ಹುಳಿಯಾರು
ವೃದ್ಧಾಪ್ಯ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಸೇರಿದಂತೆ ಹಲವು ಬಗೆಯ ಸಾಮಾಜಿಕ ಭದ್ರತೆ ಯೋಜನೆಗೆ ಇನ್ನು ಮುಂದೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.ಅವರು ಹುಳಿಯಾರು ಹೋಬಳಿಯ ದಸೂಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಧ್ಯವರ್ತಿಗಳ ಹಾವಳಿ, ಅಧಿಕಾರಿಗಳ ಅನಗತ್ಯ ವಿಳಂಬ ಧೋರಣೆ ಹಾಗೂ ಅರ್ಜಿದಾರರ ಕಚೇರಿ ಅಲೆದಾಟ ತಪ್ಪಿಸುವ ಸಲುವಾಗಿ ಆನ್‍ಲೈನ್‍ನಲ್ಲಿ ಅರ್ಜಿದಾರರು ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಮನೆ ಬಾಗಿಲಿಗೆ ಬಂದು ಯೋಜನೆಗೆ ತಮ್ಮ ಅರ್ಹತೆಯ ಬಗ್ಗೆ ದೃಢಪಡಿಸಿಕೊಳ್ಳುತ್ತಾರೆ. ಅವರು ತಮ್ಮ ಅರ್ಜಿಯನ್ನು ಸಿಂಧು ಮಾಡಿದ ನಂತರದ ತಿಂಗಳಲ್ಲಿ ಮಾಸಾಶನ ಆರಂಭವಾಗಲಿದೆ ಎಂದು ಅವರು ವಿವರಿಸಿದರು.
ತಾಲ್ಲೂಕಿನಲ್ಲಿ ಇಪ್ಪತ್ತು ವರ್ಷಗಳಿಂದ ಬಗರ್ ಹುಕುಂ ಅರ್ಜಿ ಇತ್ಯರ್ಥವಾಗದೆ ರೈತರಿಗೆ ಅನನುಕೂಲವಾಗಿದೆ. ಈ ಹಿಂದೆ ತಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮಂಜೂರು ಮಾಡಿದ್ದ ಅರ್ಜಿ ಸಹ ವಿಲೆ ಮಾಡದೆ ನಿರ್ಲಕ್ಷಿಸಲಾಗಿದೆ. ಈ ಬಗ್ಗೆ ರೈತರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ಸಹ ಮಾಡಿದ್ದರೂ ಅಂದಿನ ತಹಸೀಲ್ದಾರ್ ಸ್ಪಂದಿಸಲಿಲ್ಲ. ಈಗ ಮತ್ತೆ ಮತದಾರರು ನನಗೆ ಅಧಿಕಾರ ಕೊಟ್ಟಿದ್ದು, ಬಗರ್ ಹಕುಂ ಸಾಗುವಳಿ ಚೀಟಿ ಕೊಡುವುದು ನನ್ನ ಜವಾಬ್ದಾರಿಯಾಗಿದ್ದು, ಶೀಘ್ರದಲ್ಲೇ 2 ದಶಕಗಳ ಈ ಸಮಸ್ಯೆಗೆ ಮುಕ್ತಿ ಹಾಡುವುದಾಗಿ ಅವರು ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
