ತುಮಕೂರು
ಪಿತ್ರಾರ್ಜಿತ ಆಸ್ತಿಗಾಗಿ ನಡೆಯುತ್ತಿದ್ದ ಗಲಭೆಯಿಂದ ನೊಂದ ವಿದ್ಯಾರ್ಥಿನಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಗೆ ಸೇರಿದ ಸೋಪನಹಳ್ಳಿಯಲ್ಲಿ ಜರುಗಿದೆ. ಮೃತ ಯುವತಿಯು ದೇವಿಕಾ (17) ಎಂದು ತಿಳಿದು ಬಂದಿದೆ.
ಈಕೆ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ದ್ವಿತೀಯ ಪಿಯೂಸಿ ಓದುತ್ತಿದ್ದು, ಸದ್ಯ ಕಾಲೇಜಿಗೆ ರಜೆ ಇದ್ದುದರಿಂದ ಮನೆಯಲ್ಲೇ ಇದ್ದರು ಎಂದು ಹೇಳಲಾಗಿದೆ.ಸೋಪನಹಳ್ಳಿಯ ದೇವೇಂದ್ರ ಪ್ರಸಾದ್ ಹಾಗೂ ಅವರ ಸಹೋದರರ ನಡುವೆ ಹಲವು ವರ್ಷಗಳಿಂದ ಪಿತ್ರಾರ್ಜಿತ ಆಸ್ತಿಗಾಗಿ ಒಳ ಜಗಳ ನಡೆಯುತ್ತಿತ್ತು. ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ದೇವೇಂದ್ರ ಪ್ರಸಾದ್ ಹಾಗೂ ಸಹೋದರ ತಿಮ್ಮೇಗೌಡ ಮತ್ತು ಪಂಚಾಕ್ಷರಿ ಅವರುಗಳು ದೇವೇಂದ್ರ ಪ್ರಸಾದ್ ಇಲ್ಲದ ವೇಳೆ ಜಗಳ ತೆಗೆದಿದ್ದಾರೆ. ಇದರಿಂದ ಹೆದರಿದ ಪ್ರಸಾದ್‍ರವರ ಪತ್ನಿ ಸವಿತಾ ಕಿರಿ ಮಗಳೊಂದಿಗೆ ಆಗಮಿಸಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ನೀಡಿದ್ದರ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಸೋಪನಹಳ್ಳಿಗೆ ಇಬ್ಬರು ಪೊಲೀಸರನ್ನು ಕಳಿಸಿದ್ದರಿಂದ ಕುಪಿತಗೊಂಡ ದೇವೇಂದ್ರ ಪ್ರಸಾದ್ ಅವರ ಮನೆಗೆ ಪುನಃ ನುಗ್ಗಿ ದೇವೇಂದ್ರ ಪ್ರಸಾದ್ ಅವರ ಹಿರಿಯ ಮಗಳು ದೇವಕಿಯ ಬಗ್ಗೆ ಲಘುವಾಗಿ ಹಿಂಸಿಸಿದ್ದಾರೆ. ಇದರಿಂದ ಮನನೊಂದ ದೇವಿಕಾ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಮ್ಮೇಗೌಡ, ಗಂಗಾಧರ, ಪಂಚಾಕ್ಷರಿ, ಸುನಂದಾ, ಮಕ್ಕಳಾದ ರಕ್ಷಿತ್, ಭಾರ್ಗವಿ, ದೊಡ್ಡಮ್ಮ ಸುಧಾರಾಣಿ ಮತ್ತು ಆಕೆಯ ಪುತ್ರ ಸಾಗರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಅಡಿಷನಲ್ ಎಸ್ಪಿ ಉದೇಶ್, ಡಿವೈಎಸ್ಪಿ ಜಗದೀಶ್, ಸಿಪಿಐ ಸಿ.ಪಿ.ನವೀನ್, ಎಸ್‍ಐ ಪ್ರೀತಮ್ ಅವರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ