ಹೊರಗಿನವರಿಗೆ ಮಣೆ : ಶ್ರೀರಾಮುಲು ಮುನಿಸು

ಬಳ್ಳಾರಿ

       ಬರುವ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲು ಕ್ಷೇತ್ರದಿಂದ ಹೊರಗಿನವರನ್ನು ಕಣಕ್ಕಿಳಿಸಲು ಬಿಜೆಪಿ ಗಂಭೀರವಾಗಿ ಚಿಂತನೆ ನಡೆಸಿದೆ. ಇದು ಶಾಸಕ ಬಿ. ಶ್ರೀರಾಮುಲು ಅವರ ಮುನಿಸಿಗೆ ಕಾರಣವಾಗಿದೆ.

       ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡ ನಂತರ ಶಾಸಕ ಜಗದೀಶ್ ಶೆಟ್ಟರ್ ಅವರಿಗೆ ಪಕ್ಷವು, ಜಿಲ್ಲೆಯ ಚುನಾವಣೆ ಉಸ್ತುವಾರಿ ಹೊಣೆ ವಹಿಸಿತು. ಈಗ, ಬರುವ ಸಾರ್ವತ್ರಿಕ ಚುನಾವಣೆಗೆ ಹೊರಗಿನವರನ್ನು ಕಣಕ್ಕಿಳಿಸಲು ಮುಂದಾಗಿದೆ. ಇದು ಸಹಜವಾಗಿಯೇ ಶ್ರೀರಾಮುಲು ಅವರನ್ನು ಕೆರಳಿಸಿದೆ.

       ರಾಜ್ಯದಲ್ಲಿ ಸರ್ಕಾರ ರಚಿಸಬೇಕೆಂಬ ಹೆಬ್ಬಯಕೆ ಹೊಂದಿರುವ ಬಿಜೆಪಿ, ಶ್ರೀರಾಮುಲು ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಲೋಕಸಭೆ ಚುನಾವಣೆಗೆ ಅವರನ್ನು ನಿಲ್ಲಿಸದಿರಲು ತೀರ್ಮಾನಿಸಿದೆ. ಅವರ ಸಹೋದರಿ ಜೆ. ಶಾಂತಾ ಅವರು 2.40 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಉಪಚುನಾವಣೆಯಲ್ಲಿ ಸೋತಿರುವುದರಿಂದ ಮತ್ತೊಮ್ಮೆ ಅವರಿಗೆ ಟಿಕೆಟ್ ಕೊಡದಿರಲು ಪಕ್ಷ ನಿರ್ಧರಿಸಿದೆ. ಅಷ್ಟೇ ಅಲ್ಲ, ಶ್ರೀರಾಮುಲು ಅವರ ಆಪ್ತರಿಗೂ ಟಿಕೆಟ್ ಸಿಗದಿರುವುದು ಖಚಿತವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

       ಈ ಹಿಂದೆ ನಡೆದ ಎಲ್ಲ ಚುನಾವಣೆಗಳಲ್ಲಿ ಶ್ರೀರಾಮುಲು ಅವರು ಹೇಳಿದ ವ್ಯಕ್ತಿಗೆ ಪಕ್ಷ ಟಿಕೆಟ್ ಕೊಟ್ಟಿದೆ. ಆದರೆ, ಹಿಂದಿನ ಚುನಾವಣೆಯಲ್ಲಿ ಭಾರಿ ಅಂತರದಿಂದ ಸೋತು, ಪಕ್ಷ ತೀವ್ರ ಮುಜುಗರ ಅನುಭವಿಸಿತು. ಈ ಸಲ ಹೇಗಾದರೂ ಮಾಡಿ ಕ್ಷೇತ್ರವನ್ನು ಮರಳಿ ವಶಪಡಿಸಿಕೊಳ್ಳಬೇಕೆಂದು ಬಿಜೆಪಿ ಯೋಚಿಸುತ್ತಿದೆ. ಅದಕ್ಕಾಗಿಯೇ ಶ್ರೀರಾಮುಲು ಅವರ ಆಪ್ತರ ಬದಲಾಗಿ, ಸತೀಶ ಜಾರಕಿಹೊಳಿ ಅವರ ಸಹೋದರ ಲಖನ್ ಅವರನ್ನು ಕಣಕ್ಕಿಳಿಸುವ ಕುರಿತು ಗಂಭೀರ ಚಿಂತನೆ ನಡೆಯುತ್ತಿದೆ. ?ಈ ಸಂಬಂಧ ಪಕ್ಷದ ಉನ್ನತ ಮಟ್ಟದಲ್ಲಿ ಈಗಾಗಲೇ ತೀರ್ಮಾನಕ್ಕೂ ಬರಲಾಗಿದೆ? ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಬಿಜೆಪಿ ಮುಖಂಡರೊಬ್ಬರು ?ಪ್ರಜಾಪ್ರಗತಿ?ಗೆ ತಿಳಿಸಿದ್ದಾರೆ.

       ಈ ವಿಷಯ ಗೊತ್ತಾಗಿರುವುದರಿಂದ ಶ್ರೀರಾಮುಲು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇಲ್ಲಿಯವರೆಗೂ ಅವರು ಬಹಿರಂಗವಾಗಿ ಎಲ್ಲಿಯೂ ಅಸಮಾಧಾನ ಹೊರಹಾಕಿಲ್ಲ. ಆದರೆ, ಅವರ ಆಪ್ತರು, ಬೆಂಬಲಿಗರಿಂದ ಆ ಕೆಲಸ ಮಾಡಿಸುತ್ತಿದ್ದಾರೆ ಎಂದು ಅವರ ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ.

        ಲೋಕಸಭೆ ಚುನಾವಣೆ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಗರದಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶ್ರೀರಾಮುಲು ಅವರ ಆಪ್ತರು ಅಸಮಾಧಾನ ಹೊರ ಹಾಕಿದ್ದರು. ?ಪಕ್ಷದ ಹಿರಿಯ ಮುಖಂಡರು ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ? ಎಂದು ಎಸ್ಟಿ ಜಿಲ್ಲಾ ಮೋರ್ಚಾ ಅಧ್ಯಕ್ಷ ಗುದ್ಲಿ ಪರಶುರಾಮ ಸೇರಿದಂತೆ ಇತರರು ಸಭೆ ಬಹಿಷ್ಕರಿಸಿ ಹೊರ ನಡೆದಿದ್ದರು. ಶ್ರೀರಾಮುಲು ಅವರು ಅಲ್ಲಿಯೇ ಇದ್ದರೂ ಅವರನ್ನು ಸಮಾಧಾನಗೊಳಿಸುವ ಗೋಜಿಗೆ ಹೋಗಿರಲಿಲ್ಲ. ಈಗ ರಾಮುಲು ಅವರ ಇನ್ನೊಬ್ಬ ಆಪ್ತ, ಕಟಿಗಿ ರಾಮಕೃಷ್ಣ, ?ನಾನು ಕೂಡ ಟಿಕೆಟ್ ಆಕಾಂಕ್ಷಿ? ಎಂದು ಹೇಳಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link