ಹುಳಿಯಾರು
ತಂದೆಯ ಸಾವಿನ ಆಘಾತದ ನಡುವೆಯೇ ಪಟ್ಟಣದ ಟಿ.ಆರ್.ಎಸ್.ಆರ್. ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಶುಕ್ರವಾರ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾನೆ.
ಹುಳಿಯಾರು ಹೋಬಳಿ ಸೀಗೆಬಾಗಿಯ ವರುಣ್ ಈ ಧೈರ್ಯ ತೋರಿರುವ ವಿದ್ಯಾರ್ಥಿ. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಜಿ.ಪಿ.ಪ್ರಸನ್ನಕುಮಾರ್ (48) ಗುರುವಾರ ರಾತ್ರಿ ಮೃತಪಟ್ಟರು. ರಾತ್ರಿಯಿಡೀ ತಂದೆಯ ಶವದೊಂದಿಗೆ ಇದ್ದ ವರುಣ್, ಶುಕ್ರವಾರ ಬೆಳಿಗ್ಗೆ ಕೂಡ `ಪರೀಕ್ಷೆ ಬರೆಯಲೊಲ್ಲೆ’ ಎಂದು ಮೃತದೇಹದ ಬಳಿಯೇ ಕಣ್ಣೀರಿಡುತ್ತಾ ಕುಳಿತಿದ್ದ.
ಬಹುತೇಕ ಸಂಬಂಧಿಕರು ಬಾಲಕನಿಗೆ ಧೈರ್ಯ ತುಂಬಿ, ಪರೀಕ್ಷಾ ಕೇಂದ್ರಕ್ಕೆ ಕರೆತಂದು ಬಿಟ್ಟರು. ತಂದೆ ಸಾವಿನ ಆಘಾತದಿಂದ ಸ್ವಲ್ಪ ಮಟ್ಟಿಗೆ ಹೊರಬಂದನಾದರೂ ದುಃಖದ ಮಡುವಿನಲ್ಲೇ ಹುಳಿಯಾರಿನ ಟಿ.ಆರ್.ಎಸ್.ಆರ್ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಸಮಾಜವಿಜ್ಞಾನ ಪರೀಕ್ಷೆ ಬರೆದ.
ಬಳಿಕ ಸೀಗೆಬಾಗಿಯ ನಡೆದ ತಂದೆಯ ಅಂತ್ಯಸಂಸ್ಕಾರ ದಲ್ಲಿ ಪಾಲ್ಗೊಂಡ. ಪರೀಕ್ಷೆ ಬರೆದು ಶಾಲೆಯಿಂದ ಹೊರ ಬಂದ ಬಾಲಕ ಪರೀಕ್ಷೆ ಚನ್ನಾಗಿ ಬರೆದಿದ್ದು ಈ ಹಿಂದೆ ಓದಿದ್ದ ವಿಷಯದ ಬಗ್ಗೆಯೇ ಪ್ರಶ್ನೆಗಳು ಬಂದಿದ್ದು ಸಹಕಾರಿಯಾಯಿತು ಎಂದು ಮಾಧ್ಯಮದವರಿಗೆ ತಿಳಿಸಿ ಸಂಬಂಧಿಕರ ದ್ವಿಚಕ್ರದಲ್ಲಿ ತಂದೆಯ ಮೃತ ದೇಹ ನೋಡಲು ತೆರಳಿದ.