ಶಿಗ್ಗಾಂವಿ :
ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿರುವ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಜಾನಪದ ವಿಶ್ವವಿದ್ಯಾಲಯದ ಘಟಕ ಸಮಿತಿಯು ಸ್ವಾಗತಿಸುತ್ತದೆ ಎಂದು ಕರ್ನಾಟಕ ಜಾನಪದ ವಿವಿಯ ಎಸ್‍ಎಫ್‍ಐ ಘಟಕದ ಮುಖಂಡ ಮಂಜುನಾಥ ಮಕರವಳ್ಳಿ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಪ್ರಾತಿನಿಧ್ಯವನ್ನು ತೆಗೆದು ಹಾಕಲು ಕೇಂದ್ರದಲ್ಲಿ ಎನ್.ಡಿ.ಎ ತೋರಿದ ಆಸಕ್ತಿಯನ್ನು ರಾಜ್ಯದಲ್ಲಿ ಜಾರಿ ಮಾಡಲು ಎಸ್.ಎಮ್ ಕೃಷ್ಣರವರ ಕಾಂಗ್ರೆಸ್ ಸರ್ಕಾರ 2002 ರಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಿಲ್ಲಿಸಿತು. ಅದರ ಮೂಲಕ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುವ ಕೆಲಸ ರಾಜ್ಯದಲ್ಲಿಯೂ ಆರಂಭವಾಯಿತು.
ಸಮಾಜದ ಪ್ರಗತಿಯಲ್ಲಿ ವಿದ್ಯಾರ್ಥಿ-ಯುವಜನರು ತೊಡಗದಂತೆ ತಡೆಹಿಡಿಯಲು ವಿವಿಧ ಪ್ರಯತ್ನಗಳು ನಡೆಯತ್ತಿವೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ, ಜನಪರ ರಾಜಕೀಯ ಚಿಂತನೆಗಳು ಬೆಳೆಯದಂತೆ ಪಠ್ಯಕ್ರಮವನ್ನು ರೂಪಿಸಲಾಗುತ್ತಿದೆ. ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಅದಕ್ಕಾಗಿ ತ್ರೈಮಾಸಿಕ, ಸೆಮಿಸ್ಟರ್, ಕ್ರೆಡಿಟ್ ಕೋರ್ಸ್ ಇತ್ಯಾದಿ ಪದ್ದತಿಗಳ ಹೆಸರಿನಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಪರಿಕ್ಷೆಗಳಲ್ಲೇ ಮುಳುಗಿರುವಂತೆ ಮಾಡಲಾಗುತ್ತಿದೆ. ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಿರಾಕರಿಸಿ, ಉದ್ದೇಶ ಪೂರ್ವಕವಾಗಿಯೇ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಧಮನ ಮಾಡಲಾಗಿದೆ.
ನ್ಯಾಯಮೂರ್ತಿ ಲಿಂಗ್ಡೋ ಕಮಿಟಿಯು ಎಲ್ಲ ಹಂತದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಬೇಕೆಂದು ನೀಡಿರುವ ಶಿಫಾರಸ್ಸು ಜಾರಿಗೆ ತರಲು, ಶೈಕ್ಷಣಿಕ ಕ್ಷೇತ್ರದ ಪ್ರಗತಿಯಲ್ಲಿ ವಿದ್ಯಾರ್ಥಿ-ಶಿಕ್ಷಕ ಸಮುದಾಯದ ಪ್ರಾತಿನಿಧ್ಯವನ್ನು ಎತ್ತಿಹಿಡಿಯಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ