ದಾವಣಗೆರೆ :
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಕಲಿ ಟ್ರೇಡ್ ಲೈಸನ್ಸ್ ಹಾವಳಿಗೆ ಕಡಿವಾಣ ಹಾಕಲು ಅಭಿಯಾನ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಪಾಳಿಕೆ ಆಯುಕ್ತ ಮಂಜುನಾಥ್ ಬಳ್ಳಾರಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿ ಭವನದಲ್ಲಿ ಸೋಮವಾರ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ರೇಡ್ ಲೈಸನ್ಸ್ ಪ್ರಕರಣಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಜನವರಿ 15 ರೊಳಗೆ ಪಾಲಿಕೆ ವತಿಯಿಂದ ಅಭಿಯಾನ ಕೈಗೊಂಡು, ಹೊಸ ಟ್ರೇಡ್ ಲೈಸನ್ಸ್ ಪಡೆಯದವರಿಗೆ ಟ್ರೇಡ್ ಲೈಸನ್ಸ್ ನೀಡುವ ಅವಕಾಶ ಹಾಗೂ ನಕಲಿ ಟ್ರೇಡ್ ಲೈಸನ್ಸ್ ಪಡೆದವರ ವಿರುದ್ದ ಕ್ರಮ ಹಾಗೂ ದಂಡಾರ್ಹ ಪ್ರಕರಣಗಳಿಗೆ ದಂಡ ವಿಧಿಸುವ ಮೂಲಕ ನಕಲಿ ಟ್ರೇಡ್ ಲೈಸನ್ಸ್ ಹಾವಳಿಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಇದಕ್ಕೂ ಮುನ್ನ ಅರ್ಜಿ ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ, ಪಾಲಿಕೆ ವ್ಯಾಪ್ತಿಯಲ್ಲಿ ನಕಲಿ ಟ್ರೇಡ್ ಲೈಸನ್ಸ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಆಯುಕ್ತರಿಗೆ ಲಿಖಿತವಾಗಿ ದೂರು ನೀಡಿದ್ದರೂ ಸ್ಪಂದಿಸಿಲ್ಲ. ಆದ್ದರಿಂದ ನಕಲಿ ಟ್ರೇಡ್ ಲೈಸನ್ಸ್ ಹಾವಳಿಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.
ಬೀದಿ ವ್ಯಾಪಾರಿಗಳಿಂದ ತೊಂದರೆ:
ಚಾಮರಾಜಪೇಟೆ ಅಂಗಡಿ ಮಾಲೀಕರು ತಮ್ಮ ಅಂಗಡಿ ಮುಂದೆ ಇರುವ ಬೀದಿ ಬದಿ ವ್ಯಾಪಾರಸ್ಥರಿಂದ ತೊಂದರೆ ಆಗುತ್ತಿದೆ. ಸ್ಮಾರ್ಟ್ ಸಿಟಿ ಕೆಲಸವೂ ನಡೆಯುತ್ತಿದ್ದು, ಆ ಕೆಲಸಗಾರರು ಸಹ ನಮ್ಮ ಬದಲಾಗಿ ಬೀದಿ ಬದಿ ವ್ಯಾಪಾರ್ಥರು ಹೇಳುವಂತೆ ಕಾರ್ಯ ವಹಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಬೀಳಗಿ, ಪಾಲಿಕೆ ಆಯುಕ್ತರು ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳು ಶೀಘ್ರದಲ್ಲೇ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಖಾಸಗಿ ಶಾಲೆ ದೌರ್ಜನ:
ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಐಮ್ಯಾಕ್ಸ್ ವತಿಯಿಂದ ನೀಡುವ ಪುಸ್ತಕಗಳ ಬಿಲ್ ಕೇಳಿದರೆ, ನಮ್ಮ ವಿರುದ್ಧವೇ ದೌರ್ಜನ್ಯ ಎಸಗುತ್ತಾರೆ. ಹೀಗಾಗಿ ಈ ಶಾಲೆಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಗರ್ ಮನವಿ ಮಾಡಿದರು.
ಕೊಲೆಗೆ ಯತ್ನ:
ಹಿರಿಯ ನಾಗರೀಕ ಗಣಪತಿ ವಾಸುದೇವ ರಾಯ್ಕರ್ ಎಂಬುವವರು, ರಾಮ್ & ಕೋ ಸರ್ಕಲ್ ಬಳಿ ಸ್ವಂತ ಮನೆ ಇದ್ದು, ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಡಬೇಕೆಂದು ಮೂರು ಜನ ಗಂಡು ಮಕ್ಕಳು ತಮ್ಮನ್ನು ಕೊಲೆ ಮಾಡಲು ಯತ್ನ ನಡೆಸಿದ್ದಾರೆ ಹಾಗೂ ಮನೆಯಿಂದ ಹೊರ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಹಿರಿಯ ನಾಗರೀಕರ ಮತ್ತು ಪೋಷಕರ ರಕ್ಷಣೆ ಮತ್ತು ಜೀವನಾಂಶ ಕಾಯ್ದೆ 2007 ರನ್ವಯ ತಮ್ಮ ಜೀವನ್ನ ಮತ್ತು ತಮ್ಮ ಸೊತ್ತಿನ ರಕ್ಷಣೆ, ಸ್ವಾಧೀನ ಒದಗಿಸಬೇಕೆಂದು ಮನವಿ ಸಲ್ಲಿಸಿದರು.
ಆರ್‍ಟಿಐ 4.20 ಲಕ್ಷ ಶುಲ್ಕ:
ಮಾಹಿತಿ ಹಕ್ಕು ಅಧಿನಿಯದಡಿ ದೂಡಾ ಡೂಡಾಕ್ಕೆ ಅರ್ಜಿಯೊಂದರಲ್ಲಿ ಕೇಳಲಾದ ಮಾಹಿತಿಗೆ ಪ್ರತಿಯೊಂದಕ್ಕೆ 500 ರೂ.ಗಳಂತೆ ಒಟ್ಟು 4.20 ಲಕ್ಷ ಶುಲ್ಕವಾಗುತ್ತದೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಮಾಹಿತಿ ಹಕ್ಕು ಅರ್ಜಿಗಳಿಗೆ ಸೂಕ್ತ ಮಾಹಿತಿ ನೀಡುವಂತೆ ನಿರ್ದೇಶನ ನೀಡಬೇಕೆಂದು ಸಾರ್ವಜನಿಕರೋರ್ವರು ಮನವಿ ಮಾಡಿದರು.
ನಿಟುವಳ್ಳಿಯಲ್ಲಿ ರಾಜಾ ಕಾಲುವೆ ಹಾದು ಹೋಗಿದ್ದು, ರಸ್ತೆ ಬ್ಲಾಕ್ ಆಗಿದೆ. ಮಕ್ಕಳು, ವಯಸ್ಸಾದವರು ಓಡಾಡಲಿಕ್ಕೆ ತುಂಬಾ ತೊಂದರೆ ಆಗಿದ್ದು ಇದನ್ನು ತೆರವುಗೊಳಿಸಬೇಕಂದು ಹಿರಿಯ ಸಾರ್ವಜನಿಕರೊಬ್ಬರು ಮನವಿ ಸಲ್ಲಿಸಿದರು.ಇಲ್ಲಿನ ವಿದ್ಯಾನಗರದಿಂದ ಎಸ್‍ಎಸ್ ಹೈಟೆಕ್ ಆಸ್ಪತ್ರೆಗೆ ಸಂಜೆಯಿಂದ ರಾತ್ರಿ ವೇಳೆ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಇಲ್ಲದೇ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಈ ಮಾರ್ಗಕ್ಕೆ ಕೆಎಸ್‍ಆರ್‍ಟಿಸಿ ಬಸ್ ಬಿಡಬೇಕೆಂದು ವಿದ್ಯಾನಗರ ಸಾರ್ವಜನಿಕರು ಮನವಿ ಮಾಡಿದರು.
ಸಭೆಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಡಿಡಿಎಲ್‍ಆರ್ ರಾಮಾಂಜನೇಯ, ಕೆಎಸ್‍ಆರ್‍ಟಿಸಿ ಡಿಸಿ ಸಿದ್ದೇಶ್ವರ್, ಡಿಡಿಪಿಐ ಪರಮೇಶ್ವರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ