ಆತುರದ ಕ್ರಮ ಮತ್ತು ಸಹಜ ನ್ಯಾಯ ವ್ಯವಸ್ಥೆ..

ತುಮಕೂರು:

ವಿಶೇಷ ಲೇಖನ :ಸಾ.ಚಿ.ರಾಜಕುಮಾರ

     2012 ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣದ ನಂತರ ದೇಶದಲ್ಲಿ ಹೆಚ್ಚು ಗಮನ ಸೆಳದದ್ದು ಹೈದರಾಬಾದ್‍ನ ಪಶು ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ.

     ಈ ಘಟನೆಯ ನಂತರ ದೇಶಾದ್ಯಂತ ತರಾವರಿ ಚರ್ಚೆಗಳು ನಡೆದಿವೆ. ವ್ಯಾಪಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೆಲವೊಂದು ರಾಜ್ಯಗಳಲ್ಲಿ ಕಾನೂನಿಗೆ ಸಂಬಂಧಿಸಿದ ಬದಲಾವಣೆಗಳನ್ನು ತರಲಾಗುತ್ತಿದೆ. ಆಂಧ್ರ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಮಸೂದೆಯೊಂದು ಜಾರಿಗೆ ಬಂದಿದೆ. ಇದು ಹಲವು ಜಿಜ್ಞಾಸೆಗಳಿಗೂ ಕಾರಣವಾಗಿವೆ.

     ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಲು 21 ದಿನಗಳ ಗಡುವು ವಿಧಿಸುವ ಮೂಲಕ ಆಂಧ್ರ ಪ್ರದೇಶದ ಸಚಿವ ಸಂಪುಟವು ಡಿ.12 ರಂದು ಒಪ್ಪಿಗೆ ನೀಡಿದೆ. ಆ ಮೂಲಕ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದ್ದು, ಇನ್ನು ಮುಂದೆ ಎ.ಪಿ.ದಿಶಾ ಕಾಯಿದೆ ಎಂಬ ನಾಮಾಂಕಿತದೊಂದಿಗೆ ಇದು ಕಾನೂನಾಗಿ ಹೊರಬರಲಿದೆ.

    ಪಕ್ಕದ ತೆಲಂಗಾಣದಲ್ಲಿ ನಡೆದ ಅತ್ಯಾಚಾರ ಹಿನ್ನೆಲೆಯಲ್ಲಿ ಈ ಕಾಯಿದೆ ರೂಪಿಸಲಾಗುತ್ತಿದ್ದು, ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ನಿಗದಿಪಡಿಸುವ ಪ್ರಸ್ತಾಪವೂ ಇದರಲ್ಲಿ ಸೇರಿದೆ. ವಿಶೇಷ ನ್ಯಾಯಾಲಯ ಸ್ಥಾಪಿಸಲು ಅವಕಾಶ ಮಾಡಿಕೊಡುವ ಕರಡು ಮಸೂದೆಗೂ ಸಂಪುಟ ಒಪ್ಪಿಗೆ ನೀಡಿದೆ.

     ಮೇಲ್ನೋಟಕ್ಕೆ ಇದು ಸ್ವಾಗತಾರ್ಹ ಸಂಗತಿಯಾದರೂ ಕಾನೂನಿನ ಅನುಷ್ಠಾನ ಸಾಧ್ಯವೆ ಎಂಬ ಪ್ರಶ್ನೆ ಏಳುತ್ತದೆ. ಯಾವುದೇ ಒಂದು ಘಟನೆ ಜರುಗಿದ ಕೂಡಲೇ ಆ ಬಗ್ಗೆ ಎಫ್.ಐ.ಆರ್. ದಾಖಲಾಗಬೇಕು. ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಕೆಯಾಗಬೇಕು. ಆನಂತರವಷ್ಟೇ ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆಗಳು ನಡೆದು ತೀರ್ಪು ಪ್ರಕಟವಾಗಬೇಕು.

      ವಸ್ತುಸ್ಥಿತಿ ಮತ್ತು ನಮ್ಮ ಕಾನೂನಿನ ವ್ಯವಸ್ಥೆ ಹೀಗಿರುವಾಗ ಕೆಲವೇ ದಿನಗಳಲ್ಲಿ ಪ್ರಕರಣ ಇತ್ಯರ್ಥವಾಗಬೇಕು ಎಂಬ ಗಡುವು ನೀಡುವುದು ಸದ್ಯದ ವ್ಯವಸ್ಥೆಯಲ್ಲಿ ಸಾಧ್ಯವೇ ಎನ್ನುವ ಪ್ರಶ್ನೆಗಳು ಎದುರಾಗುತ್ತವೆ. ಪ್ರಸ್ತುತ ಇರುವ ಕಾನೂನಿನಂತೆ ಒಂದು ಪ್ರಥಮ ವರ್ತಮಾನ ವರದಿ ದಾಖಲಾದ ನಂತರ (ಸಿ.ಆರ್.ಪಿ.ಸಿ. ಕಲಂ 154) 60 ದಿನಗಳ ಒಳಗೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಬೇಕು.

      ಕೆಳ ಹಂತದ ನ್ಯಾಯಾಲಯಗಳ ಪ್ರಕರಣಗಳಾದರೆ 60 ದಿನ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡುವ ಪ್ರಕರಣಗಳಾದರೆ 90 ದಿನಗಳ ಅವಕಾಶವಿರುತ್ತದೆ. ಈ ಅವಧಿಯಲ್ಲಿ ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪೊಲೀಸರ ತನಿಖೆ ಮತ್ತು ಸಾಕ್ಷಿಗಳ ವಿಚಾರಣೆ ಮತ್ತು ಸಂಗ್ರಹಕ್ಕಾಗಿಯೇ ಈ ಅವಧಿ ನೀಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರವೇ ನ್ಯಾಯಾಲಯ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತದೆ.

      ಮೇಲಿನ ಅಂಶಗಳನ್ನು ಗಮನಿಸಿದಾಗ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲೆಂದೇ ಪೊಲೀಸರಿಗೆ ಸಮಯ ನೀಡಲಾಗುತ್ತದೆ. ಇನ್ನು ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾದಾಗ ಪ್ರಾಸಿಕ್ಯೂಷನ್ ವಿಚಾರಣೆ ಮತ್ತು ಆರೋಪಿ ಪರ ವಕೀಲರ ವಿಚಾರಣೆಗಳು ನಡೆದು, ವಾದ ವಿವಾದಗಳು ಮುಗಿದ ನಂತರವಷ್ಟೇ ತೀರ್ಪು ಪ್ರಕಟಿಸಬೇಕು. ಇಷ್ಟೆಲ್ಲಾ ಪ್ರಕ್ರಿಯೆಗಳು ಇರುವಾಗ ಅತ್ಯಂತ ಕಡಿಮೆ ಅವಧಿಯಲ್ಲಿ ತೀರ್ಪು

ಪ್ರಕಟಿಸಲು ಸಾಧ್ಯವೇ?

       ಪೊಲೀಸರು ನಡೆಸಿದ ಎನ್‍ಕೌಂಟರ್ ಕ್ರಮದ ಬಗ್ಗೆ ದೇಶವ್ಯಾಪಿ ಚರ್ಚೆಗಳು ಆರಂಭವಾಗಿವೆ. ಅಪರಾಧಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕು ಎಂದು ಬಹುಪಾಲು ಜನ ಬಯಸುವುದು ಸಹಜವೆ. ಈ ಕಾರಣಕ್ಕೆ ಎನ್‍ಕೌಂಟರ್‍ನಂತಹ ಪ್ರಕ್ರಿಯೆಗಳನ್ನು ಹಲವರು ಸ್ವಾಗತಿಸುತ್ತಿದ್ದಾರೆ. ಆದರೆ ಇವೆಲ್ಲ ನಮ್ಮ ಸಹಜ ಕಾನೂನಿನ ವ್ಯವಸ್ಥೆಗೆ ವಿರುದ್ಧ ಎಂಬುದು ಹಾಗೂ ಈ ಪ್ರಕ್ರಿಯೆ ಅಸಂಬದ್ಧ ಎಂಬುದು ನ್ಯಾಯಾಂಗ ಕ್ಷೇತ್ರದಲ್ಲಿ ಇರುವವರಿಗಷ್ಟೇ ಗೊತ್ತು. ನ್ಯಾಯವನ್ನು ಮತ್ತೊಂದು ಮಾರ್ಗದಲ್ಲಿ ಪಡೆದುಕೊಳ್ಳಲು ಹೋದರೆ ಅದರಿಂದ ಎದುರಾಗಬಹುದಾದ ಅಪಾಯಗಳೇನು ಎಂಬುದು ಈ ವರ್ಗದ ಜನರಿಗೆ ತಿಳಿದಿದೆ. ಈ ಕಾರಣಕ್ಕಾಗಿಯೇ ಎನ್‍ಕೌಂಟರ್‍ನಂತಹ ಪ್ರಕ್ರಿಯೆಗಳಿಗೆ ವಿರೋಧವಿದೆ.

        ಆದರೆ ಜನರಿಗೆ ಬೇಕಾಗಿರುವುದು ಅಪರಾಧಿಗಳಿಗೆ ಶಿಕ್ಷೆ. ನಮ್ಮ ವ್ಯವಸ್ಥೆಯಲ್ಲಿ ಅಷ್ಟು ಸುಲಭವಾಗಿ ಶಿಕ್ಷೆಯಾಗುತ್ತಿಲ್ಲ ಎಂಬ ಅಸಮಾಧಾನ ಇದ್ದೇ ಇದೆ. ಈ ಅಸಮಾಧಾನವೇ ತಕ್ಷಣದ ನ್ಯಾಯದಾನಕ್ಕೆ ಒಪ್ಪಿಕೊಳ್ಳುವ ಮನಸ್ಥಿತಿಗೆ ಕಾರಣವಾಗುತ್ತಿದೆ. ಇವೆಲ್ಲವನ್ನೂ ಅವಲೋಕಿಸಿದಾಗ ನಮ್ಮ ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಸುಧಾರಣಾತ್ಮಕ ಕ್ರಮಗಳು ಆಗಲೇಬೇಕಿದೆ.

       ನ್ಯಾಯಾಲಯದಲ್ಲಿನ ಪ್ರಕರಣಗಳು ಬೇಗನೆ ಇತ್ಯರ್ಥವಾಗಲೆಂದು 2000ನೇ ಇಸವಿಯಲ್ಲಿ ತ್ವರಿತ ವಿಲೇವಾರಿ ನ್ಯಾಯಾಲಯಗಳ ವ್ಯವಸ್ಥೆ ಜಾರಿಗೆ ತರಲಾಯಿತು. 2012 ರಲ್ಲಿ ನಡೆದ ನಿರ್ಭಯ ಪ್ರಕರಣದ ನಂತರ ರಚಿತವಾದ ಜಸ್ಟೀಸ್ ವರ್ಮಾ ಕಮಿಟಿಯು ಹಲವಾರು ಕಾನೂನು ಕ್ರಮಗಳಿಗೆ ಶಿಫಾರಸ್ಸು ಮಾಡಿತು. ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ತ್ವರಿತ ವಿಲೇವಾರಿ ನ್ಯಾಯಾಲಯಗಳ ಸ್ಥಾಪನೆಯ ಬಗ್ಗೆ ಹೇಳಿತು. ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ನ್ಯಾಯಾಲಯಗಳು ಸ್ಥಾಪನೆಗೊಂಡವು. ಇನ್ನು ಕೆಲವು ಕಡೆ ಇರುವ ತ್ವರಿತ ವಿಲೇವಾರಿ ನ್ಯಾಯಾಲಯಗಳಿಗೆ ಆ ಪ್ರಕರಣಗಳನ್ನು ವರ್ಗಾಯಿಸಲಾಯಿತು.

      ಮತ್ತೊಂದು ಮಹತ್ವದ ಸಂಗತಿ ಎಂದರೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಯಿತು. ಇನ್ನೂ ಹಲವಾರು ಸುಧಾರಣಾ ಕ್ರಮಗಳ ಜಾರಿಗೆ ಶಿಫಾರಸ್ಸು ಮಾಡಲಾಯಿತು. ಇದಕ್ಕಾಗಿಯೇ ನಿರ್ಭಯಾ ನಿಧಿ ಸ್ಥಾಪಿಸಲಾಯಿತು. 2013 ರಲ್ಲಿ ಅಪರಾಧಿಕ ಪ್ರಕ್ರಿಯ ಸಂಹಿತೆಗೆ ತಿದ್ದುಪಡಿಯನ್ನು ಸಹ ತರಲಾಯಿತು.

      ಏನೆಲ್ಲಾ ಕಾನೂನುಗಳು ಜಾರಿಯಾಗಬಹುದು, ತಿದ್ದುಪಡಿಗಳಾಗಬಹುದು. ಆದರೆ ವಿಳಂಬ ಗತಿಯಿಲ್ಲದೆ ತ್ವರಿತವಾಗಿ ಪ್ರಕರಣಗಳು ಇತ್ಯರ್ಥವಾಗಬೇಕು. ಸಾಕ್ಷಿದಾರರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಇವೆಲ್ಲ ಸಾಧ್ಯವಾಗಲು ನಮ್ಮ ಕಾನೂನಿನ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆಯೂ ಅಗತ್ಯವಿದೆ. ಎಫ್.ಐ.ಆರ್. ದಾಖಲಾಗಿ ಸಮರ್ಪಕ ತನಿಖೆ ನಡೆದು ಚಾರ್ಜ್‍ಶೀಟ್ ಸಲ್ಲಿಸುವವರೆಗೆ, ನ್ಯಾಯಾಲಯದಲ್ಲಿ ಪ್ರಕರಣಗಳು ಇತ್ಯರ್ಥವಾಗುವವರೆಗೆ ಗಮನ ಹರಿಸುವಂತಹ ವ್ಯವಸ್ಥೆಗಳು ರೂಪುಗೊಳ್ಳಬೇಕು.

       ಘಟನೆಯ ಸಂದರ್ಭದಲ್ಲಿ ಇರುವ ಬಿಸಿ ಕ್ರಮೇಣ ತಣ್ಣಗಾಗುತ್ತದೆ. ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಪರಿಣಮಿಸುವ ಸಂದರ್ಭಗಳು ಹೆಚ್ಚು. ಇದರಿಂದಾಗಿ ನ್ಯಾಯಾಲಯದಲ್ಲಿ ಸಾಕಷ್ಟು ಪ್ರಕರಣಗಳು ಬಿದ್ದು ಹೋಗುತ್ತಿವೆ. ರುಜುವಾತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗುತ್ತಿದೆ. ವೈಫಲ್ಯಗಳು ಆಗುತ್ತಿರುವುದೆಲ್ಲಿ ಎಂಬುದರ ಬಗ್ಗೆ ಪರಿಣಿತರು, ಸಾಮಾಜಿಕ ಕಾರ್ಯಕರ್ತರು, ಕಾನೂನು ತಜ್ಞರು ಚಿಂತಿಸಬೇಕಿದೆ. ಆತುರದ ನಿರ್ಧಾರಗಳಿಂದ ಯಾವುದೇ ಪ್ರಯೋಜನವಾಗದು. ಶಿಕ್ಷೆಯನ್ನು ಜೀವಾವಧಿಯಿಂದ ಗಲ್ಲಿನವರೆಗೆ ವಿಸ್ತರಿಸಿದರೂ ಅದು ಕೊನೆಯ ಪ್ರಯತ್ನವಷ್ಟೇ. ಅದಕ್ಕೂ ಮುಂಚಿತವಾಗಿ ಆಗಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ಅಗತ್ಯ.

      ಆರೋಪ-ಅಪ ರಾಧಗಳೆಲ್ಲ ನಮ್ಮ ಕಾನೂನಿನ ವ್ಯವಸ್ಥೆ ಅಡಿಯಲ್ಲೇ ಇತ್ಯರ್ಥವಾಗಬೇಕು. ಕಾನೂನಿನ ಆಚೆ ಯಾವುದೇ ಪ್ರಕ್ರಿಯೆಗಳನ್ನು ಊಹಿಸಲೂ ಸಾಧ್ಯವಿಲ್ಲ. ಅದು ಮತ್ತೊಂದು ಅವಘಡಗಳಿಗೆ ಕಾರಣವಾಗಬಹುದು. ನಮ್ಮಲ್ಲಿ ಕೇವಲ ಶಿಕ್ಷೆಯನ್ನು ಹೆಚ್ಚಿಸಿದರೆ ಸಾಲದು. ವ್ಯವಸ್ಥೆಯಲ್ಲಿರುವ ಲೋಪದೋಷಗಳು ಮೊದಲು ಸರಿಯಾಗ ಬೇಕು. ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಮುಕ್ತ ಮನಸ್ಸಿನಿಂದ ನ್ಯಾಯೋಚಿತವಾಗಿ ಕರ್ತವ್ಯ ನಿರ್ವಹಿಸಬೇಕು. ಕೇವಲ ಎಫ್.ಐ.ಆರ್. ದಾಖಲಾದರೆ ಸಾಲದು. ಅಷ್ಟೇ ಕಾಳಜಿಯಿಂದ ಚಾರ್ಜ್‍ಶೀಟ್ ಸಲ್ಲಿಕೆಯಾಗಬೇಕು. ಸೂಕ್ತ ಸಾಕ್ಷ್ಯಾಧಾರಗಳು, ಸಾಕ್ಷಿಗಳು ವಿಚಾರಣೆಯ ಕೊನೆಯ ಹಂತದವರೆಗೂ ಇರುವಂತೆ ನೋಡಿಕೊಳ್ಳಬೇಕು. ಅವರಿಗೆ ರಕ್ಷಣೆಯೂ ಇರಬೇಕು. ಇವೆಲ್ಲವೂ ಒಂದು ವರ್ಷ ಅಥವಾ ಒಂದೂವರೆ ವರ್ಷದ ಒಳಗಡೆ ಇತ್ಯರ್ಥಗೊಳ್ಳುವಂತಾ ಗಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link