ದಾವಣಗೆರೆ:
ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಎಸ್.ಮಲ್ಲಿಕಾರ್ಜುನ್ ಅವರೇ ಕಣಕ್ಕೆ ಇಳಿಯಬೇಕೆಂದು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಮಂಗಳವಾರ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದರು.
ನಗರದ ಪಿ.ಬಿ.ರಸ್ತೆಯಲ್ಲಿರುವ ರೇಣುಕಾ ಮಂದರಿದಲ್ಲಿ ಅಪಾರ ಸಂಖ್ಯೆಯಲ್ಲಿ ಸಭೆ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಎಸ್ಸೆಸ್ಸೆಂ ಅಭಿಮಾನಿಗಳು ಬರುವ ಚುನಾವಣೆಯಲ್ಲಿ ಪಕ್ಷದಿಂದ ಮಲ್ಲಿಕಾರ್ಜುನ ಅವರೇ ಸ್ಪರ್ಧಿಸಲು ಅವರ ಮನವೊಲಿಸಬೇಕು. ಹಾಗೂ ಅವರನ್ನು ಗೆಲ್ಲಿಸಿಯೇ ತೀರಬೇಕೆಂಬ ಸಂಕಲ್ಪಕೈಗೊಂಡು, ಪಾದಯಾತ್ರೆಯ ಮೂಲಕ ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್, ವಡ್ನಾಳ್ ರಾಜಣ್ಣ, ಶಾಂತನಗೌಡ, ಜಿ.ಪಂ.ಸದಸ್ಯರು ಹಾಗೂ ಮಾಯಕೊಂಡ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕೆ.ಎಸ್.ಬಸವಂತಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಮುಖಂಡರಾದ ಮುದೇಗೌಡ್ರ ಗಿರೀಶ್, ದಿನೇಶ್ ಕೆ. ಶೆಟ್ಟಿ, ಅಯೂಬ್ ಪೈಲ್ವಾನ್ ಮತ್ತಿತರರ ನೇತೃತ್ವದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ನಿವೇ ಪಕ್ಷದ ಅಭ್ಯರ್ಥಿಯಾಗ ಬೇಕೆಂದು ಮನವೊಲಿಸಲು ಯತ್ನಿಸಿದರು.
ಆದರೆ, ಪಕ್ಷದ ಕಾರ್ಯಕರ್ತರ, ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ದಿಢೀರನೇ ನಿರ್ಧಾರ ಕೈಗೊಳ್ಳಲಾಗದು. ಈ ಬಗ್ಗೆ ಬ್ಲಾಕ್ ಕಾಂಗ್ರೆಸ್‍ನಿಂದ ಹಿಡಿದು ಹೈಕಮಾಂಡ್‍ವರೆಗೆ ಎಲ್ಲರ ಜೊತೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ರೇಣುಕಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಗಳೂರಿನ ಮಾಜಿ ಶಾಸಕ ಹೆಚ್.ಪಿ.ರಾಜೇಶ್, ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದರೂ, ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾಗಿರುವ ಕಾರಣ ಅವರ ಮನಸ್ಸಿಗೆ ನೋವಾಗಿದೆ. ಆದ್ದರಿಂದ ಆ ನೋವನ್ನು ದೂರ ಮಾಡಿ, ಬರುವ ಚುನಾವಣೆಯಲ್ಲಿ ಅವರೇ ಅಭ್ಯರ್ಥಿಯಾಗಬೇಕೆಂದು ಮನವೋಲಿಸಿ, ಮಲ್ಲಣ್ಣನವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ, ಕಹಿ ಘಟನೆಗಳನ್ನು ಮರೆತು ಗೆಲ್ಲಿಸಿಕೊಂಡು ಬರಲು ಎಲ್ಲರೂ ಸಂಕಲ್ಪ ಮಾಡೋಣ ಎಂದು ಕಿವಿಮಾತು ಹೇಳಿದರು.
ಚನ್ನಗಿರಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ಕಳೆದ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‍ನ ಏಳು ಜನ ಶಾಸಕರು ಇದ್ದ ಸಂದರ್ಭದಲ್ಲಿ ಇತಿಹಾಸದಲ್ಲಿಯೇ ಆಗದಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದರೂ. ಶಾಮನೂರು ಶಿವಶಂಕರಪ್ಪನವರನ್ನು ಹೊರತುಪಡಿಸಿ, ಇನ್ನುಳಿದ ಆರು ಜನರು ಸೋತಿದ್ದೇವೆ ಎಂದರೆ ಅದಕ್ಕೆ ಕಾರಣ ಏನೆಂಬುದನ್ನು ಮೊದಲು ಪತ್ತೆ ಹಚ್ಚಬೇಕೆಂದು ಕಿವಿಮಾತು ಹೇಳಿದರು.
ದಾವಣಗೆರೆಯ ಪಿಬಿ ರಸ್ತೆ, ಗ್ಲಾಸ್ ಹೌಸ್ ಸೇರಿದಂತೆ ಉತ್ತರ ಕ್ಷೇತ್ರದಲ್ಲಿ ಬಹಳಷ್ಟು ಕಾಮಗಾರಿಗಳನ್ನು ಕೈಗೊಂಡಿದ್ದರೂ ಸಹ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಜನ ಕೈಬಿಟ್ಟಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ ಎಂದ ಅವರು, ಮಲ್ಲಣ್ಣನವರು 3 ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ, ಅವರನ್ನು ಗೆಲ್ಲಿಸಿಕೊಂಡು ಬರಲಾಗದೇ, ಸೋಲಿಸಿರುವುದಕ್ಕೆ ನಮಗೆಲ್ಲರಿಗೂ ನಾಚಿಕೆಯಾಗಬೇಕು. ಕಳೆದ ಚುನಾವಣೆಯಲ್ಲಿ ಯಾವ್ಯಾವ ಬೂತ್‍ಗಳಲ್ಲಿ ಕಡಿಮೆ ಮತ ಬಂದಿದೆ ಎಂಬುದನ್ನು ನೋಡಿಕೊಂಡು, ಅಲ್ಲಿ ಜನರನ್ನು ವಿಶ್ವಾಸಕ್ಕೆ ತಗೆದುಕೊಂಡು ಮತಗಳನ್ನಾಗಿ ಪರಿವರ್ತಿಸಬೇಕೆಂದು ಸಲಹೆ ನೀಡಿದರು.
ಮಲ್ಲಿಕಾರ್ಜುನ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿಕೊಂಡು, ಗೆಲ್ಲಿಸೇ, ಗೆಲ್ಲಿಸುತ್ತೇವೆಂಬ ಸಂಕಲ್ಪದೊಂದಿಗೆ ಚುನಾವಣೆ ಎದುರಿಸಲು ಕಾರ್ಯಕರ್ತರು ಶ್ರಮಿಸಬೇಕು. ಆದರೆ, ಇದಕ್ಕೆ ಯಾವುದೇ ದೋಖಾ ಆಗದಂತೆ ನೋಡಿಕೊಂಡು ಕಳೆದ ಮೂರು ಬಾರಿಯ ಚುನಾವಣೆಯ ಸೇಡನ್ನು ಈ ಬಾಲಿ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ತೀರಿಸಬೇಕೆಂದು ಕರೆ ನೀಡಿದರು.
ಹೊನ್ನಾಳಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಈ ಸಭೆಗೆ ಬಂದಿರುವ ಪೈಕಿ ಕೆಲವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮತ ನೀಡಿಲ್ಲ. ಆದರೆ, ಈಗ ಮನವರಿಕೆಯಾಗಿದೆ. ಕೆಪಿಸಿಸಿ ಸಭೆಗಳು ಸೇರಿದಂತೆ ಎಲ್ಲಾ ಕಡೆಯಲ್ಲೂ ಮಲ್ಲಿಕಾರ್ಜುನ್ ಅವರೇ ನಮ್ಮ ಅಭ್ಯರ್ಥಿ ಎಂಬುದಾಗಿ ಹೇಳಿದ್ದೇವೆ. ಈಗ ಅವರ ಮನವೋಲಿಸಿ, ಚುನಾವಣಾ ಕಣಕ್ಕಿಳಿಸಿ ಸಾಮೂಹಿಕ ಪ್ರಯತ್ನದ ಮೂಲಕ ಗೆಲ್ಲಿಸಿಕೊಂಡು ಬರೋಣ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಪ್ರಾಸ್ತಾವಿಕ ಮಾತನಾಡಿದರು.
ಸಭೆಯಲ್ಲಿ ಮೇಯರ್ ಶೋಭಾ ಪಲ್ಲಾಘಟ್ಟೆ, ಉಪ ಮೇಯರ್ ಚಮನ್ ಸಾಬ್, ಮುಖಂಡರಾದ ಮುದೇಗೌಡ್ರ ಗಿರೀಶ್, ದಿನೇಶ್ ಕೆ.ಶೆಟ್ಟಿ, ಅಯೂಬ್ ಪೈಲ್ವಾನ್, ಎಂ.ಹಾಲೇಶ್, ಕಟ್ಟಿಗೆ ಬಸಪ್ಪ, ಕೆ.ಜಿ.ಶಿವಕುಮಾರ್, ಎ.ನಾಗರಾಜ್, ಹಂಚಿನಮನೆ ತಿಪ್ಪಣ್ಣ, ಕೆ.ಹೆಚ್.ಓಬಳಪ್ಪ, ಮಾಲತೇಶ್ ಜಾಧವ್, ಸಾಧಿಕ್ ಪೈಲ್ವಾನ್, ಮಲ್ಲಿಕಾರ್ಜುನ್.ಎಸ್, ಕೋಳಿ ಇಬ್ರಾಹಿಂ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.