ಬೆಂಗಳೂರು
ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಜನವಿರೋಧಿ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಕುಮಾರಸ್ವಾಮಿ ನೇತೃತ್ವದ ಜನಪರ ಮೈತ್ರಿಕೂಟ ಸರ್ಕಾರದ ನಡುವೆ ಹಣಾಹಣಿ ನಡೆಯುತ್ತಿದ್ದು ಈ ಹಣಾಹಣಿಯಲ್ಲಿ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಪ್ರೆಸ್ ಕ್ಲಬ್‍ನಲ್ಲಿಂದು ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನರಿಗೆ ಟೋಪಿ ಹಾಕಿದೆ.ಚುನಾವಣೆಯ ನಂತರ ಈ ಟೋಪಿ ಕಳಚಿ ಬೀಳಲಿದೆ ಎಂದರು.
ಇವತ್ತು ವಂಶಪಾರಂಪರ್ಯ ರಾಜಕಾರಣ ಚುನಾವಣೆಯ ವಿಷಯವೇ ಅಲ್ಲ.ದೇಶದ 544 ಸಂಸದರ ಪೈಕಿ 165 ಸಂಸದರು ಕೌಟುಂಬಿಕ ರಾಜಕಾರಣದ ಹಿನ್ನೆಲೆಯಿಂದ ಬಂದವರು.ಹೀಗಿರುವಾಗ ದೇವೇಗೌಡರ ಮೇಲೆ ಮಾತ್ರ ಯಾಕೆ ಟೀಕೆ?ಎಂದು ಪ್ರಶ್ನಿಸಿದರು.
ಬಿಹಾರದಲ್ಲಿ ಲಾಲೂಪ್ರಸಾದ್ ಯಾದವ್ ಕುಟುಂಬ ಇಲ್ಲವೇ?ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ?ಒರಿಸ್ಸಾದಲ್ಲಿ ಪಾಟ್ನಾಯಕ್ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ?ಕರ್ನಾಟಕದ ಯಾವ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ?ಎಂದು ಪ್ರಶ್ನೆ ಮಾಡಿದರು.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿರುವುದು ಸರಿಯಾಗಿಯೇ ಇದೆ.ನಿಶ್ಚಿತವಾಗಿ ಅವರು ಗೆಲ್ಲುವ ಕ್ಯಾಂಡಿಡೇಟ್.ಅವರನ್ನು ವಂಶಪಾರಂಪರ್ಯ ರಾಜಕಾರಣದ ಕನ್ನಡಿಯಲ್ಲಿ ನೋಡುವುದು ಬೇಡ ಎಂದರು.ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿರುವ ಶ್ರೀಮತಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯೇನಲ್ಲ.ಬಿಜೆಪಿ ಬೆಂಬಲ ನೀಡಿದ ಮೇಲೆ ಅವರು ಬಿಜೆಪಿ ಪಕ್ಷದ ಕ್ಯಾಂಡಿಡೇಟ್ ಎಂದೇ ಅರ್ಥ ಎಂದು ಹೇಳಿದರು.
ಸುಮಲತಾ ಗೌಡ್ತಿಯಲ್ಲ ಎಂಬ ಸಂಸದ ಶಿವರಾಮೇಗೌಡರ ಮಾತು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಮಂಡ್ಯ ಜಾತಿಯ ರಾಜಕಾರಣದ ನೆಲೆಬೀಡಲ್ಲ.ಅಲ್ಲಿ ಆದಿಚುಂಚನಗಿರಿ ಕ್ಷೇತ್ರವೂ ಇದೆ.ಮೇಲುಕೋಟೆಯೂ ಇದೆ.ಪಕ್ಕದಲ್ಲೇ ಬಾಹುಬಲಿ ನಿಂತಿರುವ ಶ್ರವಣಬೆಳಗೊಳದಂತಹ ಜಾಗದ ಪ್ರಭಾವವೂ ಇದೆ.
ಹೀಗಾಗಿ ಶಿವರಾಮೇಗೌಡರು ಈ ರೀತಿ ಮಾತನಾಡಬಾರದಿತ್ತು ಎಂದ ಅವರು,ಇಂತಹ ಮಾತುಗಳನ್ನಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೀರಾ?ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ,ವರದಿ ತರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜೆಡಿಎಸ್ ಈ ದೇಶಕ್ಕೆ ಪ್ರಧಾನಿಯನ್ನು ನೀಡಿದ ಪಕ್ಷ.ಏಕಕಾಲಕ್ಕೆ ಅದು ಸ್ಥಳೀಯ ಸಮಸ್ಯೆಗಳ ಕಡೆ ನೋಡುತ್ತಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಕಡೆಗೂ ಗಮನ ಹರಿಸುತ್ತಲೇ ಇರುತ್ತದೆ.ಅದಕ್ಕೆ ಜನಪರವಾದ ಬದ್ಧತೆ ಇದೆ ಎಂದು ಸಮರ್ಥಿಸಿಕೊಂಡರು.
ಇವತ್ತು ನಕಲಿ ರಾಷ್ಟ್ರೀಯತೆ ಹಾಗೂ ಬಹುತ್ವದ ಭಾರತದ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಬಣ್ಣಿಸಿದ ಅವರು,ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದ ನರೇಂದ್ರಮೋದಿ ಸರ್ಕಾರ ಏನು ಮಾಡಿದೆ?ಎಂದು ಪ್ರಶ್ನಿಸಿದರು.
ಅಂದರೆ ಐದು ವರ್ಷದಲ್ಲಿ ಹತ್ತು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು.ಆದರೆ ಕಾರ್ಮಿಕ ಸಂಘಟನೆಗಳ ಪ್ರಕಾರವೇ ಉದ್ಯೋಗದ ಪ್ರಮಾಣ ಕುಸಿದು ಹೋಗಿದೆ.ಇವತ್ತು ದೇಶಕ್ಕೆ ಉದ್ಯೋಗ ಬಹಳ ಮುಖ್ಯ.ಆದರೆ ಬಿ.ಎಸ್.ಎನ್.ಎಲ್ ನಂತಹ ಸಂಸ್ಥೆಯಲ್ಲೇ ಐವತ್ತು ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ.ಇದು ಮೋದಿ ಸರ್ಕಾರದ ಪ್ರಮುಖ ಸಾಧನೆಗಳಲ್ಲೊಂದು ಎಂದು ಹೇಳಿದರು.
ಜಿಯೋ ಎಂಬ ಖಾಸಗಿ ಸಂಸ್ಥೆಯನ್ನು ಬೆಳೆಸಲು ಬಿ.ಎಸ್.ಎನ್.ಎಲ್ ಅನ್ನು ಬಲಿಕೊಡಲಾಗುತ್ತಿದೆ.ಇದು ಸರಿಯಲ್ಲ.ಕಳೆದ ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ರೂಪಾಯಿಗಳನ್ನು ಹಾಕುತ್ತೇವೆ ಎಂದ ಮೋದಿ ಹದಿನೈದು ರೂಪಾಯಿ ಹಾಕಲಿಲ್ಲ.
ಕಾಂಗ್ರೆಸ್ ಕಾಲದಲ್ಲಿ ರಷ್ಯಾ ಮಾದರಿಯಲ್ಲಿ ಯೋಜನಾ ಆಯೋಗ ರಚಿಸಲಾಯಿತು.ಆದರೆ ನರೇಂದ್ರಮೋದಿ ಸರ್ಕಾರ ಬಂದು ಆ ವ್ಯವಸ್ಥೆಗೇ ಕಲ್ಲು ಹಾಕಿತು.ಇದೇ ರೀತಿ ಜನಸಾಮಾನ್ಯರು ಜೀವನ ನಡೆಸಲು ಪರದಾಡುವ ಸ್ಥಿತಿಯನ್ನು ಸೃಷ್ಟಿಸಿತು ಎಂದರು.
ರಫೆಲ್ ಯುದ್ಧ ವಿಮಾನಗಳ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದ ಕಡತವೇ ನಾಪತ್ತೆಯಾಗಿದೆ ಎನ್ನುವ ಮೂಲಕ ದೇಶದ ಹಿತವನ್ನು ಕಾಪಾಡುವ ವಿಷಯ ಬಂದರೆ ತಾನು ನಾಪತ್ತೆಯಾಗುವ ಸಂಕೇತವನ್ನು ನರೇಂದ್ರಮೋದಿ ಸರ್ಕಾರ ನೀಡಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ನಡುವೆ ಹೊಂದಾಣಿಕೆಯ ಕೊರತೆಯಿಲ್ಲ ಎಂದ ಅವರು,ಚುನಾವಣೆಯಲ್ಲಿ ಇಂತಿಷ್ಟೇ ಸೀಟುಗಳನ್ನು ಗೆಲ್ಲುತ್ತೇವೆ ಎಂದು ನಿಖರವಾಗಿ ಹೇಳುವುದಿಲ್ಲ.ಆದರೆ ನಿಶ್ಚಿತವಾಗಿ ಬಿಜೆಪಿಗಿಂತ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದರು.
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಕ್ಯಾಂಡಿಡೇಟ್ ವಿಜಯಾಶಂಕರ್ ಗೆಲ್ಲಲಿದ್ದಾರೆ ಎಂದ ಅವರು,ಚುನಾವಣಾ ಪ್ರಚಾರಕ್ಕೆ ನಾನು ಹಾಗೂ ಸಿದ್ಧರಾಮಯ್ಯ ಅವರಿಬ್ಬರೂ ಹೋಗುತ್ತೇವೆ.ಹಳೆಯದನ್ನೆಲ್ಲ ನೆನಪಿಸಿಕೊಳ್ಳುತ್ತಾ ಕೂರುವ ಕಾಲ ಇದಲ್ಲ ಎಂದು ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.