ಶಿಗ್ಗಾವಿ :
ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದ ಬಳ್ಳಾರಿ ಅಕ್ರಮ ಗಣಿಗಾರಿಕೆ ನಂತರ ಈಗ ತಾಲೂಕಿನ ಕೆಲ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಸದ್ದಿಲ್ಲದೇ ಸಾಗುತ್ತಿದೆ ಎನ್ನಬಹುದು, ಅದರಲ್ಲಿಯೂ ಅರೇಮಲೆನಾಡು ಪ್ರದೇಶದಲ್ಲಿ ಹಾಗೂ ಕೆಂಗಾಪೂರ, ಜಕ್ಕನಕಟ್ಟಿ, ಶಿಡ್ಲಾಪೂರ, ಹೋತನಹಳ್ಳಿ, ಮೂಕಬಸರೀಕಟ್ಟಿ, ಹುನಗುಂದ, ಶಿಂಗಾಪುರ ಸೇರಿದಂತೆ ಜೇಕಿನಕಟ್ಟಿ ರೋಡ್ (ರಾಜೀವ ನಗರ), ರಂಭಾಪುರಿ ಕಾಲೇಜು ಹಿಂದುಗಡೆ, ವಿವಿದೆಡೆಗಳಲ್ಲಿ ಅವ್ಯಾಹತವಾಗಿಯೇ ಇದೆ ಎನ್ನಬಹುದು.
ಈ ಪ್ರದೇಶದ ಕೆಲ ಕಡೆಗಳಲ್ಲಿ ಗೃಹ ನಿರ್ಮಾಣಕ್ಕಾಗಿ ಯೋಗ್ಯವಾದ ಚರಿಕಲ್ಲು (ಲೆಟ್‍ರೆಟ್) ಗಣಿ ಅಕ್ರಮಕ್ಕೆ ಹೆಸರು ಗಳಿಸಿಕೊಂಡಿದೆ. ಚರಿಕಲ್ಲು ಗಣಿ ಗಾರಿಕೆಗೆ ಇಲ್ಲಿರುವ ನಿಕ್ಷೇಪಗಳೇ ಮೂಲ ಕಾರಣವಾಗಿದೆ, ಇದರಿಂದ ಬೆಳೆ ಬಾರದಂತೆ ಇಲ್ಲಿನ ಫಲವತ್ತಾದ ಕೃಷಿ ಭೂಮಿಗಳು ಶಾಶ್ವತವಾಗಿ ಅವಸಾನದತ್ತ ಸರಿಯತ್ತಿವೆ. ರೈತರ ಪ್ರಮುಖ ಬೆಳೆಗಳಾದ ಜೋಳ, ಗೋವಿನಜೋಳ, ಮೆಣಸಿನಕಾಯಿಯ ಜೊತೆಗೆ ತರಕಾರಿ ಬೆಳೆ ಸೇರಿದಂತೆ ಭತ್ತದ ಆಹಾರಕ್ಕೆ ಕಲ್ಲೇಟು ನೀಡುತ್ತಿದೆ.
ಅನಾದಿ ಕಾಲದಿಂದ ಈವರೆಗೆ ಸಾಗಿ ಬಂದ ಸಾಂಪ್ರದಾಯಕ ಕೃಷಿ ಪದ್ಧತಿ ದಿನದಿಂದ ದಿನಕ್ಕೆ ಕಣ್ಮರೆಯಾಗುವ ಆತಂಕ ವ್ಯಕ್ತವಾಗುತ್ತಿದೆ. ಸಾಗುವಳಿ ಭೂಮಿಯಲ್ಲಿರುವ ಅಂತರಾಳದ ಖನಿಜ ಆಕ್ರಮ ವ್ಯಾಪಾರೀಕರಣ ಕಾನೂನು ಭಯ ಇಲ್ಲದೆ ಆರಂಭವಾಗಿದೆ.
ದುಡ್ಡಿನ ದುರಾಸೆಗೆ ಬಿದ್ದು ಚರಿಕಲ್ಲು ಅಗೆಯವ ಕಳ್ಳ ದಂದೆಗಿಳಿದು, ಮುಗ್ಧ ರೈತರನ್ನು ಶಾಶ್ವತವಾಗಿ ಬಲಿಪಶು ಮಾಡಲು ಹೊರಟಿರುವುದು ವಿಪರ್ಯಾಸದ ಸಂಗತಿ. ರೈತರು ಭೂಮಿ ಇದ್ದೂ ನಿರಾಶ್ರಿತರಂತೆ ಬದುಕುವ ಪರಿಸ್ಥಿತಿ ಎದುರಾಗುತ್ತಿದೆ.
ಪರಿಸರಕ್ಕೂ ಕುತ್ತು :
ಭೂ-ಗಣಿ ವಿಜ್ಞಾನ, ಕಂದಾಯ, ಸಣ್ಣ ಕೈಗಾರಿಕೆ ಮತ್ತು ಪರಿಸರ ಮತ್ತು ಮಾಲಿನ್ಯ ಇಲಾಖೆ ಪರವಾನಿಗೆ ಇಲ್ಲದೇ ಅರೆಮಲೆನಾಡು ಸೇರಿದಂತೆ ತಾಲೂಕಿನ ಕೆಲ ಗ್ರಾಮಗಳಲ್ಲಿ ನಡೆಯತ್ತಿರುವ ಆಕ್ರಮ ಗಣಿಗಾರಿಕೆಯಿಂದ ಬೆಳೆ ಹಾನಿ ಜತೆಗೆ ಪರಿಸರಕ್ಕೂ ಕುತ್ತು ಎದುರಾಗಿದೆ, ಸಂಬಂಧಪಟ್ಟ ಅಧಿಕಾರಿಗಳು ಗಣಿಗಾರಿಕೆ ಕಡಿವಾಣಕ್ಕೆ ಮುಂದಾಗಿಲ್ಲ. ಸರಕಾರವಾಗಲಿ, ಚುನಾಯಿತ ಪ್ರತಿನಿಧಿಗಳು ಇತ್ತ ಲಕ್ಷ ವಹಿಸುತ್ತಿಲ್ಲ. ಪ್ರಮುಖವಾಗಿ ಗಣಿ ಮತ್ತು ಭೂ-ವಿಜ್ಞಾನ ಇಲಾಖೆ ಅಧಿಕಾರಿಗಳು, ತಾಲೂಕಿನ ಬಹುತೇಕ ಸ್ಥಳದಲ್ಲಿ ಆಕ್ರಮ ಗಣಿಗಾರಿಕೆ ಕಂಡರೂ ಜಾಣ ಕುರಡರಂತೆ ವರ್ತಿಸುತ್ತಿದ್ದಾರೆ ಇದು ಪರಿಸರ ಪ್ರೇಮಿಗಳಿಗೆ ಬೇಸರ ತಂದಿದೆ.
ಸಂರಕ್ಷಿತ ಪ್ರದೇಶಕ್ಕೂ ಲಗ್ಗೆ :
ಆಕ್ರಮ ದಂದೆಗಾರರು ಶೈಕ್ಷಣಿಕ ಸಂಸ್ಥೆಗಳ ಪ್ರದೇಶ, ಶಾಲಾ ಮೈದಾನಗಳು, ಸರಕಾರಿ ಖುಲ್ಲಾ ಜಾಗೆಗಳು, ಅಲ್ಲದೇ ಸಂರಕ್ಷಿತ ಅರಣ್ಯ ವಲಯ ಪಕ್ಕಕ್ಕೆ ಅಷ್ಟೇಲ್ಲ ಸಂರಕ್ಷಿತ ವಲಯ ಎಂದು ಹೇಳಲಾಗುವ ಸ್ಥಳಗಳಲ್ಲಿ ಸಹ ಕಲ್ಲು ಗಣಿ ಆಕ್ರಮ ಅವ್ಯಾಹತವಾಗಿ ನಡೆಯತ್ತಿದೆ. ರೈತರ ಉತ್ತಮ ಕೃಷಿ ಭೂಮಿಗಳಲ್ಲಿ ಹತ್ತಾರು ಅಡಿ ಆಳವಾದ ಕಂದಕ ನಿರ್ಮಿಸುತ್ತಿದ್ದಾರೆ.
ರಾತ್ರಿ ಹೊತ್ತಿನಲ್ಲಿ ಕಲ್ಲು ಕೊರೆತ ಮಾಡಲು ಸಾಕಷ್ಟು ಮಷೀನ್‍ಗಳ ಸದ್ದು ಸಾಮಾನ್ಯವೆನಿಸಿದೆ. ಕಡಿವಾಣ ಹಾಕುವ ನೆಪದಲ್ಲಿ ಇಲಾಖೆ ಅಧಿಕಾರಿಗಳು ಕೇವಲ ಪೋಸ್ ನೀಡಿದರೂ ಹೊರತು, ಕ್ರಮಕೈಗೊಂಡಿಲ್ಲ. ಈ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ರೈತರು ಹೋರಾಟಕ್ಕಿಳಿಯವ ಮುನ್ನ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು, ಕ್ರಮ ಕೈಗೊಳ್ಳಬೇಕಿದೆ. ರೈತರ ಸಾಗುವಳಿ ಭೂಮಿ ಸಂರಕ್ಷಣೆಯತ್ತ ನಿಗಾವಹಿಸಬೇಕಿದೆ. ಇಲ್ಲದೇ ಹೋದಲ್ಲಿ ರೈತನ ಬದುಕು ಮೂರಾಬಟ್ಟೆಯಾಗುವ ದಿನ ದೂರವಿಲ್ಲ.
ಕಂದಾಯ ಇಲಾಖೆ ಮತ್ತು ಪೋಲೀಸ್ ಇಲಾಖೆಯ ದಿವ್ಯ ನಿರ್ಲಕ್ಷ್ಯ :
ಇನ್ನು ಕಂದಾಯ ಇಲಾಖೆ ಮತ್ತು ಪೋಲೀಸ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಪರೋಕ್ಷ ಬೆಂಬಲದಿಂದಲೇ ತಾಲೂಕಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ಸಿಮೀತವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಅಕ್ರಮದಲ್ಲಿ ಕೆಲ ರಾಜಕೀಯ ವ್ಯಕ್ತಿಗಳ ಕೈಚಳಕ ಬಲು ಜೋರಾಗಿಯೇ ಸಾಗಿದೆ. ಸುಮಾರು ವರ್ಷಗಳಿಂದ ಈ ಪ್ರದೇಶದಲ್ಲಿ ಕದ್ದು-ಮುಚ್ಚಿ ನಡೆಯತ್ತಿರುವ ಅಕ್ರಮ ಗಣಿಗಾರಿಕೆ ಕಳೆದ ಐದು ವರ್ಷದಿಂದ ಬಹಿರಂಗವಾಗಿ ತನ್ನ ವ್ಯಾಪ್ತಿಯೂ ಹೆಚ್ಚಿಸಿ ಕೊಂಡಿದೆ. ಗಣಿಗಾರಿಕೆಯಲ್ಲಿ ತೊಡಗಿದ ಬಹುತೇಕ ಜನರು ರಾಜಕಾರಣಿಗಳ ಹಿಂಬಾಲಕರಾಗಿದ್ದಾರೆ.
“ಇವರು ಮಾಡಿದ್ದೇ ಕಾರುಬಾರ್ ನಡೆಸಿದ್ದೇ ದರ್ಬಾರ್” ಎನ್ನುವಂತಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ಕಣ್ಣಿಗೆ ಕಂಡರೂ ಅಧಿಕಾರಿಗಳು ಜಾಣ ಕುರುಡತನ ಪ್ರದರ್ಶಿಸುತ್ತಿದ್ದಾರೆ. ಆ ಮೂಲಕ ಅಪರೋಕ್ಷವಾಗಿ ಗಣಿಗಾರಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಅಕ್ರಮದ ಉರುಳು ಕಾಯ್ದೆಟ್ಟಿರುವ ಅರಣ್ಯ ಪ್ರದೇಶ ಪಕ್ಕ ಅಷ್ಟೇ ಅಲ್ಲ ಸುತ್ತು-ಮುತ್ತು ಪ್ರದೇಶಗಳಿಗೂ ತನ್ನ ಕಬಂಧ ಬಾಹು ಚಾಚಿದೆ. ಇಲ್ಲಿ ಸಾಗುವಳಿ ಭೂಮಿ ಸಹ ಗಣಿಗಾರಿಕೆ ಅಬ್ಬರಕ್ಕೆ ಸಿಕ್ಕು ನಲಗುವಂತಾಗಿದೆ. ಬೆಳೆ ಬಾರದಂತ ಸ್ಥಿತಿ ತಲುಪಿದೆ. ಒಟ್ಟಾರೆ ಕೃಷಿಯು ಉಳಿಯಬೇಕಾದರೇ ಅಕ್ರಮ ಗಣಿಗಾರಿಕೆ ಸ್ಥಗಿತಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ತಾಲೂಕು ಆಡಳಿತ ಗಮನಿಸಿ ಕ್ರಮಕೈಗೊಳ್ಳಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








