ಗುಬ್ಬಿ
ಪ್ರಸ್ತುತ ಲೋಕಸಭಾ ಚುನಾವಣೆ ನಡೆಯುತ್ತಿರುವುದು ದೇಶದ ರಕ್ಷಣೆಗಾಗಿ. ತಾವೆಲ್ಲರೂ ಸಹ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಮೂಲಕ ದೇಶದ ಉಳಿವಿಗೆ ಮತ್ತು ಸಮಗ್ರ ಅಭಿವೃದ್ಧಿಗೆ ಪೂರ್ಣ ಪ್ರಮಾಣದ ಸಹಕಾರ ನೀಡುವಂತೆ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ಬಾವಿಮನೆ ಕಲ್ಯಾಣ ಮಂಟಪದಲ್ಲಿ ಎಸ್.ಡಿ.ದಿಲೀಪ್‍ಕುಮಾರ್ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವೈಯಕ್ತಿಕ ಸಮಸ್ಯೆಗಳಿದ್ದರೂ ಅದನ್ನು ಬಿಟ್ಟು ನಾವೆಲ್ಲ ಒಟ್ಟಾಗಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕಾಗಿದೆ. ಈ ಭಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿನ ಹಾಸನ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರವು ಸಹ ಬಿಜೆಪಿ ತೆಕ್ಕೆಗೆ ಬರುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಮತ್ತೆ ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಆದ್ದರಿಂದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಂಘಟಿತರಾಗಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಕರೆನೀಡಿದ ಅವರು, ಮುಖಂಡ ಎಸ್.ಡಿ.ದಿಲೀಪ್‍ಕುಮಾರ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರು ಸ್ವಾಗತಿಸಿದ್ದಾರೆ.
ತಾಲ್ಲೂಕಿನಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲದ ಒಂದಾಗಿ ಕೆಲಸ ಮಾಡಿ ಹಾಗೆ ಗುಬ್ಬಿ ತಾಲ್ಲೂಕಿನ ಜನತೆ ಈ ಭಾರಿ ನಮ್ಮ ಪಕ್ಷದ ಅಭ್ಯರ್ಥಿ ಜಿ.ಎಸ್.ಬಸವರಾಜುರವರಿಗೆ ಮತ ನೀಡುವ ಮೂಲಕ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದರೆ ಗುಬ್ಬಿ ತಾಲೂಕಿನ ಅಭಿವೃದ್ಧಿಯಾಗುತ್ತದೆ. ಈ ಭಾರಿ ಅಂತಹ ಶಕ್ತಿ ನೀಡಿದರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಸಹ ಶಕ್ತಿ ಕೇಂದ್ರಗಳಾಗುತ್ತವೆ ಎಂದು ತಿಳಿಸಿದರು.
ಪ್ರಸಕ್ತ ಚುನಾವಣೆಯಲ್ಲಿ ಸಿಕ್ಕಿರುವ ಅವಕಾಶವನ್ನು ಕೈ ಬಿಟ್ಟರೆ ಮತ್ತೆ ಅಂತಹ ಅವಕಾಶ ಸಿಗುವುದಿಲ್ಲ. ಇಂದು ಹೇಮಾವತಿ ನೀರಿನ ಸಂಕಷ್ಟ ನಿಮಗೆ ಗೊತ್ತಿದೆ.
ಮುಂದಿನ ದಿನದಲ್ಲಿ ನಾವು ಚೆನ್ನಾಗಿರಬೇಕು ಎಂದರೆ ನಾವು ಗೆಲ್ಲಬೇಕಾಗಿದೆ. ಎತ್ತಿನಹೊಳೆ ಯೋಜನೆ ನಮ್ಮ ಭಾಗದಲ್ಲಿ ಹರಿಯುತ್ತಿದೆ ಎಂದ ಮೇಲೆ ಯೋಜನೆ ಸಮೀಪದ ಕೆರೆಗಳನ್ನು ತುಂಬಿಸಬೇಕು. ಇಂತಹ ಎಲ್ಲಾ ಹೋರಾಟಗಳು ಮುಂದಿನ ದಿನದಲ್ಲಿ ನಡೆಯಬೇಕು ಎಂದರೆ ನಮ್ಮ ಪಕ್ಷ ಅಧಿಕಾರ ಹಿಡಿಯಬೇಕಾಗಿದೆ. ಜಿಲ್ಲೆಯಲ್ಲಿ ಖಂಡಿತವಾಗಿ ಉತ್ತಮ ವಾತಾವರಣ ನಿರ್ಮಾಣವಾಗಿದ್ದು ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ಎಸ್.ಡಿ.ದಿಲೀಪ್‍ಕುಮಾರ್ ಸಂಪೂರ್ಣವಾಗಿ ಪಕ್ಷದ ಪರವಾಗಿ ತೊಡಗಿಕೊಂಡು ಹೋಗುತ್ತಾರೆ.
ನೀವೆಲ್ಲ ಜೊತೆಯಲ್ಲಿ ಸಾಗಿ ಇನ್ನೂ ಕೆಲವೆ ದಿನದಲ್ಲಿ ಪಕ್ಷದ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿಯವರು ಹಾಗೂ ಇನ್ನಿತರೆ ಎಲ್ಲಾ ಮುಖಂಡರುಗಳ ಜೊತೆಯಲ್ಲಿ ಬಿಜೆಪಿಯ ಕಾರ್ಯಕ್ರಮ ಮಾಡಲಾಗುತ್ತದೆ. ನಿಮ್ಮ ಮತ ಜಿ.ಎಸ್.ಬಸವರಾಜು ರವರಿಗೆ ನೀಡುವ ಮೂಲಕ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ತಿಳಿಸಿದರು.
ಮುಖಂಡ ಎಸ್.ಡಿ.ದಿಲೀಪ್‍ಕುಮಾರ್ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಾಗ ಬಿಜೆಪಿಯಿಂದ ಅಮಾನತ್ತು ಮಾಡಲಾಗಿತ್ತು. ಈಗ ರಾಜ್ಯಾಧ್ಯಕ್ಷರೆ ಕರೆಸಿಕೊಂಡು ಮಾತುಕತೆ ಮಾಡಿ ಮುಂದಿನ ದಿನದಲ್ಲಿ ಗೌರವಯುತವಾಗಿ ಕಾಣುವ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಜೆ.ಸಿ.ಮಾಧುಸ್ವಾಮಿಯವರಿಗೆ ಅದನ್ನು ವಹಿಸಿದ್ದಾರೆ. ಅವರ ಅಣತಿಯಂತೆ ನಾವೆಲ್ಲ ಕೆಲಸ ಮಾಡಬೇಕಾಗಿದೆ. ನೀವು ನನಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಮತ ನೀಡಿ ಶಕ್ತಿ ನೀಡಿದ್ದೀರಿ, ಈಗಲೂ ಸಹ ನಾವೆಲ್ಲ ಒಟ್ಟಾಗಿ ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡಿ ಈ ದೇಶವನ್ನು ಉಳಿಸುವ ಕೆಲಸವನ್ನು ಮಾಡೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಉಮಾಮಹೇಶ್, ದಕ್ಷಿಣಮೂರ್ತಿ, ಗಿರಿಯಪ್ಪ, ನಂಜುಂಡಪ್ಪ ಶಿವಕುಮಾರ್, ಸಿದ್ದಲಿಂಗಪ್ಪ, ಬಿ.ಲೋಕೇಶ್, ಪಚ್ಚಿ, ನಂಜೇಗೌಡ, ದೇವರಾಜು, ಸಿದ್ದಲಿಂಗಮೂರ್ತಿ, ಚೇತನ್‍ಕುಮಾರ್, ಗಿರೀಶ್, ಸಿದ್ದಲಿಂಗರಾಧ್ಯ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.