ತುರುವೇಕೆರೆ
ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಜ್ವಲಂತ ಸಮಸ್ಯೆಗಳು ಹೆಚ್ಚಾಗುತ್ತಿವೆ. ವಾಹನ ದಟ್ಟಣೆ, ಹೆಚ್ಚಾದ ಜನಸಂದಣೆ, ಕಾನೂನು ಪಾಲನೆಯಲ್ಲಿ ಸಾರ್ವಜನಿಕರ ನಿರ್ಲಕ್ಷ್ಯ, ರಸ್ತೆಬದಿ ವ್ಯಾಪಾರಿಗಳಿಂದ ಪಾದಚಾರಿಗಳ ಓಡಾಟಕ್ಕೆ ತೊಡಕು ಸೇರಿದಂತೆ ಅನೇಕ ಸಮಸ್ಯೆಗಳ ಬೀಡಾಗಿದೆ.
ಮತ್ತೊಂದು ವಿಶೇಷವೆಂದರೆ ಇತ್ತೀಚೆಗೆ ಪಟ್ಟಣದಲ್ಲಿ ನಾಯಿಗಳ ಕಾಟ ಜಾಸ್ತಿಯಾಗಿದ್ದು ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ ಎಂದು ಪಟ್ಟಣದ ನಾಗರೀಕರು ಆರೋಪಿಸಿದ್ದಾರೆ. ಪಟ್ಟಣದ ಬಾಣಸಂದ್ರ ರಸ್ತೆ, ತಿಪಟೂರು ರಸ್ತೆ, ದಬ್ಬೇಘಟ್ಟ ರಸ್ತೆ, ತಾಲ್ಲೂಕು ಆಫೀಸ್ ಮುಂಭಾಗದ ರಸ್ತೆಗಳ ಮಧ್ಯದಲ್ಲೇ ಎಲ್ಲೆಂದರಲ್ಲಿ ನಾಯಿಗಳ ಓಡಾಟ ಹಾಗೂ ಚೆಲ್ಲಾಟ ಜಾಸ್ತಿಯಾಗಿದ್ದು, ಈ ರಸ್ತೆಗಳಲ್ಲಿ ಓಡಿಸುವ ವಾಹನ ಚಾಲಕರಿಗೆ ತಲೆನೋವಾಗಿ ಪರಿಣಮಿಸಿದೆ.
ಮಕ್ಕಳು ಮರಿಗಳು ರಸ್ತೆಯಲ್ಲಿ ಜೀವ ಭಯದಿಂದ ಓಡಾಡುವಂತಹ ಪರಿಸ್ಥಿತಿ ಉಂಟಾಗಿದೆ. ಶಾಲಾ ಸಮಯದಲ್ಲಂತೂ ಮಕ್ಕಳ ಓಡಾಟ ಜಾಸ್ತಿಯಿದ್ದು ಕಾಲು ಕಾಲಿಗೆ ಸಿಗುವ ನಾಯಿಗಳ ಕಾಟದಿಂದ ರಸ್ತೆಯಲ್ಲಿ ಓಡಾಡುವುದಕ್ಕೂ ಸಹಾ ಬಹಳ ತ್ರಾಸಪಡಬೇಕಾಗಿದೆ. ವಾಹನ ದಟ್ಟಣೆ ಹೆಚ್ಚಾಗಿದ್ದು ರಸ್ತೆಯಲ್ಲಿ ಸಾಗುವಾಗ, ರಸ್ತೆದಾಟುವಾಗ ನಾಯಿಗಳ ಕಾಟದಿಂದ ದ್ವಿಚಕ್ರ ವಾಹನ ಸವಾರರು ಅದೆಷ್ಟೋ ಬಾರಿ ಬಿದ್ದು ಅಪಘಾತಗಳು ಸಂಭವಿಸಿವೆ.
ಈಗಾಗಲೇ ಪಟ್ಟಣದ ದಬ್ಬೇಘಟ್ಟ – ತಿಪಟೂರು ರಸ್ತೆಯ ತಿರುವಿನಲ್ಲಿ ಮೂರ್ನಾಲ್ಕು ಅಪಘಾತಗಳು ಸಂಭವಿಸಿದ್ದು ಉಂಟು. ಪಟ್ಟಣ ಪಂಚಾಯಿತಿ ಗಮನಕ್ಕೆ ತಂದರೂ ಸಹಾ ಪ್ರಾಣಿದಯಾ ಸಂಘ ಆಸ್ಪದ ನೀಡುತ್ತಿಲ್ಲಾ ಎಂದು ಹೇಳಿ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಹಾಗೊಂದು ವೇಳೆ ನಾಯಿಗಳನ್ನು ಹಿಡಿದು ದೂರಕ್ಕೆಲ್ಲಾದರೂ ಬಿಟ್ಟು ಬರಲಿ ಎಂದು ನಾಗರೀಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪ್ರತಿದಿನ ರಸ್ತೆಗಳಲ್ಲಿ ರಾಜಾರೋಷವಾಗಿ ಹಿಂಡು ಹಿಂಡಾಗಿ ಓಡಾಡುವ ನಾಯಿಗಳಿಂದ ರಕ್ಷಣೆ ಕೋರಿ ನಾಗರೀಕರು ಪ.ಪಂ. ಗಮನಕ್ಕೆ ತಂದಿದ್ದರೂ ಸಹಾ ಅದೇಕೋ ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವಂತಿದೆ. ಈಗಾಗಲೇ ಪಟ್ಟಣದ ಅನೇಕ ಜನರಿಗೆ ನಾಯಿಗಳು ಕಚ್ಚಿದ್ದರೂ ಸಹಾ ಪಟ್ಟಣ ಪಂಚಾಯಿತಿ ಇತ್ತ ಗಮನ ಹರಿಸಿಲ್ಲ ಎಂಬುದು ಬಸವೇಶ್ವರ ನಗರದ ವಾಸಿ ರಿವೈಂಡಿಂಗ್ ರಮೇಶ್‍ನ ಆರೋಪವಾಗಿದೆ.
ರಸ್ತೆ ಬದಿ ಯಥೇಚ್ಛವಾಗಿ ಇರುವ ಕೋಳಿ ಹಾಗೂ ಮಾಂಸದಂಗಡಿಯಿಂದ ಎಸೆಯಲ್ಪಡುವ ಕಲ್ಮಷವನ್ನು ತಿಂದಂತಹ ಬೀಡಾಡಿ ನಾಯಿಗಳಿಗೆ ರೇಬಿಸ್ ರೋಗ ತಗಲಿ ಜನರನ್ನು ಕಚ್ಚಿದಾಗ ಈ ರೋಗ ಹರಡಲು ಕಾರಣವಾಗುತ್ತದೆ ಎಂದು ರೈತ ಶಿವಾನಂದ್ ತಿಳಿಸಿದರು.
ಪಟ್ಟಣದಲ್ಲಿ ನಾಯಿಗಳ ಹಾವಳಿಯಿಂದ ನಾಗರೀಕರು ಭಯಭೀತರಾಗಿದ್ದು ಮಕ್ಕಳುಗಳನ್ನು ಮನೆಯಿಂದ ಹೊರಗೆ ಕಳುಹಿಸಲು ಪೋಷಕರು ಹಿಂದುಮುಂದು ಯೋಚಿಸುವಂತಾಗಿದೆ. ಆದಷ್ಟು ಬೇಗ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.