ಚಿತ್ರದುರ್ಗ:
ಕಲುಷಿತ ಕುಡಿಯುವ ನೀರಿನ ಸಮಸ್ಯೆಯಿಂದ ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಅತಿಸಾರ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಮೀರ್ ಪಿ. ನಂದ್ಯಾಲ್ ಹೇಳಿದರು.
ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ವಿಜ್ಞಾನ ಕೇಂದ್ರ, ಬ್ರಹ್ಮ ಕುಮಾರಿ ಈಶ್ವರಿ ಸಂಸ್ಥೆ, ರೋಟರಿ ಇನ್ನರವ್ಹೀಲ್, ಲಯನ್ಸ್ ಕ್ಲಬ್, ಸರ್ಕಾರಿ ವಿಜ್ಞಾನ ಕಾಲೇಜು, ವಾಸವಿ ಮಹಿಳಾ ಸಂಘ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಜಲ ಸಂರಕ್ಷಣ ಜಾಗೃತಿ ಜಾಥಾ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಶುದ್ದವಾದ ಕುಡಿಯುವ ನೀರು ಸಿಗದೆ, ಕಲುಷಿತ ನೀರಿನ ಸಮಸ್ಯೆಯಿಂದ ಪ್ರತಿ ವರ್ಷವು ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಅದರಲ್ಲೂ ಪ್ರಮುಖವಾಗಿ 5 ವರ್ಷದೊಳಗಿನ ಮಕ್ಕಳು ಹೆಚ್ಚಿನದಾಗಿ ಅತಿಸಾರಕ್ಕೆ ಒಳಗಾಗುತ್ತಾರೆ, ಅದರಿಂದ ಎಲ್ಲರಿಗೂ ಪರಿಶುದ್ದವಾದ ನೀರು ಸಿಗಬೇಕು ಎಂದರೆ ಪರಿಸರವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎನ್.ಬಿ. ವಿಶ್ವನಾಥ್ ಮಾತನಾಡಿ ಕುಡಿಯುವ ನೀರನ್ನು ಶುಚಿತ್ವವಾಗಿ ಇಟ್ಟುಕೊಳ್ಳಬೇಕು. ಕೆಲವು ಕಡೆ ನಗರಗಳಲ್ಲಿ ಚರಂಡಿಯ ಪಕ್ಕದಲ್ಲಿಯೇ ಕುಡಿಯುವ ನೀರಿನ ನಲ್ಲಿಗಳನ್ನು ಅಳವಡಿಸುತ್ತಾರೆ, ಚರಂಡಿ ನೀರು ಹರಿಯುವ ಕಡೆಯಲ್ಲಿ ಕುಡಿಯುವ ನೀರಿನ ನಲ್ಲಿಗಳು ಇರುವುದರಿಂದ ನೀರು ಕಲುಷಿತಗೊಂಡು, ಜನರಲ್ಲಿ ಸಾಂಕ್ರಾಮಿಕ ರೋಗಗಳು ಉಂಟಾಗುತ್ತವೆ ಎಂದರು
ಬೇಸಿಗೆಯಲ್ಲಿ ಜಿಲ್ಲೆಯಾದ್ಯಾಂತ ಕುಡಿಯುವ ನೀರಿನ ಸಮಸ್ಯೆಯಾಗಲಿದ್ದು, ಕುಡಿಯುವ ನೀರಿಗಾಗಿ ಜನರಲ್ಲಿ ಹಾಹಾಕಾರ ಉಂಟಾಗುವ ಸಾಧ್ಯತೆ ಇರುತ್ತದೆ. ಈಗಾಗಿ ಎಲ್ಲರೂ ನೀರನ್ನು ಮಿತವಾಗಿ ಬಳಸಬೇಕು ಹಾಗೂ ನೀರನ್ನು ಕಲುಷಿತಕೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಎಂ. ಬಸವರಾಜಪ್ಪ ಮಾತನಾಡಿ ಮಾನವನಿಗೆ ಮುಖ್ಯವಾಗಿ ವಾಯು, ಜಲ, ಆಹಾರ ಇಲ್ಲದಿದ್ದರೆ ಅವನ ಜೀವಕ್ಕೆ ಕುತ್ತು ಬರುತ್ತದೆ. ಎಲ್ಲಾ ಹಳ್ಳಿಗಳಲ್ಲೂ ಜಲ ಅಭಾವ ಎದ್ದು ಕಾಣುತ್ತದೆ. ಆದ್ದರಿಂದ ಹಳ್ಳಿಗಳಲ್ಲಿ ಇರುವಂತಹ ಕುಡಿಯುವ ನೀರನ್ನು ಮಿತವಾಗಿ ಪರಿಶುದ್ದತೆಯಿಂದ ಬಳಕೆ ಮಾಡಿಕೊಳ್ಳುವಂತೆ ಸಮಾಜಕ್ಕೆ ವಿದ್ಯಾವಂತರು ತಿಳಿಸಿಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ನ್ಯಾಯಾಧೀಶ ಶಂಕರಪ್ಪ ಬಿ ಮಾಲಶೆಟ್ಟಿ, ರೋಟರಿ ಇನ್ನರವ್ಹೀಲ್ ಅಧ್ಯಕ್ಷೆ ರೇಖಾ ಸಂತೋಷ್, ಕಾರ್ಯದರ್ಶಿ ಶೈಲಾಜಾ ಸತ್ಯಾನಾರಾಯಣ, ಸದಸ್ಯೆ ಅಸ್ಮಾ, ಸರ್ಕಾರಿ ವಿಜ್ಞಾನ ಕಾಲೇಜು ರೆಡ್‍ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ರಮೇಶ್ ಐಯ್ಯನಹಳ್ಳಿ ಹಾಗೂ ಸರ್ಕಾರಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಮತ್ತು ಇತರೆ ಶಾಲಾ ವಿದ್ಯಾರ್ಥಿಗಳು ಬಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಿಂದ ಸ್ಟೇಡಿಯಂ ರಸ್ತೆವರೆಗೆ ಜಲ ಜಾಗೃತಿ ಜಾಥಾ ಏರ್ಪಡಿಸಲಾಯಿತು. ಜಾಗೃತಿ ಸಂದೇಶ ಹೊತ್ತ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
