ಉಡುಪಿ:
27 ವರ್ಷದ ಇಂಜಿನಿಯರ್ ಪದವೀಧರ ಪ್ರಶಾಂತ್ ಆಚಾರ್ಯ ಅಷ್ಟಮಠದ ಉತ್ತರಾಧಿಕಾರಿಯಾಗಿ ಸೋಮವಾರ ಸನ್ಯಾಸ ಸ್ವೀಕರಿಸಿದ್ದಾರೆ.
ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ 31ನೇ ಯತಿ ಸ್ವೀಕಾರ ಕಾರ್ಯಕ್ರಮ ಹಿರಿಯಡ್ಕ ಸಮೀಪದ ಪುತ್ತಿಗೆ ಮಠದಲ್ಲಿ ಸೋಮವಾರ ಬೆಳಗ್ಗೆ 11.40 – 11.45ರ ಶುಭಲಗ್ನದಲ್ಲಿ , ಪುತ್ತಿಗೆ ಮೂಲ ಮಠದಲ್ಲಿ ಯತಿಗಳಾದ ಸುಗುಣೇಂದ್ರತೀರ್ಥರು, ತಮ್ಮ ಉತ್ತರಾಧಿಕಾರಿಯಾಗಿ ಪ್ರಶಾಂತ್ ಆಚಾರ್ಯ ಅವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿದ್ದಾರೆ.
ಮೊದಲಿನಿಂದಲೂ ಆಧ್ಯಾತ್ಮಕದ ಕಡೆಗೆ ಒಲವು ಹೊಂದಿದ್ದ ಪ್ರಶಾಂತ್ ಆಚಾರ್ಯ, ಸಂಸ್ಕೃತದ ಪ್ರಾಥಮಿಕ ಜ್ಞಾನವನ್ನು ಹೊಂದಿದ್ದು, ಪುತ್ತಿಗೆ ಮಠದ ಯತಿಪರಂಪರೆಯ 31ನೇ ಯತಿ ಇವರಾಗಿದ್ದು, ನೂತನ ಶ್ರೀಗಳಿಗೆ “ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು” ಎಂದು ಪುತ್ತಿಗೆ ಹಿರಿಯ ಶ್ರೀಗಳು ನಾಮಕರಣ ಮಾಡಿದ್ದಾರೆ.
ನೂತನ ಯತಿಗಳ ಹಿನ್ನೆಲೆ:
ಉಡುಪಿ ನಗರದ ಕುಂಜಿಬೆಟ್ಟು ನಿವಾಸಿಯಾಗಿದ್ದ 27 ವರ್ಷದ ಪ್ರಶಾಂತ್ ಆಚಾರ್ಯ, ಇಂಜಿನಿಯರಿಂಗ್ ಪದವೀಧರ ಮತ್ತು ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇವರು ಗುರುರಾಜ ಆಚಾರ್ಯ ಮತ್ತು ವಿನುತಾ ಆಚಾರ್ಯ ದಂಪತಿಗಳ ಪುತ್ರ.
ಪ್ರಶಾಂತ ಆಚಾರ್ಯ ಬೆಂಗಳೂರಿನಲ್ಲಿ ಆರ್ಸನ್ ಸಾಫ್ಟ್ವೇರ್ ಕಂಪನಿಯಲ್ಲಿ ಟೀಂ ಲೀಡರ್ ಆಗಿದ್ದು, 8 ತಿಂಗಳ ಹಿಂದೆ ಬೆಂಗಳೂರಿನ ಮಠದಲ್ಲಿ ನಮ್ಮನ್ನು ಭೇಟಿ ಮಾಡಿ ಸನ್ಯಾಸಾಶ್ರಮ ಸ್ವೀಕರಿಸುವ ಇಚ್ಛೆ ವ್ಯಕ್ತ ಪಡಿಸಿದ್ದರು. ಸನ್ಯಾಸದ ಬಗ್ಗೆ ಅವರ ಒಲವು ನೋಡಿ ದೀಕ್ಷೆ ನೀಡಲಾಗಿದೆ ಎಂದು ಪುತ್ತಿಗೆ ಶ್ರೀ ತಿಳಿಸಿದರು.
ಸನ್ಯಾಸ ದೀಕ್ಷೆ ನೀಡುವ ಮುನ್ನ ಪ್ರಶಾಂತ್ ಆಚಾರ್ಯರಿಗೆ ತಿಳಿಯದಂತೆ ಅವರು ಕೆಲಸ ಮಾಡುತ್ತಿದ್ದ ಕಂಪನಿಯ ಅಧಿಕಾರಿಗಳನ್ನು, ಸಹೋದ್ಯೋಗಿಗಳನ್ನು ಮಠಕ್ಕೆ ಕರೆಸಿ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ಬಾಡಿಗೆ ಮನೆ ಮಾಲೀಕರ ಬಳಿಯೂ ವಿಚಾರಿಸಿದ್ದೇವೆ. ಎಲ್ಲರ ಬಳಿ ಮಾತನಾಡಿದ ಮೇಲೆ ಅವರಿಗೆ ಹುಡುಗಿಯರ ಬಗ್ಗೆ ಆಸಕ್ತಿ ಇಲ್ಲ ಎಂದು ತಿಳಿದು ಸನ್ಯಾಸಾಶ್ರಮ ನೀಡಿದ್ದೇವೆ ಎಂದು ಪುತ್ತಿಗೆ ಶ್ರೀಗಳು ಹಾಸ್ಯ ಚಟಾಕಿ ಹಾರಿಸಿದರು.
15 ವರ್ಷಗಳಿಂದ ಸನ್ಯಾಸದ ಆಸಕ್ತಿ :
ಕಳೆದ 15 ವರ್ಷಗಳಿಂದ ಸನ್ಯಾಸದ ಆಸಕ್ತಿ ಇತ್ತು, ಐದು ವರ್ಷಗಳಿಂದ ಕೃಷ್ಣಪೂಜೆ ಹಂಬಲ ತೀವ್ರವಾಗಿತ್ತು. ಆದರೆ ಸನ್ಯಾಸ ದೀಕ್ಷೆ ಯಾರಲ್ಲಿ ಕೇಳುವುದು ಎಂಬುದು ತಿಳಿದಿರಲಿಲ್ಲ. ಕೃಷ್ಣ-ಮುಖ್ಯಪ್ರಾಣ ದೇವರ ಅನುಗ್ರಹದಿಂದ ಪುತ್ತಿಗೆ ಶ್ರೀಗಳು ಶಿಷ್ಯನನ್ನಾಗಿ ಸ್ವೀಕರಿಸಿ ಅನುಗ್ರಹಿಸಿದ್ದಾರೆ. ತಾಯಿ ಕೃಷ್ಣನ ಭಕ್ತೆಯಾಗಿದ್ದು, ಕೃಷ್ಣನ ಸೇವೆಗೆ ಸನ್ಯಾಸ ಸ್ವೀಕರಿಸುವುದರಿಂದ ಒಪ್ಪಿದ್ದಾರೆಂದು ನೂತನ ಯತಿ ಸುಶ್ರೀಂದ್ರ ತೀರ್ಥರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ