ಹಾನಗಲ್ಲ:
ಸಿದ್ಧಗಂಗಾ ಮಠದ ನಡೆದಾಡು ದೇವರು ಲಿಂ.ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ಸಮಾರಂಭವು ತಾಲೂಕಿನ ಬೈಚವಳ್ಳಿ ಗ್ರಾಮದಲ್ಲಿ ಗುರುವಾರ ನಡೆಯಿತು.ಗ್ರಾಮದ ಕರಿಬಸವೇಶ್ವರ ಮಠದಿಂದ ಆರಂಭಗೊಂಡ ಲಿಂ.ಶಿವಕುಮಾರ ಶ್ರೀಗಳ ಭಾವಚಿತ್ರದ ಮೆರವಣಿಗೆಯು ಎಲ್ಲ ಓಣಿಗಳಲ್ಲಿ ಸಂಚರಿಸಿತು.
ಗ್ರಾಮದ ಬೀದಿಗಳನ್ನು ಸ್ವಚ್ಛಗೊಳಿಸಿದ್ದ ಗ್ರಾಮಸ್ಥರು, ತಳಿರು, ತೋರಣಗಳಿಂದ ಸಿಂಗರಿಸಿದ್ದರು. ಬಣ್ಣದ ರಂಗೋಲಿ, ಅಲ್ಲಲ್ಲಿ ಶಿವಕುಮಾರ ಶ್ರೀಗಳ ಭಾವಚಿತ್ರದ ಬ್ಯಾನರ್ ಅಳವಡಿಸಲಾಗಿತ್ತು. ಮನೆ ಮುಂದೆ ಬಂದ ಮೆರವಣಿಗೆಗೆ ಆರತಿ ಬೆಳಗಿ ಗೌರವ ಸಮರ್ಪಿಸಿದ ಮಹಿಳೆಯರು, ಹಣ್ಣು, ಕಾಯಿ ನೈವೇದ್ಯ ಮಾಡಿಸಿದರು. ಜಾಂಜ್, ಡೊಳ್ಳು, ಭಜನೆ ಮೇಳಗಳು ಮೆರವಣಿಗೆಗೆ ಕಳೆ ನೀಡಿದ್ದವು, ಗ್ರಾಮಸ್ಥರಿಂದ ಶಿವಕುಮಾರ ಸ್ವಾಮೀಜಿಗಳ ಸ್ಮರಣೆ ನಡೆಯಿತು.
ಬಳಿಕ ಕರಿಬಸವೇಶ್ವರ ಮಠದಲ್ಲಿ ಅನ್ನ ಸಂಪರ್ತಣೆ ನಡೆಯಿತು.ಈ ಧಾರ್ಮಿಕ ಆಚರಣೆ ಸಾನಿಧ್ಯ ವಹಿಸಿದ್ದ ಬಮ್ಮನಹಳ್ಳಿ ಗುರುಪಾದೇಶ್ವರ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಧಾರ್ಮಿಕ ಆಚರಣೆಗಳು ನಿರಂತರವಾಗಿ ನಡೆಯಬೇಕು. ಆ ಮೂಲಕ ಭ್ರಾತೃತ್ವ, ಭಾವೈಕ್ಷತೆ ಮೇಳೈಸಬೇಕು.
ತ್ರಿವಿಧ ದಾಸೋಹಿ ನಮ್ಮೆಲ್ಲರ ಮಾದರಿ ಪೂಜ್ಯರು. ಮಂತ್ರ ಪಠಿಸಲಿಲ್ಲ, ಭವಿಷ್ಯ ನಂಬಲಿಲ್ಲ, ವಾಸ್ತು ನೋಡಲಿಲ್ಲ, ಆದರೆ ವಿದ್ಯೆ, ಅನ್ನ, ಜ್ಞಾನ ದಾಸೋಹಕ್ಕೆ ತಮ್ಮ ಜೀವನ ಮುಡಿಪಾಗಿಟ್ಟವರು ಎಂದರು.ಗ್ರಾಮದ ಪ್ರಮುಖರಾದ ಉಮೇಶ ದಾನಪ್ಪನವರ, ಶಿವಪ್ಪ ದಾನಪ್ಪನವರ, ಶಂಕ್ರಪ್ಪ ಓರಲಗಿ, ಶಂಕ್ರಪ್ಪ ಮೂಲಿಮನಿ, ದೇವಯ್ಯ ಅಡಕಿಹಾಳ, ಪ್ರಶಾಂತ ದಾನಪ್ಪನವರ, ಶಶಿಧರ ಕೋಟಿ, ಪ್ರವೀಣ ದಾನಪ್ಪನವರ, ಶಂಕ್ರಪ್ಪ ತಾವರಗೇರಿ, ಅಶೋಕ ಕೋಟಿ, ಸುರೇಶ ಕೋಟಿ, ಬಸವರಾಜ ಮಾಸಣಗಿ, ಆನಂದ ನೆಗಳೂರ, ರಾಮಣ್ಣ ಕೋಟಿ, ಮಂಜು ಕೊಪ್ಪದ, ಶಿವಪ್ಪ ಕಡೂರ, ಸತೀಶ ಹಂಚಿನಮನಿ, ಸಿದ್ಧನಗೌಡ ಪಾಟೀಲ, ಮುತ್ತಪ್ಪ ನೆಗಳೂರ, ಅಜ್ಜನಗೌಡ ಕಲ್ಲಗೌಡ್ರ, ಸಂತೋಷ ಪಾಟೀಲ ಇದ್ದರು.