ಬೆಂಗಳೂರು
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ನೂರು ದಿನಗಳಲ್ಲಿ ಉತ್ತರ ಪತ್ರಿಕೆ ಎಂದು ಪರಿಗಣಿಸು ವುದಾದರೆ ಅದು ಪಡೆದಿರುವುದು 100 ಕ್ಕೆ ಸೊನ್ನೆ ಅಂಕ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಇಂದಿಲ್ಲಿ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಸರ್ಕಾರದ ಸಾಧನೆಯೇ ಇಲ್ಲ.ಹೀಗಾಗಿ ಅದು ಅಂಕಗಳನ್ನು ಗಳಿಸುವ ಪ್ರಶ್ನೆಯೇ ಇಲ್ಲ ಎಂದರು.ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಆಡಳಿತ ಯಂತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕಿತ್ತು.ಅದಕ್ಕಾಗಿ ಬಾರುಕೋಲು ಬಳಸಬೇಕಿತ್ತು.ಆದರೆ ಬಾರುಕೋಲು ಹಿಡಿಯುವುದರಲ್ಲೇ ಈ ಸರ್ಕಾರ ವಿಫಲವಾಗಿದೆ ಎಂದರು.
ಅತಿವೃಷ್ಟಿ ಹಾಗೂ ಬರಗಾಲದ ಸನ್ನಿವೇಶವನ್ನು ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.ವರ್ಗಾವಣೆ ಧಂದೆಯಲ್ಲಿ ತನ್ನ ಸಂಪೂರ್ಣ ಗಮನ ಹರಿಸಿದೆ.ಪರಿಣಾಮವಾಗಿ ರಾಜ್ಯದ ಜನ ಪರದಾಡುವಂತಾಗಿದೆ ಎಂದು ದೂರಿದರು.ಅತಿವೃಷ್ಟಿ ಬಂದಾಗ ಕೇಂದ್ರಕ್ಕೆ ವರದಿ ನೀಡಿದ ರಾಜ್ಯ ಸರ್ಕಾರ 24 ಲಕ್ಷಕ್ಕೂ ಹೆಚ್ಚು ಮನೆಗಳು ಬಿದ್ದು ಹೋಗಿವೆ ಎಂದಿತ್ತು.ಈಗ ಮಾಧ್ಯಮಗಳಿಗೆ ನೀಡಿದ ಜಾಹೀರಾತಿನಲ್ಲಿ 97 ಸಾವಿರ ಮನೆಗಳು ಹಾನಿಗೀಡಾಗಿವೆ ಎಂದು ಹೇಳಿದೆ.ಇದರಲ್ಲಿ ಯಾವುದು ನಿಜ?
ಮಾತೆತ್ತಿದರೆ ಸಿದ್ದರಾಮಯ್ಯ ಅವರಿಗೆ ವಿಷಯ ಗೊತ್ತಿಲ್ಲ.ಹೀಗಾಗಿ ಸರ್ಕಾರದ ಬಗ್ಗೆ ತಪ್ಪಾಗಿ ಮಾತನಾಡುತ್ತಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಾರೆ.ಮನೆ ಹಾನಿಯ ಬಗ್ಗೆ ವೈರುಧ್ಯದ ಹೇಳಿಕೆಗಳನ್ನು ನೀಡಿದ್ದು ನೀವಾ?ನಾನಾ ಮಿಸ್ಟರ್ ಯಡಿಯೂರಪ್ಪ?ಎಂದು ಪ್ರಶ್ನಿಸಿದರು.
ಅತಿವೃಷ್ಟಿಯಿಂದ ತೊಂದರೆಗೊಳಗಾದ ಜನರಿಗೆ ಪರಿಹಾರ ನೀಡಿಲ್ಲ ಎಂದು ಮಾಧ್ಯಮಗಳೇ ದಾಖಲೆ ಸಹಿತ ಬರೆದಿವೆ.ನಾನು ಬರೆದಿಲ್ಲ.ಬರಗಾಲದಿಂದ ಎಲ್ಲೆಲ್ಲಿ ಸಂಕಷ್ಟದ ಪರಿಸ್ಥಿತಿ ಇದೆ ಎಂದು ಮಾಧ್ಯಮಗಳು ಬರೆದಿವೆ.ನಾನು ಬರೆದಿಲ್ಲ.ಈ ಸರ್ಕಾರ ಆಡಳಿತದ ಎಲ್ಲ ರಂಗಗಳಲ್ಲಿ ಹೇಗೆ ವಿಫಲವಾಗಿದೆ ಎಂದು ಮಾಧ್ಯಮಗಳು ಹೇಳಿವೆ.ನಾನು ಹೇಳಿಲ್ಲ.
ಹೀಗಿರುವಾಗ ನಾನು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಬೇಕು ಎನ್ನುತ್ತೀರಲ್ಲ?ಹಾಗಿದ್ದರೆ ಮಾಧ್ಯಮಗಳು ಬರೆದಿರುವುದು ತಪ್ಪೇ?ನಾನು ನೆರೆಪೀಡಿತ,ಬರಪೀಡಿತ ಪ್ರದೇಶಗಳಿಗೆ ಹೋಗಿ ವಿವರ ಸಂಗ್ರಹಿಸಿರುವುದು ತಪ್ಪೇ?ಎಂದು ಅವರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಇವರಿಗೆ ಕೆಲಸವನ್ನೇ ಮಾಡಲಾಗುತ್ತಿಲ್ಲ.ಬರೀ ಸರ್ಕಾರಿ ನೌಕರರ ವರ್ಗಾವಣೆ ಮಾಡಿಕೊಂಡು ಕುಳಿತಿದ್ದಾರೆ.ಇವರು ಅಧಿಕಾರಕ್ಕೆ ಬಂದಾಗ ಸಾರ್ವತ್ರಿಕ ವರ್ಗಾವಣೆಯೇ ಮುಗಿದು ಹೋಗಿತ್ತು.ಹೀಗಿದ್ದರೂ ಅಧಿಕಾರಕ್ಕೆ ಬಂದು ಇಷ್ಟು ದಿನಗಳಲ್ಲಿ ದಂಡಿಯಾಗಿ ವರ್ಗಾವಣೆಗಳನ್ನು ಮಾಡಿದ್ದಾರೆ.
ಇದೇ ಅಧಿಕಾರಿಗಳು ಒಂಭತ್ತು ತಿಂಗಳು ಮುಂದುವರೆದಿದ್ದರೆ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿಯುತ್ತಿತ್ತಾ ಮಿಸ್ಟರ್ ಯಡಿಯೂರಪ್ಪ ಎಂದು ಪ್ರಶ್ನಿಸಿದ ಅವರು,ಹೋದಲ್ಲಿ,ಬಂದಲ್ಲಿ ಸುಳ್ಳು ಹೇಳಿಕೊಂಡು ತಿರುತ್ತಿರುವವರು ನೀವು.ನಾನಲ್ಲ ಎಂದು ತಿರುಗೇಟು ಹೊಡೆದರು.ಯಡಿಯೂರಪ್ಪ ಅವರ ಸರ್ಕಾರವೇ ಅನೈತಿಕ ಸರ್ಕಾರ.ಇದಕ್ಕೆ ಜನಾದೇಶವೂ ಇಲ್ಲ.ಮತಾದೇಶವೂ ಇಲ್ಲ ಎಂದು ಮಾರ್ಮಿಕವಾಗಿ ನುಡಿದ ಅವರು,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡಾ 38 ಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದರೆ ಬಿಜೆಪಿ ಶೇಕಡಾ 36 ಪ್ಲಸ್ ಮತಗಳನ್ನು ಗಳಿಸಿದೆ ಎಂದು ಹೇಳಿದರು.
ರಾಜ್ಯ ವಿಧಾನಸಭೆಯಲ್ಲಿ ಇವರಿಗೆ ಸರ್ಕಾರ ರಚಿಸಲು ಅಗತ್ಯವಾದ 113 ಶಾಸಕ ಬಲವೂ ಇಲ್ಲ.ಈಗಿರುವುದು ಕೇವಲ 105 ಶಾಸಕ ಬಲ.ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿ ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದವರು ಇವರು.ಈಗ ನೋಡಿದರೆ ರಾಜೀನಾಮೆ ನೀಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ನಾವು ಸೆಳೆದಿಲ್ಲ ಎಂದು ಹೇಳುತ್ತಾರೆ.ಹಾಗಿದ್ದರೆ ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡುತ್ತಿರುವುದೇಕೆ?ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಇದರ ಫಲವನ್ನು ಉಣ್ಣಲಿದ್ದೀರಿ ಎಂದು ಎಚ್ಚರಿಕೆ ನೀಡಿದ ಅವರು ಉಪಚುನಾವಣೆ ನಡೆಯಲಿರುವ ಹದಿನೈದು ಕ್ಷೇತ್ರಗಳಲ್ಲಿ ಹನ್ನೆರಡು ಕ್ಷೇತ್ರಗಳಲ್ಲಿ ನಾವೇ ಗೆಲ್ಲಲಿದ್ದೇವೆ.ಆ ಮೂಲಕ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುವ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದು ಭವಿಷ್ಯ ನುಡಿದರು.
ಆರ್‍ಸಿಇಪಿ ಒಪ್ಪಂದದ ಮೂಲದ ಮೋದಿ ಸರ್ಕಾರ ವಿದೇಶಗಳಿಂದ ಸುಂಕರಹಿತ ಹಾಲು ತರಿಸಲು ಹೊರಟಿದೆ.ಇದರ ಪರಿಣಾಮವಾಗಿ ಹೈನುಗಾರಿಕೆಯನ್ನು ಅವಲಂಬಿಸಿದ ರೈತರು ಬೀದಿಗೆ ಬರುತ್ತಾರೆ.ಈ ಹಿಂದೆ ವಿಶ್ವವ್ಯಾಪಾರ ಒಪ್ಪಂದ ಜಾರಿಗೆ ಬಂದ ನಂತರ ನಮ್ಮಲ್ಲಿ ರೇಷ್ಮೆ ಉದ್ಯಮವೇ ನೆಲ ಕಚ್ಚಿ ಹೋಯಿತು.ಈಗ ಆರ್‍ಸಿಇಪಿ ಒಪ್ಪಂದದಿಂದ ಅಸಂಖ್ಯಾತ ಜನ ಬೀದಿಗೆ ಬರುತ್ತಾರೆ ಎಂದರು.
ಮಹಾರಾಷ್ಟ್ರ,ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಜನರ ಮನಸ್ಸು ಕ್ರಮೇಣ ಯಾವ ಕಡೆ ತಿರುಗುತ್ತಿದೆ ಎಂಬುದರ ಸಂಕೇತ.ಲೋಕಸಭಾ ಚುನಾವಣೆಗೂ,ವಿಧಾನಸಭಾ ಚುನಾವಣೆಗೂ ಅಂತರವಿದೆ ಎಂಬುದು ನಿಜ.ಆದರೆ ಮುಂದಿನ ದಿನಗಳಲಿ ಗಮನದಲ್ಲಿಟ್ಟುಕೊಂಡು ಜನ ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ಉಪಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ನನ್ನ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ ಎಂಬುದು ಸಂಪೂರ್ಣ ಸುಳ್ಳು . ಎಲ್ಲ ಚರ್ಚೆಯ ನಂತರವೇ ಟಿಕೆಟ್ ಹಂಚಿಕೆ ಪ್ರಕ್ರಿಯೆ ನಡೆದಿದೆ ಎಂದರು.ಮಾಧ್ಯಮ ಸಂವಾದ ಕಾರ್ಯಕ್ರಮ ದಲ್ಲಿ ಸದಾಶಿವ ಶೆಣೈ, ಹೆಚ್.ವಿ.ಕಿರಣ್, ಆರ್.ಟಿ.ವಿಠ್ಠಲಮೂರ್ತಿ, ಎಂ.ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ