ಚಿತ್ರದುರ್ಗ
ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳಿಗೆ ಮಾತ್ರ ಸೀಮಿತವಾಗಬಾರದು. ಇದರ ಜೊತೆಗೆ ಸಾಮಾನ್ಯ ಜ್ಞಾನವೂ ಮುಖ್ಯ. ಈ ನಿಟ್ಟಿನಲ್ಲಿ ಪಠ್ಯಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶೋಭಾ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2018-10ನೇ ಸಾಲಿನ ಅಣುಕು ಯುವ ಸಂಸತ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಈ ನಿಟ್ಟಿನಲ್ಲಿ ಅವರಿಗೆ ದೇಶದ ಆಗು – ಹೋಗುಗಳು, ರಾಜಕೀಯ ಪರಿಸ್ಥಿತಿಗಳ ಬಗ್ಗೆ ತಿಳಿಸಿಕೊಡಬೇಕು. ಈ ನಿಟ್ಟಿನಲ್ಲಿ ಅಣುಕು ಯುವ ಸಂಸತ್ ಸಹಕಾರಿ ಎಂದರು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಬೋಧನೆ ಮಾಡಿದರೆ ಸಾಲದು. ಇದರ ಜೊತೆಗೆ ರಾಜಕೀಯ ವ್ಯವಸ್ಥೆಯ ಪರಿಚಯವನ್ನೂ ಮಾಡಿಕೊಡಬೇಕಿದೆ ಜೊತೆ ಜೊತೆಗೆ ಸಂಸತ್, ವಿಧಾನ ಮಂಡಲದ ಕಲಾಪಗಳ ಬಗ್ಗೆ ತಿಳಿಸಿಕೊಡಬೇಕು. ಅಲ್ಲದೇ ವಾಸ್ತವ ಸಂಗತಿಗಳಾದ ರೈತ ಆತ್ಮಹತ್ಯೆ, ಬರ ಪರಿಸ್ಥಿತಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ವಿವಿಧ ವಿಚಾರಗಳನ್ನು ಮಕ್ಕಳಿಗೆ ತಿಳಿಸಬೇಕು. ಇದರಿಂದ ಅವರು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಹೇಳಿದರು.
ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಜಿ.ಬಾಲರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಶಾಲಾ ಕಾಲೇಜುಗಳ ಪಠ್ಯವನ್ನು ಓದುವುದರ ಜೊತೆಗೆ ಇತರೆ ವಿಚಾರಗಳನ್ನು ತಿಳಿದುಕೊಳ್ಳಬೇಕು. ದೇಶದಲ್ಲಿ ನಡೆಯುವ ಭಯೋತ್ಪಾದನೆ, ಭ್ರಷ್ಟಾಚಾರ, ರಾಜಕೀಯ ವ್ಯವಸ್ಥೆ. ಇವುಗಳ ಕುರಿತು ಇಂದಿನ ಸರ್ಕಾರಗಳು ಕಂಡುಕೊಳ್ಳುವ ಪರಿಹಾರೋಪಾಯಗಳ ಬಗ್ಗೆ ಮಕ್ಕಳಿಗೆ ಉಪನ್ಯಾಸಕರು ತಿಳಿಸಿಕೊಡಬೇಕು. ಇದರಿಂದ ಅವರ ಜ್ಞಾನದ ಮಟ್ಟ ಹೆಚ್ಚಾಗುತ್ತದೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಎಂ.ಮಹದೇವಪ್ಪ ಮಾತನಾಡಿ, ಯುವ ಸಂಸತ್‍ನಲ್ಲಿ ಮಕ್ಕಳು ಭಾಗವಹಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಉಪನ್ಯಾಸಕರು ಮಕ್ಕಳಿಗೆ ಸೂಕ್ತ ತರಬೇತಿ ನೀಡಬೇಕು. ಆಡಳಿತ ಪಕ್ಷ, ವಿರೋಧ ಪಕ್ಷಗಳ ಪ್ರತಿನಿಧಿಗಳಾಗಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರಿಗೆ ರಾಜಕೀಯ ಜ್ಞಾನ ಬೆಳೆಯುತ್ತದೆ. ಇಂದಿನ ದಿನಗಳಲ್ಲಿ ಭಾರತವು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಅದಕ್ಕೆ ಇಂದಿನ ಕೇಂದ್ರ ಸರ್ಕಾರ ಕಾರಣ ಎಂದರು.
ಅದರಂತೆ ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಇಂದಿನ ಸರ್ಕಾರಗಳು ವಿಫಲವಾಗಿವೆ. ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾದುದು. ಸರ್ಕಾರ ಹಾಗೂ ಅದರ ಪ್ರತಿನಿಧಿಗಳ ಜವಾಬ್ಧಾರಿ. ಮಕ್ಕಳಿಗೆ ಕೇವಲ ಶಿಕ್ಷಣ ಕೊಟ್ಟರೆ ಸಾಲದು. ಶಿಕ್ಷಣ ಮುಗಿಸಿದ ನಂತರ ಅವರಿಗೆ ಸೂಕ್ತ ಉದ್ಯೋಗಾವಕಾಶಗಳನ್ನು ಒದಗಿಸಬೇಕು. ಈ ಕುರಿತು ಯಾವ ಸರ್ಕಾರಗಳು ಚರ್ಚೆ ನಡೆಸುತ್ತಿಲ್ಲ ಎಂದು ಆಕ್ಷೇಪಿಸಿದರು. ಜಿಲ್ಲಾ ಪ್ರಾಚಾರ್ಯರ ಸಂಘದ ಕಾರ್ಯದರ್ಶಿ ಪಿ.ಆರ್.ನಿಂಗಪ್ಪ, ಖಜಾಂಚಿ ಕೆ.ವೀರಭದ್ರಪ್ಪ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಲಕ್ಷಣ್, ಕಾರ್ಯಕ್ರಮ ಸಂಯೋಜಕ ಎಂ.ಎಸ್.ರಾಮಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ಲೋಕೇಶ್ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ