ಇಪ್ಪತ್ತೈದು ವರ್ಷಗಳಲ್ಲಿ ಟ್ರಾಕ್ಟರ್ ಮಣ್ಣೂ ಹಾಕಿಲ್ಲ

ದಾವಣಗೆರೆ

      25 ವರ್ಷಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿರುವ ಬಿಜೆಪಿಯವರು ಬಸ್ ಶೆಲ್ಟರ್ ಬಿಟ್ಟರೆ, ಒಂದು ಟ್ರಾಕ್ಟರ್ ಮಣ್ಣು ಸಹ ಎಲ್ಲೂ ಹಾಕಿಸಿಲ್ಲ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಆರೋಪಿಸಿದರು.

       ಹೊನ್ನಾಳ್ಳಿ ತಾಲ್ಲೂಕಿನ ದೇವನಾಯ್ಕನಹಳ್ಳಿ, ಚೀಲೂರು, ಸವಳಂಗ, ಸುರಹೊನ್ನೆ, ನ್ಯಾಮತಿ, ಬೆಳಗುತ್ತಿ, ಕೆಂಚಿಕೊಪ್ಪ, ಸೊರಟೂರು ಗ್ರಾಮಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

        ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಜಿ.ಮಲ್ಲಿಕಾರ್ಜುನಪ್ಪ ಎರಡು ಬಾರಿ ಹಾಗೂ ಜಿ.ಎಂ.ಸಿದ್ದೇಶ್ವರ್ ಮೂರು ಬಾರಿ ಪ್ರತಿನಿಧಿಸಿದ್ದು, 25 ವರ್ಷಗಳ ಅವಧಿಯಲ್ಲಿ ಎಲ್ಲರಿಗೂ ಬರುವಂತೆ ಬರುವ ಶಾಸನಬದ್ಧ ಅನುದಾನಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡಿರುವುದನ್ನು ಬಿಟ್ಟರೇ, ಎಲ್ಲೂ ಒಂದು ಟ್ರಾಕ್ಟರ್ ಮಣ್ಣು ಸಹ ಹಾಕಿಲ್ಲ ಎಂದು ದೂರಿದರು.ಏನೂ ಮಾಡದೇ, 10 ಸಾವಿರ ಕೋಟಿ ಅನುದಾನ ತಂದಿದ್ದೇವೆ ಎಂಬುದಾಗಿ ಸುಳ್ಳು ಹೇಳುತ್ತಿದ್ದಾರೆ. ಬಸ್ ಶೆಲ್ಟರ್ ಬಿಟ್ಟು ಬೇರ್ಯಾವುದಾದರು ಕೆಲಸ ಮಾಡಿದ್ದರೆ, ತೋರಿಸಲಿ ಎಂದು ಸವಾಲು ಹಾಕಿದರು.

      ಮನುಷ್ಯನ ಹೊಟ್ಟೆಗೆ ಹಿಟ್ಟು, ವಾಸಿಸಲು ಮನೆ, ಮಾನ ಮುಚ್ಚಲು ಬಟ್ಟೆ, ಸುಶಿಕ್ಷಿತರಾಗಲು ಶಾಲಾ-ಕಾಲೇಜುಗಳು ಬೇಕಾಗಿವೆ. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಇಂತಹ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಕೆಲಸ ಮಾಡಿದೆ. ಅದರಲ್ಲೂ ಸಿದ್ದಾರಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಆದರೆ, ಅವರು ಏನು ಮೋಡಿ ಮಾಡಿದ್ದಾರೆಂಬುದು ಆ ದೇವರಿಗೆ ಗೊತ್ತು. ಈ ಬಾರಿ ಯಾವುದೇ ಮೋಡಿಗೆ ಒಳಗಾಗದೇ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

       ನೆನ್ನೆಯಿಂದ ನಾನು ಮಂಜಪ್ಪನವರ ಪರವಾಗಿ ಪ್ರಚಾರ ಆರಂಭಿಸಿದ್ದು, ಹೊದ ಕಡೆಯಲೆಲ್ಲಾ ಅಭೂತಪೂರ್ವ ಸ್ವಾಗತ ದೊರೆಯುವುದರ ಜೊತೆಗೆ, ಉತ್ತಮ ಸ್ಪಂದನೆಯೂ ವ್ಯಕ್ತವಾಗುತ್ತಿದೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕಾದರೆ, ಕಾಂಗ್ರೆಸ್ ಪಕ್ಷದವರೇ ಕಾರಣವಾಗುತ್ತಿದ್ದಾರೆ. ಈ ಚುನಾವಣೆಯಲ್ಲಿ ನಿಮ್ಮ ಮನಸ್ಸಿನಲ್ಲಿರುವ ವೈಮನಸ್ಸು ಹಾಗೂ ಭಿನ್ನಾಭಿಪ್ರಾಯವನ್ನು ಮರೆತು ಹೊನ್ನಾಳಿಯ ಹುಡುಗ ಹೆಚ್.ಬಿ.ಮಂಜಪ್ಪನವರಿಗೆ 50ರಿಂದ 60 ಸಾವಿರ ಮತಗಳ ಲೀಡ್ ಕೊಡಬೇಕೆಂದು ಸಲಹೆ ನೀಡಿದರು.

      ಹೆಚ್.ಬಿ.ಮಂಜಪ್ಪ ಪ.ಪಂ. ಸದಸ್ಯನಾಗಿ, ಅಧ್ಯಕ್ಷನಾಗಿ, ತಾ.ಪಂ. ಸದಸ್ಯನಾಗಿ, ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಅಧ್ಯಕ್ಷರಾಗಿ ಹಲವು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಹೀಗಾಗಿ ಇನ್ನೂ ಹೆಚ್ಚು ಕೆಲಸ ಕಾರ್ಯಗಳಾಗಬೇಕಾದರೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರನ್ನು ಗೆಲ್ಲಿಸಿಕೊಂಡು ಬರಬೇಕೆಂದು ಕರೆ ನೀಡಿದರು.

       ಎಲ್ಲರ ಜೊತೆಯಲ್ಲಿ ಅನ್ಯೂನ್ಯವಾಗಿದ್ದುಕೊಂಡು, ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿರುವ ಹೆಚ್.ಬಿ.ಮಂಜಪ್ಪನವರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್‍ಗೆ ಶಿಫಾರಸು ಮಾಡಿ, ಸಾಮಾಜಿಕನ್ಯಾಯ ಎತ್ತಿ ಹಿಡಿಯುವ ಕೆಲಸ ಮಾಡಿದ್ದೇವೆ. ಈಗ ನಾನೇನೊ ಮಂಜಪ್ಪನವರ ಕೊರಳಿಗೆ ಮಾಲೆ ಹಾಕಿದ್ದೇನೆ. ಆದರೆ, ಮೇ.23ರಂದು ಆನೆ ಸೋಂಡಲಿನಿಂದ ವಿಜಯದ ಮಾಲೆ ಹಾಕುವಂತೆ ನೀವು ಮಾಡಬೇಕೆಂದು ಹೇಳಿದರು.

       ಇದೇ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ, ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡ ಮತ್ತಿತರರು ಮಾತನಾಡಿದರು.

      ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸಣ್ಣಕ್ಕಿ ಬಸವನಗೌಡ್ರು, ಗದಿಗೇಶ್, ಹೆಚ್.ಬಿ.ಶಿವಯೋಗಿ, ಸಿದ್ದಪ್ಪ , ರಮೇಶ್, ವರದಪ್ಪ ಗೌಡ್ರು, ವಿಶ್ವನಾಥ್, ಎಂ.ಸಿದ್ದಪ್ಪ, ಮಧುಗೌಡ, ಉಮಾಪತಿ, ಜೆಡಿಎಸ್ ತಾಲ್ಲೂಕ್ ಅಧ್ಯಕ್ಷ ವೆಂಕಟೇಶಪ್ಪ, ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.

       ಇದೇ ವೇಳೆ ಮಾಜಿ ಸಚಿವರು, ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಗಳೂ ಆದ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅವರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರ ರೋಡ್ ಷೋ ಮೂಲಕ ಮತಯಾಚಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link