ಚಿತ್ರದುರ್ಗ:
ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ./ಯು.ಕೆ.ಜಿ. ಆರಂಭಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಶನಿವಾರ ಧರಣಿ ಆರಂಭಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಮಂಡಳಿ ಎ.ಐ.ಟಿ.ಯು.ಸಿ. ಸಹಯೋಗದೊಂದಿಗೆ ಯೂನಿಯನ್ ಪಾರ್ಕಿನಿಂದ ಮೆರವಣಿಗೆ ಮೂಲಕ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಎರಡು ದಿನಗಳ ಕಾಲ ಧರಣಿ ನಡೆಸಲಿದ್ದಾರೆ.
ಸರ್ಕಾರಿ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸುತ್ತಿರುವುದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಅದಕ್ಕಾಗಿ ಅಂಗನವಾಡಿ ಕೇಂದ್ರಗಳಲ್ಲಿಯೇ ನರ್ಸರಿ/ ಎಲ್.ಕೆ.ಜಿ. ಯು.ಕೆ.ಜಿ. ಪ್ರಾರಂಭಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಪಠ್ಯಪುಸ್ತಕಗಳನ್ನು ಒದಗಿಸಬೇಕು. ಫಲಾನುಭವಿ ಮಕ್ಕಳಿಗೆ ಸಮವಸ್ತ್ರ, ಶೂ ನೀಡಬೇಕು. ಸರ್ಕಾರಿ ಆದೇಶದಲ್ಲಿ ಶಿಕ್ಷಕಿ/ ಶಿಕ್ಷಕ ಹಾಗೂ ಸಹಾಯಕಿಯರನ್ನು ನೇಮಕ ಮಾಡಿಕೊಂಡು ಕ್ರಮವಾಗಿ 7500, 5000 ಮಾಸಿಕ ಗೌರವ ಧನವನ್ನು ಹೆಚ್ಚುವರಿಯಾಗಿ ನೀಡಬೇಕು.
ಯು.ಕೆ.ಜಿ.ಮುಗಿದ ನಂತರ ಮಕ್ಕಳನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೆ ತರಗತಿಗೆ ಪ್ರವೇಶ ಪಡೆಯಲು ಅಂಗನವಾಡಿ ಕೇಂದ್ರದಲ್ಲಿ ವರ್ಗಾವಣೆ ಪತ್ರ ನೀಡುವುದು ಸೇರಿದಂತೆ ಅನೇಕ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಂದಿನ ವರ್ಷ 4100 ಶಾಲೆಗಳಲ್ಲಿ ಎಲ್.ಕೆ.ಜಿ./ಯು.ಕೆ.ಜಿ. ಆರಂಭವಾಗುವುದರಿಂದ ಅಂಗನವಾಡಿ ಕೇಂದ್ರಗಳು ಮುಚ್ಚುವ ಭೀತಿಯಲ್ಲಿವೆ. ಐ.ಸಿ.ಡಿ.ಎಸ್.ಯೋಜನೆಯಲ್ಲಿ ಕಳೆದ ನಲವತ್ತು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಬೀದಿಪಾಲಾಗಲಿದ್ದಾರೆ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ತಮ್ಮ ಅಳಲು ತೋಡಿಕೊಂಡರು.
ಎ.ಐ.ಟಿ.ಯು.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮುನಾಬಾಯಿ, ಉಪಾಧ್ಯಕ್ಷೆ ಭಾಗ್ಯಮ್ಮ, ಖಜಾಂಚಿ ವಿನೋಧಮ್ಮ, ಜಿಲ್ಲಾ ಸಂಚಾಲಕಿ ಸಾವಿತ್ರಮ್ಮ, ರಾಧಮ್ಮ, ರತ್ನಮ್ಮ, ಟಿ.ಕೆ.ಉಮಾಪತಿ, ಡಿ.ಬಸವರಾಜಪ್ಪ, ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್, ಸತ್ಯಕೀರ್ತಿ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.