ಕರೋನಾ ತಡೆಗೆ ಜಿಲ್ಲಾಡಳಿತ ಬಿಗಿ ಕ್ರಮ;ಡಿಸಿ

ಚಿತ್ರದುರ್ಗ;
    ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ನಿಷೇಧಾಜ್ಞೆ ಜಾರಿ, ಸಂತೆ ಜಾತ್ರೆಗಳ ನಿಷೇಧ, ಬಾರ್ ಮತ್ತು ರೆಸ್ಟೋರೆಂಟ್‍ಗಳ ಬಂದ್, ಸೇರಿದಂತೆ ಸರ್ಕಾರ ಹಾಗೂ ಜಿಲ್ಲಾಡಳಿತ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಆದರೆ ಈ ಎಲ್ಲ ಆದೇಶ ಹಾಗೂ ಸೂಚನೆಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಿ, ಸಹಕರಿಸಬೇಕು.  ಯುಗಾದಿ ಹಬ್ಬವನ್ನೂ ಕೂಡ ಮುಂಜಾಗ್ರತಾ ಕ್ರಮವಾಗಿ ಸರಳವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
   
    ಕೊರೋನಾ ಸೋಂಕು (ಕೋವಿಡ್-19) ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.
 
    ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಸೋಂಕು ಪ್ರಕರಣ ವರದಿಯಾಗಿಲ್ಲ.  ವಿದೇಶಗಳಿಂದ ಬಂದಂತಹವರನ್ನು ಗುರುತಿಸಿ, ಅವರೆಲ್ಲರನ್ನೂ ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ (ಕ್ವಾರಂಟೈನ್) ನಿಗಾ ವಹಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಸದ್ಯ 68 ಜನ ರನ್ನು ಹೋಮ್ ಕ್ವಾರಂಟೈನ್‍ನಲ್ಲಿ ನಿಗಾ ಇರಿಸಲಾಗಿದೆ. 49 ಜನ ಈಗಾಗಲೆ 14 ದಿನಗಳ ಹೊಮ್ ಕ್ವಾರಂಟೈನ್ ಅವಧಿ ಮುಗಿಸಿದ್ದು, ಯಾರಿಗೂ ಸೋಂಕು ಲಕ್ಷಣ ಕಂಡುಬಂದಿಲ್ಲ, ಆದರೂ ಮುಂಜಾಗ್ರತಾ ಕ್ರಮವಾಗಿ ಇನ್ನೂ 07 ದಿನಗಳ ಕಾಲ ಅವರ ಮೇಲೆ ನಿಗಾ ವಹಿಸಲಾಗಿದೆ ಎಂದರು 
     ಜಿಲ್ಲೆಯ ಜನ ಯಾರೂ ಕೂಡ ಆತಂಕ ಅಥವಾ ಭಯ ಪಡುವ ಅಗತ್ಯವಿಲ್ಲ.  ಆದಾಗ್ಯೂ ಜಿಲ್ಲೆಯಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಇರುವುದರಿಂದ, ಈ ಮಾರ್ಗದಲ್ಲಿ ವಾಹನಗಳ ಮೂಲಕ ಜನರ ಓಡಾಟ ಇರುತ್ತದೆ.  ಹೀಗಾಗಿ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ.  ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿರುವ ಯಾವುದೇ ಹೋಟೆಲ್, ಡಾಬಾ ಗಳು ಯಾವುದೇ ಕಾರಣಕ್ಕೂ ಸ್ಥಳದಲ್ಲಿಯೇ ಸರ್ವೀಸ್ ನೀಡುವಂತಿಲ್ಲ, ಕೇವಲ ಪಾರ್ಸೆಲ್ ಸೇವೆ ನೀಡಲು ಅನುಮತಿ ನೀಡಲಾಗಿದೆ. 
 ಜಿಲ್ಲೆಯ ಉಳಿದೆಡೆಯಲ್ಲಿರುವ ಹೋಟೆಲ್‍ಗಳೂ ಕೂಡ ಪ್ರತಿ ಟೇಬಲ್‍ಗೆ ಕನಿಷ್ಟ 01 ಮೀಟರ್ ಅಂತರ ಕಾಯ್ದುಕೊಂಡು, ಪ್ರತಿ ಟೇಬಲ್‍ಗೆ ಕೇವಲ ಇಬ್ಬರಿಗೆ ಮಾತ್ರ ಸೇವೆ ನೀಡಬೇಕು, ಜೊತೆಗೆ ಸಿಬ್ಬಂದಿಗೆ ಹ್ಯಾಂಡ್ ಗ್ಲೌಸ್ ಹಾಗೂ ಮಾಸ್ಕ್ ಕಡ್ಡಾಯವಾಗಿ ಒದಗಿಸಿ, ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು ಎಂದರು.
ಮಾಹಿತಿ ನೀಡುವವರ ವಿವರ ಗೌಪ್ಯ :
    ವಿದೇಶಗಳಿಂದ ಜಿಲ್ಲೆಗೆ ಆಗಮಿಸುವ ಯಾವುದೇ ವ್ಯಕ್ತಿಗಳು ಸ್ವಯಂ ಪ್ರೇರಣೆಯಿಂದ 104 ಅಥವಾ 08194-1077 ಕ್ಕೆ ಮಾಹಿತಿ ನೀಡಬೇಕು.  ಸೋಂಕು ಪೀಡಿತ ದೇಶಗಳಿಂದ ಇಲ್ಲಿಗೆ ಬಂದವರು, ಮಾಹಿತಿಯನ್ನು ಮರೆಮಾಚಿ, ಎಲ್ಲೆಡೆ ಓಡಾಡುವುದು ಸರಿಯಲ್ಲ, ಇದರಿಂದ ವೈಯಕ್ತಿಕವಾಗಿಯೂ, ತಮ್ಮ ಕುಟುಂಬದವರಿಗೂ, ಸಾರ್ವಜನಿಕರಿಗೂ ಕಷ್ಟಕ್ಕೆ ಸಿಲುಕಿಸುತ್ತಿದ್ದೀರಿ ಎನ್ನುವುದನ್ನು ಮರೆಯಬಾರದು. ಎಲ್ಲರಿಗೂ ಸಾಮಾಜಿಕ ಹೊಣೆಗಾರಿಕೆ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು
     ವಿದೇಶಗಳಿಂದ ಬಂದವರು ತಪ್ಪದೆ ಮಾಹಿತಿ ನೀಡಬೇಕು.  ಒಂದು ವೇಳೆ ವಿದೇಶದಿಂದ ಬಂದಿದ್ದರೂ ಮಾಹಿತಿ ನೀಡದೆ, ಹೋಮ್ ಕ್ವಾರಂಟೈನ್ ಆಗದೆ, ಕದ್ದುಮುಚ್ಚಿ ಓಡಾಡುವ ಬಗ್ಗೆ ಅಥವಾ ತಡವಾಗಿ ಮಾಹಿತಿ ನೀಡಿದಲ್ಲಿ ಅಥವಾ ಹೋಮ್ ಕ್ವಾರಂಟೈನ್ ನಲ್ಲಿ ಇರುವವರು ಮಾಹಿತಿ ನೀಡದೆ ಮನೆಯಿಂದ ಹೊರಗೆ ತಿರುಗಾಡಲು ತೆರಳಿದಲ್ಲಿ, ಇವರೆಲ್ಲರ ವಿರುದ್ಧವೂ ಸಾಂಕ್ರಾಮಿಕ ರೋಗಳ ತಡೆ ಕಾಯ್ದೆಯಡಿ ಕಾನೂನು ರೀತ್ಯ ಮೊಕದ್ದಮೆ ದಾಖಲಿಸಿ, ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು
 
    ಸಾರ್ವಜನಿಕರೂ ಕೂಡ ತಮ್ಮ ನೆರೆಹೊರೆಯಲ್ಲಿ ಅಥವಾ ಗ್ರಾಮಗಳಲ್ಲಿ ವಿದೇಶದಿಂದ ಯಾರೇ ಆಗಮಿಸಿದ್ದರೂ ತಪ್ಪದೆ ಸಹಾಯವಾಣಿಗೆ ಕರೆ ಮಾಡಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಅಂತಹ ಕನಿಷ್ಟ ಮಾಹಿತಿ ನೀಡಿ.  ಜಿಲ್ಲಾಡಳಿತ ಅಂತಹ ಎಲ್ಲ ವ್ಯಕ್ತಿಗಳ ಮಾಹಿತಿಯನ್ನು ಬಹಿರಂಗಪಡಿಸದೆ, ಗೌಪ್ಯವಾಗಿಡುತ್ತದೆ ಎಂದು ಭರವಸೆ ನೀಡಿದರು.
    ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆದಷ್ಟು ಮನೆಯಲ್ಲಿಯೇ ಇರಬೇಕು.  ಸರ್ಕಾರಿ ಸೇವೆಯ ತುರ್ತು ಅಗತ್ಯವಿದ್ದರೆ ಮಾತ್ರ ಸರ್ಕಾರಿ ಕಚೇರಿಗಳಿಗೆ ಬನ್ನಿ, ಉಳಿದಂತೆ ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಬರುವುದು ಬೇಡ.  ಸರ್ಕಾರಿ ತುರ್ತು ಸೇವೆಯ ಅಗತ್ಯವಿದ್ದಲ್ಲಿ ಆಯಾ ಗ್ರಾಮ ಲೆಕ್ಕಿಗರಿಗೆ ಅರ್ಜಿ ಸಲ್ಲಿಸಿದಲ್ಲಿ, ಸೌಲಭ್ಯ ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು
 
    ಜನಜಂಗುಳಿ ಇರುವ ಕಡೆ ಹೋಗಬೇಡಿ, ದಿನಸಿ ಅಂಗಡಿ, ಔಷಧಿ ಅಂಗಡಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳಿಗೆ ನಿರ್ಬಂಧ ಇರುವುದಿಲ್ಲ.  ಹೀಗಾಗಿ ಜನರು ಆತಂಕಕ್ಕೆ ಒಳಗಾಗಿ ಮುಗಿಬಿದ್ದು ಸಾಮಗ್ರಿ ಖರೀದಿಸುವ ಅಗತ್ಯವಿಲ್ಲ.  ಸಂತೆ ಜಾತ್ರೆ ನಿಷೇಧಿಸಿದ್ದು, ಸಾರ್ವಜನಿಕ ಹಿತಾಸಕ್ತಿಗಾಗಿಯೇ ಸರ್ಕಾರ ಹಾಗೂ ಜಿಲ್ಲಾಡಳಿತ ಹಲವು ನಿರ್ಬಂಧ ವಿಧಿಸಿದ್ದು, ಇಂತಹ ಸಲಹೆ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಮುದಾಯದ ಆರೋಗ್ಯ ಕಾಪಾಡುವುದು ನಾಗರಿಕರ ಕರ್ತವ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
     ಯುಗಾದಿ ಸರಳ ಆಚರಣೆಗೆ ಕರೆ :
    ಈ ಬಾರಿಯ ಯುಗಾದಿ ಹಬ್ಬವನ್ನು ಸಾರ್ವಜನಿಕರು ಸರಳವಾಗಿ ಆಚರಿಸಬೇಕು.  ದೇವಾಲಯದಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ಕೆ ನಿರ್ಬಂಧ ವಿಧಿಸಿಲ್ಲ. ಆದರೆ ತೀರ್ಥ ಪ್ರಸಾದ ವಿತರಣೆಗೆ ಅವಕಾಶ ಇಲ್ಲ.  ಸಾರ್ವಜನಿಕರು ದೇವಾಲಯಕ್ಕೆ ಹೋಗದೆ, ಮನೆಯಲ್ಲಿಯೇ ಉಳಿದು, ಕುಟುಂಬದವರೊಂದಿಗೆ ಮನೆಯಲ್ಲಿಯೇ ಧಾರ್ಮಿಕ ಪೂಜೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರು ಮಾತನಾಡಿ, ಈ ಬಾರಿ ಯುಗಾದಿ ಹಬ್ಬದಲ್ಲಿ ಜಿಲ್ಲೆಯಲ್ಲಿ ಜೂಜು ಆಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಯಾವುದೇ ಸ್ಥಳದಲ್ಲಿ ಇದಕ್ಕಾಗಿ ವ್ಯವಸ್ಥೆ ಮಾಡುವುದು, ಜೂಜು ಆಡುವುದು, ಶಾಮಿಯಾನ ಹಾಕುವುದು ಮಾಡಿದಲ್ಲಿ ಅಂತಹ ಎಲ್ಲರ ವಿರುದ್ಧವೂ ಕೇಸ್ ದಾಖಲಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.  ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
   
     ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ಮಾತನಾಡಿ, ಜಿಲ್ಲೆಗೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ವೆಂಟಿಲೇಟರ್‍ಗಳು, ವೈದ್ಯಕೀಯ ಉಪಕರಣಗಳನ್ನು ಈಗಲೆ ಸರ್ಕಾರದಿಂದ ಪಡೆದು ಸುಸಜ್ಜಿತವಾಗಿರಿಸಿಕೊಳ್ಳಬೇಕು. ಸಿಬ್ಬಂದಿಗಳಿಗೆ ತರಬೇತಿ ನೀಡಬೇಕು.  ಸಾರ್ವಜನಿಕರೂ ಕೂಡ ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು ಎಂದು ಮನವಿ ಮಾಡಿದರು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap