ಹಾವೇರಿ
ನೆರೆಯಿಂದ ಹಾನಿಗೊಳಗಾದ ಎಲ್ಲ ಮನೆಗಳ ಪುನರ್ ನಿರ್ಮಾಣ ಕಾರ್ಯ ಒಂದು ವಾರದೊಳಗಾಗಿ ಆರಂಭವಾಗಲೇಬೇಕು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಸರ್ಕಾರದ ವಸತಿ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ್‍ಕುಮಾರ್ ಮೀನಾ ಅವರು ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಪುನರ್ ವಸತಿ, ಪರಿಹಾರ ಕಾರ್ಯ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ನೆರೆಯಿಂದ ಮನೆಕಳೆದುಕೊಂಡು ಐದಾರು ತಿಂಗಳಾಯಿತು. ಒಂದು ಮನೆಯೂ ಪೂರ್ಣಗೊಂಡಿಲ್ಲ. ಈಗಾಗಲೇ ತಳಪಾಯ ಹಾಕಲು ಮೊದಲ ಕಂತಾಗಿ ಒಂದು ಲಕ್ಷ ರೂ. ಸಹ ಪಾವತಿಸಲಾಗಿದೆ. ತಳಪಾಯಹಾಕಿ ಫೋಟೋ ಅಪ್‍ಲೋಡ್ ಮಾಡಿದರೆ ಎರಡನೇ ಕಂತಿನ ಹಣ ಸಹ ಬಿಡುಗಡೆಮಾಡಲಾಗುವುದು. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆಯಾಗಿಲ್ಲ. ಸರ್ಕಾರ ನೆರೆಸಂತ್ರಸ್ತರಿಗೆ ತ್ವರಿತವಾಗಿ ಪುನರ್ ವಸತಿ ಕಲ್ಪಿಸಲು ಗಂಭೀರವಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಆದ್ಯತೆಯ ಮೇಲೆ ಕಾರ್ಯನಿರ್ವಹಿಸಬೇಕು. ನಿರ್ಲಕ್ಷಿಸಿದರೆ ನೋಟೀಸ್ ಜಾರಿಗೊಳಿಸಿ ಶಿಸ್ತು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.
ದೇಶದ ಯಾವುದೇ ರಾಜ್ಯಗಳಲ್ಲಿ ಐದು ಲಕ್ಷ ರೂ.ನಷ್ಟು ದೊಡ್ಡ ಮೊತ್ತದ ಪರಿಹಾರ ಘೋಷಣೆಯಾಗಿಲ್ಲ. ದೊಡ್ಡಮೊತ್ತದ ಪರಿಹಾರ ನೀಡಿ ಮೊದಲ ಕಂತಿನ ಹಣವನ್ನು ಪಾವತಿಸಿದಾಗ್ಯೂ ಮನೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದರೆ ಸರ್ವೇಯ ಕಾರ್ಯದಲ್ಲಿಯೇ ದೋಷವಿದೆಯೇ ಎಂದು ಪ್ರಶ್ನಿಸಿದ ಅವರು, ಪರಿಹಾರ ಪಡೆದು ಮನೆ ನಿರ್ಮಾಣಕ್ಕೆ ಮುಂದಾಗದ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ಕೈಬಿಡಿ ಅಗತ್ಯವಿದ್ದವರಿಗೆ ಮನೆನಿರ್ಮಾಣ ಮಾಡಿಕೊಡಿ. ಮನೆಹಾನಿಯಾದ ನಿವೇಶನದ ಬದಲು ಬೇರೆಡೆ ನಿರ್ಮಾಣ ಮಾಡಲು ಬೇಡಿಕೆ ಸಲ್ಲಿಸಿದರೆ ಕಾನೂನುಬದ್ಧವಾದ ನಿವೇಶನವಿದ್ದರೆ ಜಿಲ್ಲಾಧಿಕಾರಿಗಳೇ ಅನುಮತಿ ನೀಡುತ್ತಾರೆ ಎಂದು ಸೂಚಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಪರಿಶೀಲಿಸಿದ ಕಾರ್ಯದರ್ಶಿಗಳು ಶಾಶ್ವತ ನೀರಿನ ಮೂಲಗಳು ದೊರೆತರೆ ಮಾತ್ರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸಲಹೆ ನೀಡಿದರು.ಶುದ್ಧ ನೀರಿನ ಘಟಕಗಳ ನಿರ್ವಹಣೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ ಅವರು ಈ ಘಟಕಗಳ ಸಮರ್ಪಕ ನಿರ್ವಹಣೆ ಕುರಿತಂತೆ ಎಲ್ಲ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಕನಿಷ್ಠ ವಾರಕ್ಕೊಮ್ಮೆ ಭೇಟಿ ಪರಿಶೀಲಿಸಬೇಕು. ಸಮರ್ಪಕ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಬಂಡ್ ರಿಪೇರಿ, ಕ್ಯಾನಲ್‍ಗಳ ರಿಪೇರಿ, ರಸ್ತೆ ಬದಿಯ ಜಂಗಲ್ ಕಟ್ ಕಾಮಗಾರಿ ಹಾಗೂ ರಸ್ತೆ ಉದ್ದಕ್ಕೂ ಗಿಡನೆಡುವ ಕಾರ್ಯಕ್ರಮಗಳನ್ನು ಕೈಗೊಳ್ಳಿ. ಉದ್ಯೋಗ ಖಾತ್ರಿಯಡಿ ಆಸ್ತಿ ನಿರ್ಮಾಣದ ಕಾರ್ಯವಾಗಬೇಕು. ರುದ್ರಭೂಮಿಗಳ ಒತ್ತುವರಿ ತಡೆಯಲು ತಂತಿಬೇಲಿ, ಶಾಲಾ ಆವರಣಗೋಡೆ, ಸಮುದಾಯಕ್ಕೆ ಅನುಕೂಲವಾದ ಕೆರೆಗಳ ನಿರ್ಮಾಣ, ಜಲಮೂಲಗಳ ವೃದ್ಧಿಗೆ ಅಗತ್ಯವಾದ ಕೆಲಸಗಳನ್ನು ಕೈಗೊಳ್ಳಿ ಎಂದು ಸೂಚಿಸಿದರು.
ಸಾಂಪ್ರದಾಯಿಕ ಕೃಷಿಗಿಂತ ರೈತರಿಗೆ ಸುಸ್ಥಿತರ ಆದಾಯ ತರುವ ಬೆಳೆಗಳಿಗೆ ಪ್ರೋತ್ಸಾಹ ನೀಡಿ. ಕೃಷಿಯೊಂದಿಗೆ ತೋಟಗಾರಿಕೆ, ಹೈನುಗಾರಿಕೆಯಂತಹ ಕೃಷಿ ಪೂರಕ ಚಟುವಟಿಕೆಗಳಿಗೆ ಉತ್ತೇಜನ ನೀಡಿ. ಈ ಕುರಿತಂತೆ ಕೋಲಾರ ಜಿಲ್ಲೆಯ ರೈತರು ಮಾದರಿ ಕೃಷಿಯನ್ನು ಅಧ್ಯಯನಮಾಡಿ. ಸದರ ಮಾದರಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಎಂದು ಕೃಷಿ ಜಂಟಿ ನಿರ್ದೇಶಕರಿಗೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಬಯಸಿ ಅರ್ಜಿ ಸಲ್ಲಿಸುವ ಎಲ್ಲರಿಗೂ ಅವಕಾಶಕಲ್ಪಿಸಿ. ಬೇಕಾದ ಮೂಲ ಸೌಕರ್ಯಕ್ಕೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ. ಪ್ರವೇಶವನ್ನು ನಿರಾಕರಿಸಬೇಡಿ, ಶಿಕ್ಷಣಕ್ಕೆ ಆದ್ಯತೆ ನೀಡಿ ಹಾಗೂ ಹೆಚ್ಚು ಫಲಿತಾಂಶ ಪಡೆಯುವ ಉಮೇದಿನಲ್ಲಿ ಮಕ್ಕಳಿಗೆ ನಕಲು ಮಾಡಿಸಬೇಡಿ. ಗುಣಮಟ್ಟದ ಪಾಠಮಾಡಿ. ಪರೀಕ್ಷೆ ಎದುರಿಸುವ ಕುರಿತಂತೆ ಮಾರ್ಗದರ್ಶನ ನಡೆಸಿ, ನಕಲು ರಹಿತ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಅಪೌಷ್ಠಿಕತೆ, ಹೆರಿಗೆ ಸಮಯದಲ್ಲಿ ತಾಯಿ-ಮಗುವಿನ ಮರಣ ಪ್ರಮಾಣವನ್ನು ಪರಿಶೀಲನೆ ನಡೆಸಿದರು. ಎಲ್ಲ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿಗಳು, ತಹಶೀಲ್ದಾರಗಳು, ಅಂಗನವಾಡಿಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ನಿಗಧಿತ ದಾಖಲೆಗಳನ್ನು ಪರಿಶೀಲಿಸಬೇಕು. ಅಪೌಷ್ಠಿಕ ಮಕ್ಕಳು ಕಂಡುಬಂದರೆ ಕಾಳಜಿಯಿಂದ ಅವರ ಆರೋಗ್ಯ ಸುಧಾರಣೆಗೆ ಕ್ರಮಕೈಗೊಳ್ಳಬೇಕು. ಮಾತೃಶ್ರೀ ಮತ್ತು ಮಾತೃಪೂರ್ಣ ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ನಿಗಾವಹಿಸಬೇಕು.
ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನವರು ಹೆಚ್ಚಾಗಿ ವಾಸಿಸುವ ಕೇಂದ್ರಗಳಲ್ಲಿ ಆರೋಗ್ಯ, ಅಪೌಷ್ಠಿಕತೆ ಕುರಿತಂತೆ ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು. ಅಪೌಷ್ಠಿಕತೆ ಹಾಗೂ ಸಾಂಸ್ಥಿಕ ಹೆರಿಗೆಯ ಸೌಲಭ್ಯ ಸಿಗದೆ ಯಾವ ತಾಯಿ ಹಾಗೂ ಮಗುವಿಗೂ ತೊಂದರೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು ಆರು ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಯಾವುದೇ ಪ್ರಕರಣಗಳು ಬಾಕಿ ಉಳಿಸಿಕೊಳ್ಳಬಾರದು. ತ್ವರಿತವಾಗಿ ನ್ಯಾಯಾಲಯದ ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತೆ ತಹಶೀಲ್ದಾರ, ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಮಶಾನ ಭೂಮಿ, ಸಾಮಾಜಿಕ ಭದ್ರತಾ ಯೋಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಅವರು ಅತಿವೃಷ್ಟಿ, ನೆರೆ ಪರಿಹಾರ, ಮನೆ ಪುನರ್ ನಿರ್ಮಾಣ, ಬೆಳೆ ವಿಮೆ, ಉದ್ಯೋಗ ಖಾತ್ರಿ ಹಾಗೂ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಪ್ರಗತಿಯನ್ನು ವಿವರಿಸಿದರು. ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಹಾಗೂ ಎಲ್ಲ ತಹಶೀಲ್ದಾರಗಳು ಉಪಸ್ಥಿತರಿದ್ದರು.