ಬ್ಯಾಡಗಿ:
ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ವಿಚಾರಗಳು ಕೇಳಿಬರುತ್ತಿದ್ದು ಭಾರತವೀಗ ಸಂದಿಗ್ಧ ಸ್ಥಿತಿಯನ್ನು ಎದರಿಸುತ್ತಿದೆ, ರಾಷ್ಟ್ರಾಭಿಮಾನ ಸೇರಿದಂತೆ ದೇಶವೇ ಮೊದಲೆಂಬ ವಿಚಾರಗಳನ್ನು ಮಕ್ಕಳಲ್ಲಿ ಮೂಡಿಸುವಂತಹ ಕೆಲಸದಲ್ಲಿ ಶಿಕ್ಷಣ ಸಂಸ್ಥೆಗಳು ಜವಬ್ದಾರಿಗಳನ್ನು ನಿಭಾಯಿಸುವ ಮೂಲಕ ಕುಟುಂಬದ ಬದಲಾಗಿ ತನ್ನ ದೇಶಕ್ಕಾಗಿ ಪ್ರಾಣ ಕೊಡುವಂತಹ ಮಕ್ಕಳನ್ನು ರೂಪಿಸಬೇಕಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆಯ ಹದಿನೈದನೇ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಸುಮಾರು 40 ಯೋಧರನ್ನು ಭಯೋತ್ಪಾದಕರು ಬಲಿ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯರಾದ ನಾವೆಲ್ಲರೂ ತಲೆ ತಗ್ಗಿಸಬೇಕಾಗಿದೆ, ಕಾರಣವಿಷ್ಟೇ ಉಗ್ರಗಾಮಿ ಸಂಘಟನೆಯನ್ನು ಸೇರಿಕೊಂಡ ಯುವಕ ಭಾರತೀಯನೆಂಬುದು ಅತ್ಯಂತ ಖೇದದ ಸಂಗತಿ ಎಂದರು.
ಶಿಕ್ಷಣದ ಕೊರತೆ: ಉಗ್ರ ಸಂಘಟನೆಯನ್ನು ಸೇರಿಕೊಂಡ ಯುವಕ ಅದಿಲ್ ದಾರ್ನಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಶಿಕ್ಷಣ ದೊರಕಿಲ್ಲ ಎಂಬ ವಾದವನ್ನು ತಳ್ಳಿ ಹಾಕುವಂತಿಲ್ಲ, ಆ ಕಾರಣಕ್ಕಾಗಿ ಉಗ್ರ ಸಂಘಟನೆಯನ್ನು ಬೆನ್ನು ಹತ್ತಿರಬಹುದು ಎಂಬ ಶಂಕೆಗಳು ಮೂಡುತ್ತಿವೆ, ಈ ಎಲ್ಲ ಕಾರಣಕ್ಕಾಗಿ ಶಿಕ್ಷಕರು ದೈನಂದಿನ ಪಾಠ ಪ್ರವಚನಗಳ ಜೊತೆಗೆ, ದೇಶಭಕ್ತಿ ವಿಚಾರಗಳನ್ನು ಮೂಡಿಸುವಂತಹ ಕೆಲಸವಾಗಬೇಕಾಗಿದೆ ಎಂದರು.
ತಪ್ಪು ಹೆಜ್ಜೆಯಿಟ್ಟರೆ ಭವಿಷ್ಯವಿಲ್ಲ:ದೇಶದ ಸಾರ್ವಭೌಮತ್ವದ ವಿಚಾರವಾಗಿ ತಪ್ಪು ಹೆಜ್ಜೆಗಳನ್ನಿಟ್ಟಲ್ಲಿ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಈಗಾಗಲೇ ಎಲ್ಲರಿಂದಲೂ ಸಾಕಷ್ಟು ತಪ್ಪುಗಳಾಗಿವೆ, ಮುಂದಿನ ದಿನಗಳಲ್ಲಾದರೂ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಮೂಲಕ ದೇಶದ ಭವಿಷ್ಯವನ್ನು ಉಜ್ವಲಗೊಳಿಸಬೇಕಾಗಿದೆ ಎಂದರು.
ಜನ್ಮಭೂಮಿಯ ಮಾನ ಹಾಗೂ ಸ್ಥಳದ ರಕ್ಷಣೆಗೆ ಭಾರತೀಯರಾದ ನಾವೂ ಎಲ್ಲರೂ ತ್ಯಾಗ ಮನೋಭಾವನೆ ಹೊಂದಿರ ಬೇಕು, ಎಲ್ಲ ಧರ್ಮದ ಮಹಿಳೆಯರು ಬಹಳ ಮಕ್ಕಳಿಗೆ ಜನ್ಮ ನೀಡುವ ಮೂಲಕ ನಮ್ಮ ದೇಶದ ಸೈನ್ಯಕ್ಕೆ ಒಬ್ಬರನ್ನಾದರೂ ಮಕ್ಕಳನ್ನು ಸೇರಿಸುವಂತೆ ಪ್ರತಿಯೊಬ್ಬ ತಾಯಂದಿರು ಸಿಧ್ದರಾಗಲು ಶಾಸಕರು ಕೋರಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಭಣ್ಣ ಅಂಗಡಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಅವರಿಗೆ ಸನ್ಮಾನ ಮಾಡಲಾಯಿತು, ಶ್ರೀವೀರಭದ್ರೇಶ್ವರ ಜಾತ್ರಾ ಸಮಿತಿಯ ಅಧ್ಯಕ್ಷ ಚಂದ್ರಶೇಖರಯ್ಯ ಆಲದಗೇರಿ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಶಿವಣ್ಣ ಬಣಕಾರ, ಆಡಳಿತ ಮಂಡಳಿ ಸದಸ್ಯರಾದ ಮಲ್ಲಣ್ಣ ಹುಚಗೊಂಡರ, ಶಿವಣ್ಣ ಶೆಟ್ಟರ, ನಾಗಯ್ಯ ಕಲ್ಮಠ, ದ್ರಾಕ್ಷಾಯಿಣಿ ಚವ್ಹಾಣ, ಪ್ರಧಾನ ಗುರುಮಾತೆ ಶ್ರೀ ದೇವಿ ಉದಾಸಿಮಠ, ಸೂಗೀರಪ್ಪ ಶೆಟ್ಟರ, ಚಂದ್ರಣ್ಣ ಶೆಟ್ಟರ, ಧನಶೆಟ್ರ ಕೊಂಚಿಗೇರಿ, ಜಗದೀಶ ರೋಣದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ವೀಣಾ ಒಳಗುಂದಿಮಠ, ಸ್ವಾಗತಿಸಿದರು. ಕವಿತಾ ಬೈರಾಪೂರ ನಿರೂಪಿಸಿದರು. ವಜ್ರೇಶ್ವರಿ ಮತ್ತೂರ ವಂದಿಸಿದರು.