುರಿತು ಗುರುವಾರ ಪರಿಶೀಲನಾ ಸಭೆ ನಡೆಸಿದ ಅವರು ಮಳೆ- ಪ್ರವಾಹದಿಂದ ಹಾನಿಯಾದ ಎ ಮತ್ತು ಬಿ ಶ್ರೇಣಿಯ ಮನೆಗಳ ಪುನರ್ ನಿರ್ಮಾಣ ಕಾರ್ಯವನ್ನು ತತಕ್ಷಣದಿಂದಲೇ ಆರಂಭಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಸೂಚನೆ ನೀಡಿದರು.
      ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಸಮೀಕ್ಷೆ ಕಾರ್ಯದಲ್ಲಿ ಯಾವುದಾದರು ಸಂತ್ರಸ್ತರ ಮನೆಗಳು ಕೈಬಿಟ್ಟು ಹೋಗಿರುವ ಕುರಿತಂತೆ ಹಾಗೂ ಪರಿಹಾರ ದೊರಕಿಲ್ಲ ಎಂಬ ದೂರುಗಳು ಇವೆಯೇ, ಮೊದಲ ಕಂತಾಗಿ ಒಂದು ಲಕ್ಷ ರೂ. ಪರಿಹಾರ ಎ ಮತ್ತು ಬಿ ಕೆಟಗರಿ ಮನೆಗಳ ಫಲಾನುಭವಿಗಳೀಗೆ ಜಮಾ ಆಗಿದೆಯಾ ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ ಮಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಕಂತಾಗಿ ಹಣ ಪಾವತಿಯಾಗಿದ್ದರೆ ತಕ್ಷಣದಿಂದಲೇ ಮನೆಗಳ ಪೌಂಡೇಷನ್ ಕಾರ್ಯ ಆರಂಭಿಸಬೇಕು. ಹಂತ ಹಂತವಾಗಿ ಐದು ಲಕ್ಷ ರೂ.ವರೆಗೆ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
        ಬೆಳೆಹಾನಿ ಕುರಿತಂತೆ ಮಾಹಿತ ಪಡೆದ ಎನ್.ಡಿ.ಆರ್.ಎಫ್. ಮಾರ್ಗಸೂಚಿಯ ಹೊರತಾಗಿಯೂ ಪ್ರತಿ ಹಕ್ಟೇರ್‍ಗೆ 10 ಸಾವಿರ ರೂ. ವಿಶೇಷ ಅನುದಾನ ರಾಜ್ಯ ಸರ್ಕಾರ ನೀಡುತ್ತಿರುವ ಕುರಿತಂತೆ ರೈತರಿಗೆ ಮಾಹಿತಿ ಇದೆಯಾ, ಬೆಳೆ ಪರಿಹಾರ ಕುರಿತಂತೆ ತೃಪ್ತಿ ಇದೆಯಾ, ಒಣಬೇಸಾಯ, ಮಳೆಯಾಶ್ರಿತ ಪಂಪಸೆಟ್ ಆಶ್ರಿತ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ವಿಶೇಷ 10 ಸಾವಿರ ಪರಿಹಾರ ನೀಡುತ್ತಿರುವ ಕುರಿತಂತೆ ಮನೆ ಮನೆಗೆ ಮಾಹಿತಿ ನೀಡಬೇಕು. ಎಲ್ಲ ರೈತರಿಗೂ ಮಾಹಿತಿ ರವಾನೆಯಾಗಬೇಕು. ಈ ಕುರಿತಂತೆ ವಿಶೇಷವಾಗಿ ಪ್ರಚಾರ ನಡೆಸಬೇಕು. ರೈತರಿಗೆ ಮಾಹಿತಿಗೊತ್ತಾಗಬೇಕು, ಎಲ್ಲ ರೈರಿಗೂ ಹೆಚ್ಚುವರಿ ಪರಿಹಾರ ದೊರಕಬೇಕು. ಈನಿಟ್ಟಿನಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
       ಸಭೆಯಲ್ಲಿ ಗೃಹ, ಸಹಕಾರಿ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಶಾಲಾ ಕೊಠಡಿಗಳು ಪೂರ್ಣ ಪ್ರಮಾಣದಲ್ಲಿ ಬಿದ್ದುಹೋಗಿವೆ ಹಾಗೂ ಜಿಲ್ಲೆಯಲ್ಲಿ ರಸ್ತೆ, ಸೇತುವೆ, ಅಂಗನವಾಡಿ ಕಟ್ಟಡ ಸೇರಿದಂರೆ ಮೂಲ ಸೌಕರ್ಯಗಳು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದು ಹೆಚ್ಚುವರಿ ಅನುದಾನವನ್ನು ಜಿಲ್ಲೆಗೆ ಬಿಡುಗಡೆಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
       ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಅತಿವೃಷ್ಟಿ ಹಾಗೂ ಪ್ರವಾಹ ಹಾನಿ ಕುರಿತಂತೆ  ಮಾಹಿತಿ ನೀ, ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಒಟ್ಟು ಒಂಭತ್ತು ಜೀವಹಾನಿಯಾಗಿದ್ದು, 32 ಲಕ್ಷ ರೂ. ಪರಿಹಾರ ನೀಡಲಾಗಿದೆ. 17 ಜನ ಗಾಯಗೊಂಡಿದ್ದು 1.5 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ.  191 ಜಾನುವಾರುವಾಗಳು 2032 ಪಕ್ಷೀಗಳ ಜೀವಹಾನಿಯಾಗಿದ್ದು, 13.24 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ಆಗಸ್ಟ ತಿಂಗಳಲ್ಲಿ 3523 ಕುಟುಂಬಗಳಿಗೆ ಜೀವನೋಪಾಯ ಸಾಗ್ರಿಗಳಿಗಾಗಿ ತಲಾ 10 ಸಾವಿರದಂತೆ 352 ಲಕ್ಷ ರೂ. ಹಾಗೂ ಅಕ್ಟೋಬರ್ ಮಾಹೆಯ ಅತಿವೃಷ್ಟಿಗೆ ಸಂತ್ರಸ್ತಗೊಂಡ 827 ಕುಟುಂಬಗಳಿಗೆ 82.70 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದರು.
       ಜಿಲ್ಲೆಯಲ್ಲಿ ಆಗಸ್ಟ್ ಮಳೆಗೆ 305 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದ್ದು 303 ಮನೆಗಳಿಗೆ 3.03 ಕೋಟಿ ರೂ. ಪರಿಹಾರ ಪಾವತಿಸಿದೆ. 3428 ಮನೆಗಳು ತೀವ್ರ ಹಾನಿಯಾಗಿದ್ದು ಈ ಪೈಕಿ 3426 ಮನೆಗಳಿಗೆ 34.26 ಕೋಟಿ ರೂ. ಪರಿಹಾರ ಪಾವತಿಸಿದೆ. 10389 ಮನೆಗಳು ಅಲ್ಪಸ್ವಲ್ಪ ಹಾನಿಯಾಗಿದ್ದು ಈ ಪೈಕಿ 10226 ಮನೆಗಳಿಗೆ 51.13 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. 270 ಕುಟುಂಬಗಳು ಮಾಸಿಕ ಬಾಡಿಗೆ ಪಡೆಯುತ್ತಿವೆ. 82 ಶೆಡ್‍ಗಳನ್ನು ಸಂತ್ರಸ್ತರಿಗೆ ನಿರ್ಮಿಸಿಕೊಡಲಾಗಿದೆ. ಒಟ್ಟಾರೆ 88.42 ಕೋಟಿ ರೂ.ಗಳ ಮನೆ ಹಾನಿಗೆ ಪರಿಹಾರ ಒದಗಿಸಲಾಗಿದೆ ಎಂದು ವಿವರಿಸಿದರು.
       ಸೆಪ್ಟೆಂಬರ್ –ಅಕ್ಟೋಬರ್ ತಿಂಗಳಲಿ  ಎ ವರ್ಗದ 54 , ಬಿ ವರ್ಗದ 1100 ಹಾಗೂ ಸಿ ವರ್ಗದ 6802 ಮನೆಗಳು ಒಳಗೊಂಡಂತೆ 7956 ಮನೆಗಳು ಹಾನಿಯಾಗಿವೆ. ಸರ್ವೇ ಕಾರ್ಯ ಪೂರ್ಣಗೊಂಡಿದೆ. ರಾಜೀವ ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ದಾಖಲಾತಿ ಮಾಡುವ ಕಾರ್ಯ ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಶೀಘ್ರದಲ್ಲಿ ಪರಿಹಾರ ವಿತರಿಸಲಾಗುವುದು ಎಂದು ಸಭೆಗೆ ವಿವರಿಸಿದರು.
     ವಿವಿಧ ಇಲಾಖೆಯ 1368 ಮೂಲಭೂತ ಸೌಕರ್ಯಗಳು ಹಾನಿಯಾಗಿದ್ದು, 52.14 ಕೋಟಿ ರೂ. ಅಂದಾಜು ಹಾನಿಯಾಗಿದೆ. ಈ ಪೈಕಿ 24.34 ಕೋಟಿ ರೂ. ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಸರ್ಕಾರದಿಂದ 35 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದಲ್ಲದೆ ಲೋಕೋಪಯೋಗಿ ಇಲಾಖೆಯ 207 ಕಾಮಗಾರಿ, ಸಣ್ಣ ನೀರಾವರಿ ಇಲಾಖೆಯ 111 ಕಾಮಗಾರಿ ಒಳಗೊಂಡಂತೆ 318 ಕಾಮಗಾರಿ ಹಾನಿಯಾಗಿದ್ದು 306.69 ಲಕ್ಷ ರೂ. ಹಾನಿಯ ಅಂದಾಜು ಮಾಡಲಾಗಿದೆ. ಈ ಪೈಕಿ 29.84 ಕೋಟಿ ರೂ.ಗೆ ಅನುಮೋದಿಸಲಾಗಿದೆ ಎಂದು ವಿವರಿಸಿದರು.
        669 ಶಾಲೆಗಳ 1459 ಕೊಠಡಿಗಳು ಹಾನಿಯಾಗಿದ್ದು ಈ ಪೈಕಿ 912 ಕೊಠಡಿಗಳು ತೀವ್ರವಾಗಿ ಹಾನಿಯಾಗಿವೆ. 254 ಕೊಠಡಿಗಳನ್ನು ನೆಲಸಮಮಾಡಿ ಪುನರ್ ನಿರ್ಮಾಣ ಮಾಡಬೇಕಾಗಿದೆ. 275 ಅಂಗನವಾಡಿ ಕಟ್ಟಡಗಳು ಹಾನಿಯಾಗಿವೆ, ಗ್ರಾಮೀಣ ಕುಡಿಯುವ ನೀರಿನ 61 ಕಾಮಗಾರಿಗಳು ಹಾನಿಯಾಗಿವೆ ಎಂದು ಹೇಳಿದರು.
        ಆಗಸ್ಟ್ ಮಾಹೆಯಲ್ಲಿ ಸುರಿದ ಮಳೆಗೆ 1,65,749 ಹೆಕ್ಟೇರ್ ಬೆಳೆ ಹಾಗೂ ಕೃಷಿಭೂಮಿ ಹಾನಿಯಾಗಿದೆ. 158 ಕೋಟಿ ರೂ. ಅಂದಾಜು ನಷ್ಟ ಉಂಟಾಗಿದೆ. ಎಸ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಪ್ರತಿ ಹೆಕ್ಟೇರ್‍ಗೆ 10 ಸಾವಿರದಂತೆ ಹೆಚ್ಚುವರಿ ಪರಿಹಾರ ಘೋಷಿಸಿದ್ದು, ಇದರಿಂದಾಗಿ 152.70 ಕೋಟಿ ರೂ. ಹೆಚ್ಚುವರಿ ಅನುದಾನ ದೊರೆಯಲಿದೆ. ಅಕ್ಟೋಬರ್ ತಿಂಗಳಲ್ಲಿ 11,539 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದು, 8.58 ಕೋಟಿ ರೂ. ಅಂದಾಜು ಹಾನಿಯಾಗಿದೆ.
       ಆಗಸ್ಟ್ ಮಳೆಗೆ 15,224  ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. 19.04 ಕೋಟಿ ರೂ. ನಷ್ಟ ಉಂಟಾಗಿದೆ.  ಎಸ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಘೋಷಿಸಿರುವ 10 ಸಾವಿ ರೂ. ಅನುದಾನದಂತೆ ತೋಟಗಾರಿಕೆ ಬೆಳೆಗಳಿಗೆ 14.99 ಕೋಟಿ ಅನುದಾನ ಬರಲಿದೆ.  ಅಕ್ಟೋಬರ್ ಮಾಹೆಯಲ್ಲಿ 3,558 ಹೆಕ್ಟೇರ್  ಬೆಳೆ ಹಾನಿಯಾಗಿದ್ದು, 4.42 ಕೋಟಿ ರೂ. ಪರಿಹಾರ ಒದಗಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ವಿವರಿಸಿದರು.
        ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ 15.93 ಕೋಟಿ ಅನುದಾನವಿದ್ದು, ಸರ್ಕಾರದಿಂದ 90 ಕೋಟಿ ಬಿಡುಗಡೆಯಾಗಿದೆ. ಒಟ್ಟಾರೆ 109.93 ಕೋಟಿ ರೂ. ಅನುದಾನದಲ್ಲಿ 71.81 ಕೋಟಿ ರೂ. ಅನುದಾನ ಖರ್ಚಾಗಿದೆ. 34.12 ಕೋಟಿ ರೂ. ಅನುದಾನ ಉಳಿಕೆಯಾಗಿದೆ. 24103 ಲಕ್ಷ ರೂ. ಅನುದಾನ  ಬೇಕಾಗಿದೆ ಎಂದು ತಿಳಿಸಿದರು.
 
     ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಸಂಸದ ಶಿವಕುಮಾರ ಉದಾಸಿ,  ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಆದಿತ್ಯ ಆಮ್ಲಾನ್ ಬಿಸ್ವಾಸ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link