ಮಾತು ಕಡಿಮೆ ಮಾಡಿ ಪರಿಹಾರ ತನ್ನಿ : ರೇಣುಕಾಚಾರ್ಯ

ಬೆಂಗಳೂರು

    ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದ್ದು ಇದಕ್ಕೆ ಧ್ವನಿಗೂಡಿಸಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೂಡಾ:ಹಾದಿ-ಬೀದಿಯಲ್ಲಿ ಮಾತನಾಡುವ ಬದಲು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ನೆರೆಪರಿಹಾರಕ್ಕೆ ಹಣ ತೆಗೆದುಕೊಂಡು ಬನ್ನಿ ಎಂದು ಪಕ್ಷದ ನಾಯಕರು,ಸಂಸದರನ್ನು ತಿವಿದಿದ್ದಾರೆ.

     ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಪ್ರಧಾನಿ ನರೇಂದ್ರಮೋದಿ ಅವರನ್ನು ದೇವರು ಎಂದು ವೈಭವೀಕರಿಸುವುದು ,ನಮಗೆ ಕೇಂದ್ರದ ಪರಿಹಾರ ಬೇಕಿಲ್ಲ ಎಂದು ಮಾತನಾಡುವ ಬದಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಿ.ಪರಿಹಾರಕ್ಕೆ ಹಣ ತೆಗೆದುಕೊಂಡು ಬನ್ನಿ ಎಂದು ಕೇಂದ್ರದಲ್ಲಿ ಸಚಿವರಾಗಿರುವ ರಾಜ್ಯದ ನಾಯಕರು,ಸಂಸದರಿಗೆ ಹೇಳಿದರು.

     ನೆರೆಪರಿಹಾರ ಕೋರಿ ಬಂದವರ ಎದುರು ತಮ್ಮ ಸಂಕಷ್ಟ ತೋಡಿಕೊಂಡ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧವೂ ವಾಗ್ಧಾಳಿ ನಡೆಸಿದ ಅವರು,ಕಷ್ಟ ಹೇಳಿಕೊಂಡು ಬಂದವರೆದು ನಿಮ್ಮ ಕಷ್ಟ ತೋಡಿಕೊಳ್ಳಬೇಡಿ.ನೀವು ಜನರ ಕಷ್ಟ ನಿವಾರಿಸಲು ಬಂದವರು.ನಿಮ್ಮ ಕಷ್ಟ ಹೇಳಿಕೊಳ್ಳಲು ಅಧಿಕಾರಕ್ಕೆ ಬಂದವರಲ್ಲ ಎಂದು ನುಡಿದರು.

     ಈ ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಸಮ್ಮಿಶ್ರ ಸರ್ಕಾರ ಬೊಕ್ಕಸವನ್ನು ಲೂಟಿ ಹೊಡೆದು ಖಾಲಿ ಮಾಡಿ ಹೋಗಿದೆ.ಇದರಿಂದ ನೆರೆ ಪರಿಹಾರ ಕಾರ್ಯಕ್ಕೆ ನಮಗೆ ಹಣದ ತಾತ್ಕಾಲಿಕ ತೊಂದರೆ ಆಗಬಹುದು.ಆದರೆ ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿ ಮುಖ್ಯಮಂತ್ರಿಗಳಿಗಿದೆ ಎಂದರು.

    ನೆರೆಪರಿಹಾರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪಗಳಿಗೆ ನೇರ ಉತ್ತರ ನೀಡದ ಅವರು,ಸಧ್ಯದಲ್ಲೇ ಅತಿವೃಷ್ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನೆರವು ದೊರೆಯಲಿದೆ ಎಂದರು.ಆದರೆ ಇದೇ ಕಾರಣಕ್ಕಾಗಿ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ,ಜೆಡಿಎಸ್ ನಾಯಕ ಶ್ರೀನಿವಾಸ್ ತರದವರು ವಾಚಾಮಗೋಚರವಾಗಿ ಟೀಕಿಸುತ್ತಿರುವುದು ಸರಿಯಲ್ಲ.ಈ ವಿಷಯದಲ್ಲಿ ಯಾರೂ ರಾಜಕೀಯ ಮಾಡಕೂಡದು ಎಂದರು.

     ಸಿ.ಎಂ.ಇಬ್ರಾಹಿಂ ಅವರಂತೂ ಮುಖ್ಯಮಂತ್ರಿಗಳ ಬಗ್ಗೆ,ಸರ್ಕಾರದ ಬಗ್ಗೆ ಆಡಬಾರದ ಮಾತನ್ನು ಆಡುತ್ತಿದ್ದಾರೆ.ಅನರ್ಹಗೊಂಡ ಶಾಸಕರ ಬಗ್ಗೆ ಮಾತನಾಡಿ ಇವರು ನಾವೇ ಹುಟ್ಟಿಸಿದ ಮಕ್ಕಳು ಎಂದು ಹೇಳುತ್ತಿದ್ದಾರೆ.ಆದರೆ ಈ ಮಕ್ಕಳನ್ನು ನೀವೇಕೆ ಸರಿನೋಡಿಕೊಂಡಿಲ್ಲ.ನೀವು ಸರಿ ನೋಡಿಕೊಂಡಿದ್ದರೆ ಅವರೇಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದರು?ಎಂದು ಪ್ರಶ್ನಿಸಿದರು.
ಇಬ್ರಾಹಿಂ ಅವರೇ ನೀವು ಜನತಾದಳಕ್ಕೆ ಕೈ ಕೊಟ್ಟು ಕಾಂಗ್ರೆಸ್‍ಗೆ ಹೋದವರು.

      ಇಂದಿರಾಗಾಂಧಿ,ಸೋನಿಯಾಗಾಂಧಿ ಅವರಿಗೆ ಬಾಯಿಗೆ ಬಂದಂತೆ ಟೀಕೆ ಮಾಡಿ ಕೊನೆಗೆ ಅವರ ಕಾಲಿಗೆ ಹೋಗಿ ಬಿದ್ದವರು.ಭದ್ರಾವತಿಯ ಜನ ಈಗಲೂ ನಿಮ್ಮ ಚರಿತ್ರೆಯ ಬಗ್ಗೆ ಮಾತನಾಡುತ್ತಿದ್ದಾರೆ.ನೀವು ಮಾಡಿದ ಅನ್ಯಾಯ,ಆಕ್ರಮಗಳ ಕತೆ ಹೇಳುತ್ತಿದ್ದಾರೆ.ಎಚ್ಚರದಿಂದಿರಿ ಎಂದು ಅವರು ಹೇಳಿದರು.

     ನೀವು ಯಾರಿಗೆ ಹುಟ್ಟಿದವರು ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಿ.ಆನಂತರ ರಾಜೀನಾಮೆ ಕೊಟ್ಟ ಬಹುತೇಕ ಶಾಸಕರನ್ನು ನಾವೇ ಹುಟ್ಟಿಸಿದವರು ಎಂದು ಹೇಳಿ.ಸುಖಾಸುಮ್ಮನೆ ಮಾತನಾಡಬೇಡಿ ಎಂದು ಹೇಳಿದರು.ಕಾಂಗ್ರೆಸ್ ಒಂದು ನರಸತ್ತ ಪಕ್ಷ.ರಾಜ್ಯದಲ್ಲಿ ಒಂದು ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳು ಕಳೆದರೂ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಯಾರನ್ನು ತರಬೇಕು ಎಂದು ತೀರ್ಮಾನಿಸಲು ಅವರಿಗೆ ಆಗಿಲ್ಲ ಎಂದು ಹೇಳಿದರು.

      ಪ್ರಧಾನಿ ನರೇಂದ್ರಮೋದಿ ಅವರನ್ನು ದೇವರು ಎಂದು ಬೈಭವೀಕರಿಸಬೇಕಿಲ್ಲ.ಸ್ವತ: ಅವರೇ ತಾವು ಈ ದೇಶದ ಪ್ರಧಾನ ಸೇವಕ ಎಂದು ಹೇಳಿಕೊಂಡಿದ್ದಾರೆ.ಹೀಗಾಗಿ ಅವರನ್ನು ವೈಭವೀಕರಿಸುವ,ಇನ್ನೇನೇ ವಿಶೇಷಣ ಬಳಸಿ ಮಾತನಾಡುವ ಅಗತ್ಯವಿಲ್ಲ.ಹಾಗೆಯೇ ರಾಜ್ಯಕ್ಕೆ ಪರಿಹಾರದ ಹಣ ಬೇಡ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳನ್ನು ಮುಜುಗರಕ್ಕೀಡು ಮಾಡುವುದು ಸರಿಯಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

     ನೆರೆ ಸಂತ್ರಸ್ತರು ಕಷ್ಟ ಹೇಳಿಕೊಳ್ಳಲು ಹೋದರೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ನನಗೆ ನೂರು ಎಕರೆ ಭೂಮಿ ಇದೆ.ನನಗೇ ಒಂದು ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು,ನಿಮಗೇನೂ ಕೋಟಿಗಟ್ಟಲೆ ಹಣ ಇರಬಹುದು.ಆದರೆ ಜನ ನಿಮ್ಮ ಕಷ್ಟ ಕೇಳಲು ಬಂದಿಲ್ಲ.ಅವರ ಕಷ್ಟ ಹೇಳಲು ಬಂದಿದ್ದಾರೆ.ಅವರ ಕಷ್ಟಕ್ಕೆ ಪರಿಹಾರ ಹುಡುಕಿಕೊಡುವುದು ನಿಮ್ಮ ಕರ್ತವ್ಯ ಎಂದರು.

   ನಿಮಗೆ ಅಧಿಕಾರ ನೀಡಿರುವುದು ಕಷ್ಟ ಕೇಳಲು,ಹೇಳಲು ಅಲ್ಲ.ಇದನ್ನು ಗಮನದಲ್ಲಿಟ್ಟುಕೊಳ್ಳದೆ ಮಾತನಾಡುವುದು ಸರಿಯಲ್ಲ ಎಂದು ಅವರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link