ತುಮಕೂರು
ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಳಸ ಸ್ಥಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಎರಡು ದಿನಗಳಿಂದ ಯಶಸ್ವಿಯಾಗಿ ನೆರವೇರಿದವು.
ಶ್ರೀ ದುರ್ಗಾಂಬಿಕಾ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಈ ಕಾರ್ಯಕ್ರಮಗಳ ಅಂಗವಾಗಿ ಶುಕ್ರವಾರ ಬ್ರಹ್ಮ ಕುಂಭಾಭಿಷೇಕ, ಚಂಡಿಕಾಹೋಮ, ಮಹಾಪೂಜೆ ನೆರವೇರಿದವು.
ಇದರಪ್ರಯುಕ್ತ ನಡೆದ ಸಮಾರಂಭವನ್ನು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯ ಉದ್ಘಾಟಿಸಿ, ಧಾರ್ಮಿಕ ಶ್ರದ್ಧೆ, ದೇವರ ಬಗ್ಗೆ ನಂಬಿಕೆ ಇಟ್ಟುಕೊಳ್ಳುವುದು ಮೂಢನಂಬಿಕೆ ಅಲ್ಲ, ಅಂತಹ ನಂಬಿಕೆ ಅನೇಕ ವಿಚಾರಗಳನ್ನು ಹೊಂದಿ ಮಾನಸಿಕ ಶಕ್ತಿ ಹೆಚ್ಚಿಸುತ್ತದೆ ಎಂದರು.
ನಂಬಿಕೆ ಮುಖ್ಯವಾಗಿ ಮನುಷ್ಯನಲ್ಲಿ ಹಲವು ಶಕ್ತಿಗಳನ್ನು ಉಂಟು ಮಾಡಿ, ಆತ್ಮ ಬಲ ಹೆಚ್ಚು ಮಾಡಿ ಅಸಾಧ್ಯವಾದುದನ್ನೂ ಸಾಧಿಸಬಹುದಾದ ಆತ್ಮ ಶಕ್ತಿ ನೀಡುತ್ತದೆ. ಧರ್ಮ ಶ್ರದ್ಧೆಯು ವೈಜ್ಞಾನಿಕತೆಯ ವೈರುಧ್ಯವೇನಲ್ಲ. ಆತ್ಮ ಶಕ್ತಿ ಹೆಚ್ಚಿಸಿಕೊಳ್ಳಲು ಧಾರ್ಮಿಕ ಶ್ರದ್ಧೆಯಿಂದ ಸಾಧ್ಯವಾಗಬಹುದಾದರೆ ಅನುಸರಿಸಬಹುದು ಎಂದು ಹೇಳಿದರು.
ಮನುಷ್ಯರಲ್ಲಿ ಅನುಸರಿಸುವ ಗುಣ, ಒಳ್ಳೆಯ ಹೃದಯವಂತಿಕೆ ಕೊಡು ಎಂದು ದೇವರನ್ನು ಪ್ರಾರ್ಥಿಸಿದರೆ, ಅದು ಧÀಕ್ಕಿದರೆ ಅದು ಸಾರ್ಥಕ ಬದುಕು ಎಂದ ಅವರು, ಪ್ರತಿ ಮನುಷ್ಯನಲ್ಲೂ ದೇವರು ಇದ್ದಾನೆ ಎಂಬ ಜೀವಾನುಭವ ಹೊಂದಬೇಕು ಎಂದು ಎಂ.ಎನ್.ವೆಂಕಟಾಚಲಯ್ಯ ಹೇಳಿದರು.
ದೇಶದ ಆಡಳಿತ ವ್ಯವಸ್ಥೆ, ರಾಜಕೀಯ ವ್ಯವಸ್ಥೆ ಹೇಗಿದೆ ಎಂದು ಗಮನಿಸಿದರೆ, ಒಬ್ಬರನ್ನೊಬ್ಬರು ದೂಷಣೆ ಮಾಡುವ ಪರಿಸ್ಥಿತಿಗೆ ಬಂದಿದೆ. ಇದನ್ನೂ ಮೀರಿ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬೆಳೆಸುವ ಕೆಲಸಗಳಾಗಬೇಕು ಎಂದು ಹೇಳಿದರು.ಸಂಸದ ಜಿ.ಎಸ್.ಬಸವರಾಜು ಅವರು ಟಿ.ಎಸ್.ಅನಂತಮೂರ್ತಿಯವರು ರಚಿಸಿದ ರಮಣ ಮಹರ್ಷಿ ಗ್ರಂಥ ಬಿಡುಗಡೆ ಮಾಡಿ, ನಮ್ಮ ದೇಶದ ಮೇಲೆ, ಸಂಸ್ಕøತಿಯ ಮೇಲೆ ಅದೆಷ್ಟೇ ದಾಳಿಗಳಾದರೂ ನಮ್ಮ ಧರ್ಮ ಧಕ್ಕೆಯಾಗದಂತೆ ಉಳಿದಿದೆ ಎಂದರೆ ಅದು ನಮ್ಮಲ್ಲಿನ ಅವಧೂತರು, ಸ್ವಾಮೀಜಿಗಳ ಮಾರ್ಗದರ್ಶನದಿಂದ ಎಂದು ಹೇಳಿದರು.
ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ಇಂತಹ ಮಹಾತ್ಮರು ಹಾಕಿಕೊಟ್ಟ ಮಾರ್ಗ ಸಹಕಾರಿಯಾಗಿದೆ. ಇಂತಹವರ ತ್ಯಾಗ, ಶಕ್ತಿ ದೇಶಕ್ಕೆ ದೊರೆತ ದೊಡ್ಡ ಕೊಡುಗೆ. ರಮಣ ಮಹರ್ಷಿಗಳ ಬಗ್ಗೆ ಚಿಂತನೆ ಮಾಡುವವರು ಕೋಟ್ಯಾಂತರ ಜನರಿದ್ದಾರೆ. ರಮಣ ಮಹರ್ಷಿಗಳ ಬಗ್ಗೆ ಗ್ರಂಥ ರಚಿಸಿದ ಟಿ.ಎಸ್.ಅನಂತಮುರ್ತಿಯವರೂ ಮಹರ್ಷಿಗಳ ಮಾರ್ಗದಲ್ಲಿ ಸಾಗಿ ಸ್ವತ: ಸಾಧಕರಾಗಿದ್ದಾರೆ ಎಂದರು.
ಧಾರ್ಮಿಕ ಚಿಂತಕಿ ವೀಣಾ ಬನ್ನಂಜೆಯವರು ರಮಣ ಮಹರ್ಷಿ ಹಾಗೂ ಸತ್ ಉಪಾಸಿಯವರ ಕುರಿತು ಮಾತನಾಡಿ, ಈ ಇಬ್ಬರು ಸಾಧಕರು ತಮ್ಮ ಸಾಧನೆಯ ಮೂಲಕವೇ ಇಂತಹ ಸ್ಥಾನ ಪಡೆದರು. ಅವರು ಸಮಾಜಕ್ಕೆ ನೀಡದ ಮಾರ್ಗದರ್ಶನ ಅನುಸರಿಸಿದರೆ ಸಾರ್ಥಕ ಬದುಕು ನಮ್ಮದಾಗುತ್ತದೆ ಎಂದರು.
ದೇವರೆಲ್ಲಿದ್ದಾನೆ, ದೇವರೇ ಇಲ್ಲ ಎನ್ನುವವರಿದ್ದಾರೆ. ದೇವರು ಎಲ್ಲರಲ್ಲೂ ಇದ್ದಾನೆ, ನೋಡುವ ಒಳಗಣ್ಣು ಇರಬೇಕಷ್ಟೇ. ಅಂತರಂಗದ ದೃಢ ನಂಬಿಕೆಯೇ ದೇವರು. ನಂಬಿಕೆಯೇ ದೈವಶಕ್ತಿ. ಆ ಶಕ್ತಿ ಏನನ್ನಾದರೂ ಸಾಧಿಸಲು ಪ್ರೇರಣೆಯಾಗುತ್ತದೆ. ರಮಣ ಮಹರ್ಷಿ ಹಾಗೂ ಸತ್ ಉಪಾಸಿಯವರು ಸಕಲ ಜೀವಸಂಕುಲದ ಒಳಿತಿಗಾಗಿ ಬದುಕು ಮುಡುಪಿಟ್ಟರು ಎಂದು ಹೇಳಿದರು.
ಶ್ರೀ ದುರ್ಗಾಂಬಿಕಾ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕರಾದ ಡಾ. ಎಂ.ಆರ್.ಹುಲಿನಾಯ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿ ಎಸ್.ನಾಗಣ್ಣ, ನಿವೃತ್ತ ಐಎಎಸ್ ಅಧಿಕಾರಿ ಡಿ. ಸತ್ಯಮೂರ್ತಿ, ಶಾಂತಾದುರ್ಗಾದೇವಿ ಹುಲಿನಾಯ್ಕರ್, ಡಾ. ರಮಣ್ ಹುಲಿನಾಯ್ಕರ್ ಮತ್ತಿತರರು ಭಾಗವಹಿಸಿದ್ದರು.ನಂತರ, ಗಾಯಕಿ ಸಂಗೀತಾ ಕಟ್ಟಿ ಅವರಿಂದ ಶ್ರೀದೇವಿ ಕೀರ್ತನೆಗಳ ಗಾಯನ ಹಾಗೂ ಬಾಲ ವಿಶ್ವನಾಥ್ ನೇತೃತ್ವದ ನೀಲಾಲಯ ತಂಡದಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
