ಬ್ಯಾಡಗಿ:
ಮೂಲ ನಕ್ಷೆಯಂತೆ ಅಸುಂಡಿ ಜಲಾನಯನದಡಿ ಆಣೂರ ಕೆರೆ ಮೂಲಕ 36 ಗ್ರಾಮಗಳ ಕೆರೆ ತುಂಬಿಸುವ ಯೋಜನೆಗೆ ಪ್ರಸಕ್ತ ಬಜೆಟ್ನಲ್ಲಿ ಅನುದಾನ ಮೀಸಲಿಡದೇ ಮೋಸವೆಸಗಿದ ಜಿಲ್ಲೆಯ ರೈತರಿಗೆ ಅನ್ಯಾಯವೆಸಗಿದ ರಾಜ್ಯ ಸರ್ಕಾರದ ಕಾರ್ಯವೈಖರಿ ಖಂಡಿಸಿ ವಿರುದ್ಧ ಫೆ.18 ರಂದು ಬ್ಯಾಡಗಿ ಬಂದ್ ಕರೆ ನೀಡಿದ್ದಾಗಿ ರೈತ ಸಂಘದ ಮುಖಂಡ ಗಂಗಣ್ಣ ಎಲಿ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಫೆ.6 ಮೂರು ದಿನಗಳ ಕಾಲ ಮೂಲನಕ್ಷೆಯಂತೆ ಆಣೂರು ಕೆರೆಗೆ ನೀರು ತುಂಬಿಸಲು ಬಜೆಟ್ನಲ್ಲಿ ಅನುದಾನ ಮಿಸಲಿಡುವಂತೆ ಆಹೋರಾತ್ರಿ ಧರಣಿ ನಡೆಸಲಾಗಿತ್ತು, ಆದರೆ ರೈತರ ಹೋರಾಟಕ್ಕೆ ಸರಕಾರ ಸೂಕ್ತ ಸ್ಪಂದನೆ ನೀಡದೇ ಉದ್ದಟತನ ತೋರಿದ್ದು ರೈತರ ಆಕ್ರೋಶದ ಬಿಸಿಯನ್ನು ಸರ್ಕಾರಕ್ಕೆ ತಲುಪಿಸದೇ ಬಿಡುವುದಿಲ್ಲ ಎಂದರು.
ರೈತರು ಕೇಳಿದ್ದು ನೀರೇ ಹೊರತು ಮಂತ್ರಿ ಪದವಿಯಲ್ಲ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮೂರು ದಿನಗಳ ಕಾಲ ನಡೆಸಿದ ಹೋರಾಟದಲ್ಲಿ ರೈತರು ಕೇಳಿದ್ದು ಕೆರೆಗಳಿಗೆ ನೀರನ್ನೇ ಹೊರತು ಯಾವುದೇ ಮಂತ್ರಿ ಪದವಿಯಲ್ಲ, ಇದನ್ನು ನಿರಾಕರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ, ಸರ್ಕಾರ ಮಾಡುವ ಕೆಲಸವನ್ನು ರೈತಪರ ಸಂಘಟನೆಗಳು ಮಾಡುತ್ತಿವೆ ಇದಕ್ಕೆ ಮಠಾಧೀಶರು ಸಹ ಸಾಥ್ ನೀಡುವ ಮೂಲಕ ರೈತರ ಹೋರಾಟ ನೈತಿಕ ಬೆಂಬಲ ನೀಡಿದ್ದಾರೆ ಎಂದರು.
ಸುಳ್ಳಿನ ಸರದಾರರು:ಆಣೂರ ಕೆರೆಗೆ ನೀರು ತರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ಅಹಮ್ಮದ ಸೇರಿದಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ. ತೋಟಗಾರಿಕಾ ಸಚಿವ ಮನಗೂಳಿ, ಮಾಜಿ ಶಾಸಕ ಶಿವಣ್ಣನವರ ಹಾಗೂ ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಎಲ್ಲರೂ ಬಜೆಟ್ನಲ್ಲಿ ಅನುದಾನ ಘೋಷಣೆ ಮಾಡಿಸುವುದಾಗಿ ಭರವಸೆ ನೀಡಿದ್ದರು, ಕೇವಲ ಮಾತಿಗೆ ಸೀಮಿತವಾಗಿಯೇ ಉಳಿದಿದ್ದು ರೈತರನ್ನು ಮತ್ತಷ್ಟು ಕೆರಳಿಸಿದೆ ಈ ನಿಟ್ಟಿನಲ್ಲಿ ಉಗ್ರ ಹೋರಾಟಕ್ಕೆ ಬ್ಯಾಡಗಿ ಕ್ಷೇತ್ರದ ಜನತೆ ಪಕ್ಷಾತೀತವಾಗಿ ಸಜ್ಜಾಗಿದ್ದು ಬ್ಯಾಡಗಿ ಬಂದ ಹೋರಾಟ ಸರಕಾರಕ್ಕೆ ಎಚ್ಚರಿಕೆ ಘಂಟೆಯಾಗಲಿದೆ ಎಂದರು.
ಉಸ್ತುವಾರಿ ಸಚಿವನೊಬ್ಬ ಡೈಲಾಗ್ ಕಿಂಗ್:ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವಯೋಗಿ ಶಿರೂರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರಅಹ್ಮದ್ ಅವರೊಬ್ಬ ಡೈಲಾಗ್ ಕಿಂಗ್ ಎಂಬು ದರಲ್ಲಿ ಎರಡು ಮಾತಿಲ್ಲ, ಆಣೂರು ಕೆರೆ ವೀಕ್ಷಣೆ ಸಂದರ್ಭದಲ್ಲಿ ಇದೊಂದು ಉತ್ತಮ ಯೋಜನೆಯಾಗಿದ್ದು ಬಜೆಟ್ನಲ್ಲಿ ಅನುದಾನ ಮೀಸಲಿಡಿಸುವುದಾಗಿ ಭರವಸೆ ನೀಡಿದ್ದರು. ರೈತರಿಗೆ ಮಾತು ಕೊಟ್ಟು ಹೋಗಿ ಮುಖ್ಯಮಂತ್ರಿಗಳಿಗೆ ಯಾವುದೇ ಮಾಹಿತಿ ನೀಡದೇ ತಾಲೂಕಿನ ರೈತರಿಗೆ ಅನ್ಯಾಯ ಮಾಡಿದ್ದಾರೆ, ಇಂತಹ ಅವಕಾಶವಾದಿ ಸಚಿವರಿಂದ ಜಿಲ್ಲೆಯ ಅಭಿವೃದ್ಧಿ ಅಸಾಧ್ಯವೆಂದರು.
ನೀರಿಗಾಗಿ ಹೋರಾಟ: ಮೌನೇಶ ಕಮ್ಮಾರ ಮಾತನಾಡಿ, ಆಣೂರ ಕೆರೆ ತುಂಬಿಸುವ ಯೋಜನೆಗೆ ರೈತ ಸಂಘ ಮಾಡಿದ ಅಹೋರಾತ್ರಿ ಧರಣಿಗೆ ತಾಲೂಕಿನಾದ್ಯಂತ ಇರುವ ವಿವಿಧ ಸಂಘಟನೆಗಳಿಂದ ಉತ್ತಮ ಸಹಕಾರ ವ್ಯಕ್ತವಾಗಿದೆ, ಅದರಂತೆ ಬ್ಯಾಡಗಿ ಬಂದ್ ಕರೆಗೆ ಈಗಾಗಲೇ ವರ್ತಕರ ಸಂಘ, ನ್ಯಾಯವಾದಿಗಳ ಸಂಘ, ರಸ್ತೆ ಅಗಲೀಕರಣ ಸಮಿತಿ, ಎಪಿಎಂಸಿ, ಪುರಸಭೆ, ಭಜರಂಗದಳ, ಅಂಗವಿಕಲರ ಸಂಘ, ಗುಲಾಮೆ ಮುಸ್ತಫಾ ಸಮಿತಿ, ಅಂಜುಮನ್ ಸಮಿತಿ, ಕರುನಾಡ ಮಹಿಳಾ ವೇದಿಕೆ, ಜಯ ಕರ್ನಾಟಕ, ಕಾರ್ಮಿಕ ಬಂದುಗಳು, ವಿಶ್ವ ಹಿಂದೂ ಪರಿಷತ್, ಜಿಪಂ, ತಾಪಂ, ಗ್ರಾಪಂ, ಸದಸ್ಯರು ಕಾಂಗ್ರೆಸ್ ಬಿಜೆಪಿ ಎನ್ನದೇ ಪಕ್ಷದ ಮುಖಂಡರು ಬೆಂಬಲ ನೀಡಲಿದ್ದು ನೀರಿರಾಗಿ ಮಾಡುತ್ತಿರುವ ಬ್ಯಾಡಗಿ ಬಂದ್ ಹೋರಾಟ ಹೊಸ ಬಾಷ್ಯ ಬರೆಯಲಿದೆ ಎಂದರು.
ಕಾನೂನು ಭಂಗ ಚಳುವಳಿ:
ಕಿರಣಕುಮಾರ ಗಡಿಗೋಳ ಮಾತನಾಡಿ, ಸತತ 25 ವರ್ಷಗಳ ನಿರಂತವಾಗಿ ಆಣೂರ ಕೆರೆ ನೀರು ತುಂಬಿಸುವ ಯೋಜನೆ ಹೋರಾಟ ಮಾಡಲಾಗುತ್ತಿದೆ. ಒಟ್ಟು 680 ಕೋಟಿ ವೆಚ್ಚದ ಮೂಲ ನಕ್ಷೆಯಂತೆಯ ಕಾಮಗಾರಿಯನ್ನು ಕೈ ಬಿಟ್ಟು ಅಧಿಕಾರದ ಉಳಿಸಿಕೊಳ್ಳಲು ಮಾಜಿ ಶಾಸಕರಾದ ಬಸವರಾಜ ಶಿವಣ್ಣವರ ಅಧಿಕಾರಾವಧಿಯ ಕೊನೆಯಲ್ಲಿ 86 ಕೋಟಿ ವೆಚ್ಚದಲ್ಲಿ ಅಸುಂಡಿ ಕೆರೆ ತುಂಬಿಸುವ ಶಂಖು ಸ್ಥಾಪನೆ ಮಾಡಿ ಮೂಲ ನಕ್ಷೆ ಕೈಬಿಡುವಂತೆ ಮಾಡಿದ್ದಾರೆ. ಆ ಕಾಮಗಾರಿ ಕೂಡಾ ಇನ್ನೂ ಪ್ರಾರಂಭವಾಗಿಲ್ಲ ಇದು ರಾಜಕಾರಣಿಗಳ ಬದ್ಧತೆಯನ್ನು ಪ್ರಶ್ನಿಸುವಂತೆ ಮಾಡಿದೆ, ಆದ್ದರಿಂದ ಬ್ಯಾಡಗಿ ಬಂದ ನಂತರ ಹೆದ್ದಾರಿ ಬಂದ್, ಕಾನೂನು ಭಂಗ ಚಳುವಳಿ, ಸೇರಿದಂತೆ ಉಗ್ರ ಹೋರಾಟ ನಡೆಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕಪ್ಪ ಛತ್ರದ, ಮಲ್ಲೇಶಪ್ಪ ಡಂಬಳ, ಲಕ್ಷ್ಮಣ ಅಮಾತಿ, ನಿಂಗಪ್ಪ ಹೆಗ್ಗಣ್ಣನವರ, ಪ್ರವೀಣ ಹೊಸಗೌಡ್ರ, ಬಸವರಾಜ ಬಡ್ಡಿಯವರ, ಗದಿಗೆಪ್ಪ ಬಡ್ಡಿಯವರ, ನಾಗನಗೌಡ ತೆವರಿ, ಬಸವರಾಜ ಹುಲ್ಲತ್ತಿ, ಬಿ.ಎಸ್.ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.