ಎಸ್‍ಪಿಎಂ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ : ವೇಣುಗೋಪಾಲ್

ಗುಬ್ಬಿ

        ಕಾಂಗ್ರೆಸ್ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಗೊಳಿಸಲು ಮತ್ತು ತಳಮಟ್ಟದ ಕಾರ್ಯಕರ್ತರನ್ನು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂಬರುವ ಚುನಾವಣೆಗಳನ್ನು ಎದುರಿಸಲು ಸಿದ್ದರಾಗುವಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಕರೆನೀಡಿದರು.

       ಪಟ್ಟಣದ ಶ್ರೀಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಕೇಂದ್ರದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದಲ್ಲಿ ನೂರಾರು ಅಭ್ಯರ್ಥಿಗಳು ಬರುತ್ತಾರೆ, ಹೋಗುತ್ತಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಕಳೆದ ಬಾರಿ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ಪಕ್ಷದಿಂದ ಕೈಬಿಡಲು ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಗುಬ್ಬಿ ಬ್ಲಾಕ್ ಕಾಂಗ್ರೆಸ್ ಸಮಿತಿ ವರದಿ ನೀಡಿದರೆ ಈ ಬಗ್ಗೆ ಚರ್ಚಿಸುತ್ತೇವೆ ಎಂದು ತಿಳಿಸಿದರು.

       ಮುಂಬರುವ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೆಗೌಡರೆ ಆಗಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್‍ನವರೊಂದಿಗೆ ಹೊಂದಿಕೊಂಡು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆನೀಡಿದರು.

        ಸಂಸದ ಎಸ್.ಪಿ.ಮುದ್ದಹನುಮೆಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ತನ್ನದೆ ಆದ ಮಹತ್ವದ ಸ್ಥಾನವಿದ್ದು, ಮುಂಬರುವ ಲೋಕ ಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಂಘಟಿತರಾಗಬೇಕು. ಜಿಲ್ಲೆಯಲ್ಲಿ 7 ಕಡೆಗಳಲ್ಲಿ ಪಕ್ಷ ಅಧಿಕಾರದಲ್ಲಿಲ್ಲ. ಅಂತಹ ಕಡೆಗಳಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷವನ್ನು ಕಟ್ಟುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ. ಸ್ಥಳೀಯವಾಗಿ ಅಧಿಕಾರ ಬೇಕಾದರೆ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಗೊಳಿಸುವತ್ತ ಮುಂದಾಗುವಂತೆ ತಿಳಿಸಿದರು.

        ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಕೇಂದ್ರ ಸರ್ಕಾರ ಬರಿ ಅಬ್ಬರದ ಪ್ರಚಾರದಲ್ಲಿ ತೊಡಗಿದೆಯೆ ಹೊರತು ಜನಸಾಮಾನ್ಯರ ಸಮಸ್ಯೆಗಳಗೆ ಸ್ಪಂದಿಸುತ್ತಿಲ್ಲ. ರಿಸóರ್ವ್ ಬ್ಯಾಂಕಿನ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ದಬ್ಬಾಳಿಕೆಯನ್ನು ಗಮನಿಸಿದರೆ ಕೇಂದ್ರ ಸರ್ಕಾರದ ವೈಖರಿ ಎಂತಹದ್ದು ಎಂಬುದು ಅರ್ಥವಾಗುತ್ತದೆ. ದೇಶದ ಅಭಿವೃಧ್ದಿಯಾಗಬೇಕಾದರೆ ಕಾಂಗ್ರೆಸ್‍ನಿಂದ ಮಾತ್ರವೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷವನ್ನು ಸಂಘಟನಾತ್ಮಕವಾಗಿ ಬಲಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಕರೆ ನೀಡಿದರು.

        ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಂಕರಾನಂದ ಮಾತನಾಡಿ, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸುವತ್ತ ಪಕ್ಷದ ಮುಖಂಡರು ಚಿಂತನೆ ನಡೆಸಬೇಕಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಪಕ್ಷದ ಯಾವುದೆ ಸಭೆಗಳಲ್ಲಿ ಭಾಗವಹಿಸದಿರುವುದರಿಂದ ಅವರನ್ನು ಪಕ್ಷದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.

         ಸಭೆಯಲ್ಲಿ ಮುಖಂಡರಾದ ಕೆಪಿಸಿಸಿ ಕಾರ್ಯದರ್ಶಿಗಳಾದ ಇದ್ರೀಸ್ ಖಾನ್, ದಿನೇಶ್, ಮುರಳಿಧರ ಹಾಲಪ್ಪ, ಜಿಲ್ಲಾಧ್ಯಕ್ಷ ರಾಮಕೃಷ್ಣ, ಎಸ್.ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲೇಶ್, ಜಿಲ್ಲಾ ಕಾರ್ಯದರ್ಶಿ ಸುಜಾತ, ಉಪಾಧ್ಯಕ್ಷೆ ಮರಿಚನ್ನಮ್ಮ, ಓಬಿಸಿ ಘಟಕದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಜಿ.ಎಸ್.ಪ್ರಸನ್ನಕುಮಾರ್, ಕೆ.ಅರ್.ತಾತಯ್ಯ, ಶ್ರೀನಿವಾಸ್, ಚಿಕ್ಕರಂಗಣ್ಣ, ಕಾಡಶೆಟ್ಟಿಹಳ್ಳಿ ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುರುಗೇನಹಳ್ಳಿ ನರಸಿಂಹಯ್ಯ, ಜಯಣ್ಣ, ಪಟ್ಟಣ ಪಂಚಾಯ್ತಿ ಸದಸ್ಯರಾದ ಮಹಮದ್ ಸಾಧಿಕ್, ಆಯಿಷಾತಾಸೀನ್, ಮುಖಂಡರುಗಳಾದ ಸಲೀಂಪಾಷಾ, ಮಹಮದ್ ರಫಿ, ಕೆ.ಎಂ.ನೇತ್ರಾವತಿ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap