ಸ್ಟ್ರಾಂಗ್‍ರೂಮ್‍ಗೆ ಬಿಗಿಭದ್ರತೆ

ಹಾವೇರಿ:

        17ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಹಾವೇರಿ ಕ್ಷೇತ್ರದಲ್ಲಿ ಶೇ.74.01ರಷ್ಟು ಮತದಾನವಾಗಿದೆ. ಮತ ಎಣಿಕೆ ಕೇಂದ್ರವಾದ ದೇವಗಿರಿಯ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಸರ್ಪಗಾವಲಿನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.

       ಮೇ 23 ರಂದು ಹಾವೇರಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ದೇವಗಿರಿ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ದಾಸ್ತಾನು ಮಾಡಲಾಗಿದೆ. ಕೊಠಡಿ ಸುತ್ತಲೂ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಪ್ರತಿ ಕೊಠಡಿಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಿಟಕಿ, ಬಾಗಿಲುಗಳನ್ನು ಭದ್ರಪಡಿಸಲಾಗಿದೆ. ಯಾವುದೇ ಬೆಂಕಿ, ಇತರ ಅವಘಡಗಳಿಗೆ ಅವಕಾಶಗಳು ಇಲ್ಲದಂತೆ ಗರಿಷ್ಠ ಭದ್ರತಾ ವ್ಯವಸ್ಥೆಯೊಂದಿಗೆ ಸೀಲ್ ಮಾಡಲಾಗಿದೆ.

        ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಿ ಕಟ್ಟೆಚ್ಚರದಿಂದ ಕಾವಲಿಗಾಗಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

          ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಮತಯಂತ್ರಗಳ ಭದ್ರತೆ ಕುರಿತಂತೆ ಮಾಹಿತಿ ನೀಡಿ, 24 ತಾಸು ಸ್ಟ್ರಾಂಗ್‍ರೂಮ್‍ಗಳ ಭದ್ರತೆಗಾಗಿ ಕಾರ್ಯನಿರ್ವಹಿಸಲು ಕೇಂದ್ರ ಸಶಸ್ತ್ರ ಮೀಸಲು ಪಡೆ ಹಾಗೂ ಪೊಲೀಸ್‍ರನ್ನು ನಿಯೋಜಿಸಲಾಗಿದೆ. ಒಂದು ಪ್ಲಟೂನ್, ಸಿ.ಆರ್.ಪಿ.ಎಫ್ ತಂಡ, ಒಂದು ಕೆ.ಎಸ್.ಆರ್.ಪಿ. ಪ್ಲಟೂನ್, ಮೂರು ಡಿ.ಎ.ಆರ್.ಪ್ಲಟೂನ್, ಎರಡು ಜನ ಪೊಲೀಸ್ ವಿಭಾಗೀಯ ಉಪಾಧೀಕ್ಷಕರು, ನಾಲ್ಕುಜನ ವೃತ್ತ ಆರಕ್ಷಕ ನಿರೀಕ್ಷಕರು, ಎಂಟು ಜನ ಪೊಲೀಸ್ ಸಬ್ ಇನ್ಸಪೆಕ್ಟರ್, 16 ಜನ ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ್, 52 ಜನ ಪೇದೆಗಳು ಹಾಗೂ ಮುಖ್ಯ ಪೇದೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

         ಮುಖ್ಯ ದ್ವಾರದಲ್ಲಿ ಡಿಎಫ್‍ಎಂಡಿ ಅಳವಡಿಸಲಾಗಿದೆ. ಒಂದು ಅಗ್ನಿಶ್ಯಾಮಕ ವಾಹನವನ್ನು ನಿಯೋಜಿಸಲಾಗಿದೆ. ಬೆಂಕಿ ಪ್ರತಿಬಂಧಕವನ್ನು ಅಳವಡಿಸಲಾಗಿದೆ. ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ಹೆಸ್ಕಾಂ ಅಭಿಯಂತರರು ಸ್ಟ್ರಾಂಗ್‍ರೂಮ್ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾರೆ. ಮೇಲುಸ್ತುವಾರಿಗಾಗಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳನ್ನು ಪಾಳೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ನಿಯೋಜಿಸಿದ್ದಾರೆ. ಗರಿಷ್ಠ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳನ್ನು ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link