ಮುಂದಿನ ಚುನಾವಣಾ ಪ್ರಚಾರದ ಕಾರ್ಯಗಳಲ್ಲಿ ಎಸ್.ಪಿ.ಮುದ್ದಹನುಮೇಗೌಡರು ಭಾಗಿಯಾಗಲಿದ್ದಾರೆ : ಆರ್.ರಾಜೇಂದ್ರ

ತುಮಕೂರು

     ಕಳೆದ ಮೂರ್ನಾಲ್ಕು ದಿನಗಳಿಂದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಜಂಟಿ ಸಮಾವೇಶ ಹಾಗೂ ಸಭೆಗಳನ್ನು ಮಾಡಲಾಗಿದೆ. ಈಗ ಮುಂದಿನ ಚುನಾವಣಾ ಪ್ರಚಾರದ ಕಾರ್ಯಗಳಲ್ಲಿ ಹಾಲಿ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇ ಗೌಡರು ಭಾಗಿಯಾಗಲಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್‍ನ ಉಪಾಧ್ಯಕ್ಷ ಆರ್.ರಾಜೇಂದ್ರ ತಿಳಿಸಿದರು.

      ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನದಂತೆ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರ ಜೆಡಿಎಸ್‍ಗೆ ಬಿಟ್ಟುಕೊಡಬೇಕಾಗಿದ್ದು, ಅವರ ಗೆಲುವಿನ ಜವಾಬ್ದಾರಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು , ಕಾರ್ಯಕರ್ತರು ಜೆಡಿಎಸ್‍ನ ಮುಖಂಡರೊಂದಿಗೆ ಹೊಂದಾಣಿಕೆ ಮಾಡಿಕೊಂಡು ದೇವೇಗೌಡರನ್ನು ಗೆಲ್ಲಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

      ಈ ಹಿಂದೆ ದೇವೇಗೌಡರ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡದೇ ಇದ್ದಾಗ ಮುದ್ದಹನುಮೇಗೌಡರು ಹಾಲಿ ಸಂಸದರಾಗಿದ್ದು, ಗೆಲುವಿನ ಭರವಸೆಯೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದರು, ನಂತರ ಪಕ್ಷದ ಮುಖಂಡರು ಮುದ್ದಹನುಮೆಗೌಡರೊಂದಿಗೆ ಮಾತನಾಡಿ ಅವರ ಮನವೊಲಿಸಿದ್ದು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಈಗ ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣಾ ಪ್ರಚಾರದ ಕಾರ್ಯಗಳಲ್ಲಿ ಮುದ್ದಹನುಮೆಗೌಡರು ಭಾಗಿಯಾಗಲಿದ್ದು ನಮಗೆ ಆನೆ ಬಲ ಬಂದಂತಾಗುತ್ತದೆ ಎಂದರು.

      ಈ ಚುನಾವಣೆಯ ವೇಳೆಯಲ್ಲಿ ಮೈತ್ರಿ ಪಕ್ಷದಲ್ಲಿನ ಯಾವೊಬ್ಬ ಸಚಿವರಾಗಲಿ, ಶಾಸಕರಾಗಲಿ ವಿರೋಧವಾಗಿ ಮಾತನಾಡುವಾಗ ಎಚ್ಚರವಿರಬೇಕು. ಹೆಚ್ಚು ಕಡಿಮೆ ಮಾತನಾಡಿದರೆ ಸರ್ಕಾರದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಜಿ.ಟಿ.ದೇವೇಗೌಡರ ಹೇಳಿಕೆಗೆ ಆಕ್ರೋಷ ವ್ಯಕ್ತಪಡಿಸಿದ ಅವರು, ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಕಾರ್ಯಕರ್ತರಲ್ಲಿ ಒಂದಾಗಿಲ್ಲ. ಇನ್ನೂ ಕಾರ್ಯಕರ್ತರಲ್ಲಿ ಗೊಂದಲಗಳಿವೆ. ಇವುಗಳನ್ನು ಪರಿಹರಿಸುವ ಕೆಲಸ ಸ್ಥಳೀಯ ಮುಖಂಡರು ಮಾಡುತ್ತಾರೆ. ಒಟ್ಟಾರೆಯಾಗಿ ರಾಜ್ಯದ ಎಲ್ಲಾ ಕೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿಸುವ ಗುರಿಯನ್ನಿಟ್ಟುಕೊಂಡಿದ್ದೇವೆ ಎಂದರು.

      ಏಪ್ರಿಲ್ 8ರಂದು ಕೆ.ಎನ್.ರಾಜಣ್ಣ ನೇತೃತ್ವದಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಭೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮಶ್ವರ್, ಕೆ.ಸಿ.ವೇಣುಗೋಪಾಲ್, ತುಮಕೂರು ಹಾಲಿ ಸಂಸದ ಎಸ್.ಪಿ.ಮುದ್ದಹನುಮೆಗೌಡ ಭಾಗಿಯಾಗಲಿದ್ದಾರೆ.

        ಇದು ಕೇವೆಲ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಡುತ್ತಿರುವ ಸಮಾವೇಶವಾಗಿದ್ದು, ಇದರಲ್ಲಿ ಜೆಡಿಎಸ್ ಪಕ್ಷದ ಮುಖಂಡರಾಗಲಿ, ಕಾರ್ಯಕರ್ತರಾಗಲಿ ಹಾಜರಾಗುವುದಿಲ್ಲ ಎಂದು ತಿಳಿಸಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಮುಖಂಡರು ಜೆಡಿಎಸ್ ಮುಖಂಡರೊಂದಿಗೆ ಉತ್ತಮ ಭಾಂದವ್ಯ ಬೆಳೆಸಿ ಹೆಚ್ಚಿನ ಮತಗಳಿಂದ ದೇವೇಗೌಡರನ್ನು ಜಯಶೀಲರನ್ನಾಗಿಸಬೇಕು. ಈ ಬಗ್ಗೆ ಹೈಕಮಾಂಡ್ ಆದೇಶವಿದ್ದು, ಅದರಂತೆ ನಾವು ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

      ಪತ್ರಿಕಾಗೋಷ್ಠಿಯಲ್ಲಿ ಭರತ್‍ಗೌಡ, ಶ್ರೀನಿವಾಸ್, ಯುವ ಕಾಂಗ್ರೆಸ್‍ನ ನೂತನ ಕಾರ್ಯಧ್ಯಜ್ಷರಾದ ಶಶಿಧರ್, ಎನ್‍ಎಸ್‍ಯುಐನ ಕಾಯಾಧ್ಯಕ್ಷ ಉಲ್ಲಾಸ್‍ಗೌಡ, ವಕ್ಫ್ ಬೋರ್ಡ್‍ನ ಅಧ್ಯಕ್ಷರಾದ ಮುಷ್ತಾಕ್ ಅಹಮ್ಮದ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap