ಹಾವೇರಿ
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಐ.ಎ.ಎಸ್.ಅಧಿಕಾರಿ ಕೆ.ಶ್ರೀನಿವಾಸ ಅವರ ನೇತೃತ್ವದ ಅಧಿಕಾರಿಗಳ ತಂಡ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ಒಳಾಂಗಣ ಕ್ರೀಡಾಂಗಣದಲ್ಲಿ ಕೈಗೊಂಡಿರುವ ಕಾಮಗಾರಿ, ಈಜುಕೊಳ ಹಾಗೂ ವಿವಿಧ ಕ್ರೀಡಾ ಅಂಕಣಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪುನಶ್ಚೇತನಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಸೋಮವಾರ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಬೆಂಗಳೂರಿನ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಯುಕ್ತ ಶ್ರೀನಿವಾಸ ಅವರು ಭೇಟಿ ನೀಡಿ ಪರಿಶೀಲಿಸಿದರು.2010ನೇ ಸಾಲಿನಲ್ಲಿ ಹಾವೇರಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣ ಕಟ್ಟಡದ ದಕ್ಷಿಣ ಭಾಗದ ಗೋಡೆ ಮತ್ತು ಮೇಲ್ಚಾವಣೆ ಕುಸಿದುಬಿದ್ದಿದ್ದು ಈ ಗೋಡೆಯ ಪುನರ್ ನಿರ್ಮಾಣ ಹಾಗೂ ಒಳಾಂಗಣ ಕ್ರೀಡಾಂಗಣದ ಶೆಟಲ್ ಬ್ಯಾಡ್ಮಿಂಟ್ ಕೋರ್ಟ್‍ಗಳ ಮರದ ನೆಲಹಾಸು ಹಾಗೂ ಟೈಲ್ಸ್, ಕೂರಲು ಆಸನ ವ್ಯವಸ್ಥೆ ಹಾಗೂ ಈಜುಕೋಳದ ನವೀಕರಣ ಕಾಮಗಾರಿಗೆಯನ್ನು ರೂ.71.62 ಲಕ್ಷಗಳಲ್ಲಿ ಕೈಗೊಂಡಿದ್ದು ಈ ಕಾಮಗಾರಿಯ ಪರಿಶೀಲನೆ ನಡೆಸಿ ಅಗತ್ಯ ಸಲಹೆ ನೀಡಿದರು.
ಪುನರ್ ನಿರ್ಮಾಣಗೊಂಡಿರುವ ದಕ್ಷಿಣ ಭಾಗದ ಗೋಡೆಯ ತಾಂತ್ರಿಕ ಗುಣಮಟ್ಟದಿಂದ ನಿರ್ಮಾಣವಾಗಿರುವ ಕುರಿತಂತೆ ಮೂರನೇ ಸಂಸ್ಥೆಯಿಂದ ತಾಂತ್ರಿಕ ಪರೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಪುನರ್ ನಿರ್ಮಾಣವಾಗಿರುವ ದಕ್ಷಿಣ ಗೋಡೆ ಹೊರತುಪಡಿಸಿ ಉಳಿದ ಮೂರು ಬದಿಯ ಗೋಡೆಗಳ ಗುಣಮಟ್ಟವನ್ನು ತಾಂತ್ರಿಕ ಸಮಿತಿಯಿಂದ ಪರಿಶೀಲಿಸಿ ವಿಸ್ತತ ಕ್ರಿಯಾಯೋಜನೆ ಅನುಸಾರ ತಾಂತ್ರಿಕ ಗುಣಮಟ್ಟದಿಂದ ಕಾಮಗಾರಿ ನಡೆದಿರುವ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದರು.
ಗಾಳಿಯ ಒತ್ತಡದಿಂದ ಗೋಡೆ ಹಾಗೂ ಛಾವಣಿಗೆ ಯಾವುದೇ ಹಾನಿಯಾಗದಂತೆ ಕೈಗಾರಿಕಾ ಶೆಡ್‍ಗಳಿಗೆ ಒಳವಡಿಸುವ ಫ್ಯಾನ್‍ಗಳನ್ನು ಅಳವಡಿಸಲಾಗಿದೆ. ಸಾಗವಾನಿ ಮರದ ಕಟ್ಟಿಗೆಯಿಂದ ನೆಲಹಾಸು ಸಿದ್ಧಪಡಿಸಲು ಕ್ರಮವಹಿಸಲಾಗಿದೆ. ಈಗಾಗಲೇ ಪುನರ್ ನಿರ್ಮಾಣ ಮಾಡಿರುವ ಕಾಮಗಾರಿಯ ಗುಣಮಟ್ಟವನ್ನು ತಟಸ್ಥ ಮೂರನೇ ತಾಂತ್ರಿಕ ಸಂಸ್ಥೆಯಿಂದ ಪರಿಶೀಲನೆ ನಡೆಸಿ ಪ್ರಮಾಣಪತ್ರ ಪಡೆಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಕ್ರೀಡಾಂಗಣದ ಹೊರವಲಯದ ಟೆನ್ನಿಸ್ ಕೋರ್ಟ್ ಹಾಗೂ ಸ್ಕೇಟಿಂಗ್ ಕೋರ್ಟ್‍ಗಳ ನವೀಕರಣ ಹಾಗೂ ಬಣ್ಣ ಬಳಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಸ್ನೋಕರ್ ಹಾಗೂ ಜಿಮ್ ವಿಭಾಗವನ್ನು ಆಧುನಿಕರಣಗೊಳಿಸಲು ಹಾಗೂ ವಿಸ್ತರಿಸಲು ಆಯುಕ್ತರು ಸಲಹೆ ನೀಡಿದರು.
ಕ್ರೀಡಾಂಗಣದ ಟ್ರ್ಯಾಕ್‍ನ್ನು ಪುನರ್ ನವೀಕರಿಸಬೇಕು. ಮುಖ್ಯ ದ್ವಾರದ ಒಳಬದಿಯಲ್ಲಿರುವ ಪ್ರೇಕ್ಷಕರ ಗ್ಯಾಲರಿಯ ಮೇಲ್ಚಾವಣೆ ಬದಲಾವಣೆ, ಧ್ವಜಾರೋಹಣ ಕಟ್ಟಡದ ಮರು ವಿನ್ಯಾಸ ಹಾಗೂ ನವೀಕರಣ, ಮುಖ್ಯ ಕಟ್ಟಡದ ಮೀಟಿಂಗ್ ಹಾಲ್ ನವೀಕರಣ, ಆಸನ ವ್ಯವಸ್ಥೆ, ಸುಣ್ಣ-ಬಣ್ಣಗೊಳಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಕುರಿತಂತೆ ಹಾಗೂ ಹಾವೇರಿಯಲ್ಲಿ ಹಾಕಿ ಕ್ರೀಡಾಂಗಣಕ್ಕೆ ನಾಲ್ಕು ಎಕರೆ ಜಾಗೆಯನ್ನು ಕಾಯ್ದಿರಿಸಲಾಗಿದೆ. ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಕ್ರೀಡಾ ಆಯುಕ್ತರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಸಂಘಟನೆಗಳ ಪ್ರತಿನಿಧಿಗಳು, ಕ್ರೀಡಾಂಗಣಕ್ಕೆ ವಿವಿಧ ಸೌಲಭ್ಯಗಳ ಒದಗಿಸುವ ಕುರಿತಂತೆ ಆಯುಕ್ತರಿಗೆ ಮೌಖಿಕವಾಗಿ ಮನವಿ ಮಾಡಿಕೊಂಡರು.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ರಮೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಭಾವನಮೂರ್ತಿ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಶಾಕೀರ ಅಹ್ಮದ್, ಕೆ.ಸಿ. ಕಾಂತರಾಜು ಇತರರು ಉಪಸ್ಥಿತರಿದ್ದರು.