ಸಿದ್ಧಗಂಗಾ ಮಠದಲಿ : ಶ್ರೀಗಳ 3ನೇ ಮಾಸಿಕ ಪುಣ್ಯಸ್ಮರಣೆ

ತುಮಕೂರು

       ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರಸ್ವಾಮೀಜಿಗಳ ಮೂರನೇ ಮಾಸಿಕ ಪುಣ್ಯಸ್ಮರಣೆ ಹಾಗೂ ಶ್ರೀಗಳ ಗದ್ದುಗೆ ಪೂಜಾ ಕಾರ್ಯಕ್ರಮ ಶ್ರೀಮಠದಲ್ಲಿ ಭಕ್ತಿಯಿಂದ ನೆರವೇರಿ, ಇಡೀ ದಿನ ಶ್ರೀಗಳ ನಾಮಸ್ಮರಣೆ ಮಾಡಲಾಯಿತು.

      ಡಾ. ಶಿವಕುಮಾರಸ್ವಾಮೀಜಿಗಳು ಜನವರಿ 21ರಂದು ಲಿಂಗೈಕ್ಯರಾದರು. ಪ್ರತಿ ತಿಂಗಳ 21ರಂದು ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ಆಯೋಜಿಸಲಾಗುತ್ತಿದೆ, ಇದರ ಅಂಗವಾಗಿ ಭಾನುವಾರ ಲಿಂಗೈಕ್ಯಶ್ರೀಗಳ 3ನೇ ತಿಂಗಳ ಪುಣ್ಯಸ್ಮರಣೆ ನೆರವೇರಿತು.

       ಶ್ರೀಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಗಳು ಬೆಳಗ್ಗೆ ಶಿವಪೂಜೆ ಮಾಡಿ, ನಂತರ ಉದ್ಧಾನ ಶಿವಯೋಗಿಗಳ ಗದ್ದುಗೆ ಬಳಿ ತೆರಳಿ ಮಹಾ ಮಂಗಳಾರತಿ ಮಾಡಿದರು. ಆನಂತರ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಗದ್ದುಗೆಗೆ ರುದ್ರಾಭಿಷೇಕ ಮತ್ತು ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ಮಠದ ವಿವಿಧ ಶ್ರೀಗಳು ಮಹಾ ಮಂಗಳಾರತಿ ನೆರವೇರಿಸಿ, ಆಶೀರ್ವಾದ ಪಡೆದರು.

        ಶ್ರೀಗಳು ಲಿಂಗೈಕ್ಯರಾಗಿ ಈ ತಿಂಗಳ 21ಕ್ಕೆ 90 ದಿನಗಳಾಗಿದ್ದು, ಆರಾಧನೆ ಪ್ರಯುಕ್ತ ರಾತ್ರಿಯಿಂದಲೇ ಲಿಂಗೈಕ್ಯ ಶ್ರೀಗಳ ಗದ್ದುಗೆ ಬಳಿ ಸಕಲ ಸಿದ್ಧತೆ ಮಾಡಲಾಗಿತ್ತು. ಗದ್ದುಗೆಗೆ ಬಗೆ ಬಗೆಯ ಹೂವುಗಳಿಂದ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು. ಮತ್ತು ಗದ್ದುಗೆ ಹೊರಗಡೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

       ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಳಗಿನಿಂದಲೇ ಮಠಕ್ಕೆ ಬಂದು ಶ್ರೀಗಳ ಗದ್ದುಗೆಗೆ ನಮಸ್ಕರಿಸಿದರು. ಶ್ರೀಗಳು ದರ್ಶನ ನೀಡುತ್ತಿದ್ದ ಗದ್ದುಗೆ ಬಳಿ ಶ್ರೀಗಳ ಪ್ರತಿಮೆ ಇಡಲಾಗಿತ್ತು. ಮಠಕ್ಕೆ ಬಂದ ಭಕ್ತರು ಅಲ್ಲಿಗೆ ತೆರಳಿ ನಮಸ್ಕರಿಸಿ, ಆಶೀರ್ವಾದ ಪಡೆದರು.
ವಿಶೇಷ ದಾಸೋಹ ವ್ಯವಸ್ಥೆ

         ಮಠದಲ್ಲಿ ಯಾವುದೇ ಕಾರ್ಯ ನಡೆದರೂ ವಿಶೇಷ ದಾಸೋಹ ವ್ಯವಸ್ಥೆ ಇದ್ದೇ ಇರುತ್ತದೆ. ಅದರಂತೆ ಭಾನುವಾರ ಬೆಳಗ್ಗೆ ಉಪ್ಪಿಟ್ಟು, ಬಿಸಿಬೆಳೆ ಬಾತ್, ಉಪ್ಪಿನಕಾಯಿ ವಿತರಿಸಲಾಯಿತು. ಲಿಂಗೈಕ್ಯ ಶ್ರೀಗಳಿಗೆ ಪ್ರಿಯವಾದ ಪಾಯಸವನ್ನು ಪ್ರಸಾದವಾಗಿ ಮಠದ ಮಕ್ಕಳಿಗೆ ಹಾಗೂ ಭಕ್ತಾದಿಗಳಿಗೆ ಬಡಿಸುವ ಸಲುವಾಗಿ ಮಧ್ಯಾಹ್ನ ಪಾಯಸದ ಜೊತೆಗೆ ಅನ್ನ ಸಾಂಬಾರ್, ಮಜ್ಜಿಗೆ ಒಳಗೊಂಡ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

        ಗದ್ದುಗೆ ಮುಂಭಾಗದಲ್ಲಿ ಶ್ರೀಗಳ ಕುರಿತ ಭಕ್ತಿಗೀತೆಗಳು, ಭಜನೆ, ಶಿವನಾಮ ಸ್ಮರಣೆ, ಶ್ರೀಗಳ ಕಾಯಕ ಸಾರುವ ಗೀತೆಗಳನ್ನು ವಿವಿಧ ಗಾಯನ ತಂಡಗಳು ನಡೆಸಿಕೊಟ್ಟವು. ಬಳಿಕ ಸಂಜೆ ಮಠಾಧ್ಯಕ್ಷರಾದ ಸಿದ್ಧಲಿಂಗಸ್ವಾಮಿಗಳ ನೇತೃತ್ವದಲ್ಲಿ ಮಠದ ಮಕ್ಕಳಿಂದ ಪ್ರಾರ್ಥನೆ ನಡೆಯಿತು.. ಆ ಮೂಲಕ ದಿನವಿಡೀ ಶ್ರೀಗಳ ನಾಮ ಸ್ಮರಣೆ ಮಾಡಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap