ಶಿಗ್ಗಾಂವ :
ಮಾರುಕಟ್ಟೆಯಲ್ಲಿ ಸರಕುಗಳನ್ನು ಮಾರಾಟ ಮಾಡಿದಂತೆ ಶಿಕ್ಷಣವನ್ನು ವ್ಯಾಪಾರ ಮಾಡಲಾಗುತ್ತಿದೆ.ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳನ್ನು ಖಾಸಗಿಕರಣಗೊಳಿಸುತ್ತಿದ್ದು, ದೇಶದ ಶಿಕ್ಷಣ ವ್ಯವಸ್ಥೆಯನ್ನು ವಿದೇಶಿಯರ ಜವಾಬ್ದಾರಿಗೆ ಒಪ್ಪಿಸುವುದು ಖಂಡನೀಯ ಎಂದು ಡಿವೈಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಶರೀಫ ಭವನದಲ್ಲಿ ಜರುಗಿದ ತಾಲ್ಲೂಕಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ಗಳ ಮಂಜೂರಾತಿಗಾಗಿ,ಕೆಎಸ್ ಆರ್ಟಿಸಿ ಬಸ್ ಡಿಪೋ ಮಂಜೂರಾತಿಗಾಗಿ ಒತ್ತಾಯಿಸಿ ತಾಲ್ಲೂಕಿನ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಎಸ್ಎಫ್ಐನ 4ನೇ ಶಿಗ್ಗಾಂವ ತಾಲ್ಲೂಕಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಂಕಷ್ಟದಲ್ಲಿರುವ ಬಡವರನ್ನು ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಶಿಕ್ಷಣಕ್ಕಾಗಿ ಬೇರೆ ದೇಶಗಳಿಂದ ಸಾಲ ತರುವ ಭಾರತ ಸರ್ಕಾರದ ಕ್ರಮ ಶಿಕ್ಷಣ ವಿರೋಧಿಯಾಗಿದೆ, ಇದರ ವಿರುದ್ಧ ಧ್ವನಿ ಎತ್ತಲು ವಿದ್ಯಾರ್ಥಿ-ಯುವಜನರ ಮುಂದಾಗಬೇಕು ಎಂದರು.ಕೇಂದ್ರ ಮತ್ತುರಾಜ್ಯ ಸರ್ಕಾರಗಳ ಶಿಕ್ಷಣ ವಿರೋಧಿ ನೀತಿಗಳನ್ನು ಹಿಮೆಟ್ಟಿಸುವುದಕ್ಕಾಗಿ ಸಂಘರ್ಷ ಹೋರಾಟಗಳನ್ನು ನಡೆಸಲಾಗಿದೆ.ಸರ್ಕಾರಿ ಶಾಲಾ-ಕಾಲೇಜ್ ವಿಶ್ವವಿದ್ಯಾಲಯ, ಹಾಸ್ಟಲ್ಗಳನ್ನು ಬಲಗೊಳಿಸುವಂತೆ ಒತ್ತಾಯಿಸಿ ಹೋರಾಟಗಳನ್ನು ನಡೆಸಬೇಕಿದೆ ಎಂದು ಬಸವರಾಜ ಪೂಜಾರ ಹೇಳಿದರು.
ಸಿಐಟಿಯು ಜಿಲ್ಲಾ ಸಂಚಾಲಕರಾದ ವಿನಾಯಕ ಕುರುಬರ ಮಾತನಾಡಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ದೇಶದ ಸ್ವಾತಂತ್ರ್ಯ ಚಳುವಳಿಯ ಹಾಗೂ ಅಭ್ಯಾಸ, ಹೋರಾಟ ಮತ್ತುತ್ಯಾಗದ ಪರಂಪರೆ ಹೊಂದಿರುವದೇಶದಅತೀದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದ್ದು, ಸರ್ವರಿಗೂ ಸಮಾನಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ದೇಶದ ಐಕ್ಯತೆ, ಸಮಗ್ರತೆ ಹಾಗೂ ಸೌಹಾರ್ದತೆಗಾಗಿ ವಿದ್ಯಾರ್ಥಿಗಳನ್ನು ದುಡಿಯಲು ಪ್ರೇರೆಪಿಸುತ್ತಿದೆಯಲ್ಲದೆ, ಜಾಗತೀಕರಣದ ಪರಿಣಾಮವಾಗಿ ಶಿಕ್ಷಣ ವ್ಯಾಪಾರದ ಸರಕಾಗಿದ್ದು ಶಿಕ್ಷಣ ಕ್ಷೇತ್ರದ ವ್ಯಾಪಾರೀಕರಣ, ಭಷ್ಟಾಚಾರ, ವಿದೇಶಿ-ಖಾಸಗಿ ವಿಶ್ವ ವಿದ್ಯಾಲಯಗಳು ದೇಶಕ್ಕೆ ಆಗಮಿಸುವುದನ್ನು ವಿರೋಧಿಸಿ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಧಮನದ ವಿರುದ್ಧ ನಿರಂತರವಾಗಿ ವಿದ್ಯಾರ್ಥಿಗಳ ಮಧ್ಯೆ ಹೋರಾಟ, ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. ಸಮ್ಮೇಳನದ
ಅಧ್ಯಕ್ಷತೆ ವಹಿಸಿದ್ದ ಎಸ್ಎಫ್ಐ ತಾಲ್ಲೂಕು ಅಧ್ಯಕ್ಷೆ ಜ್ಯೋತಿ ದೊಡ್ಡಮನಿ ಮಾತನಾಡಿ ಜಿಲ್ಲೆಯಲ್ಲಿ ಕೃಷಿಯಾಧಾರಿತ ಕೈಗಾರಿಕೆಗಳು ಪ್ರಾರಂಭಗೊಂಡರೆ ಜಿಲ್ಲೆಯ ರೈತ ಮಕ್ಕಳಿಗೆ ಸ್ಥಳಿಯವಾಗಿ ಕೆಲಸ ಸಿಗುವಂತಾಗುತ್ತದೆ. ಕೃಷಿಯಾಧಾರಿತ ಕೈಗಾರಿಕೆಗಳು ಪ್ರಾರಂಭವಾಗಬೇಕು.ದೇಶದಲ್ಲಿ ವಿದ್ಯಾರ್ಥಿ-ಯುವಜನರ ಮೇಲೆ ಪ್ರಭುತ್ವದ ದಾಳಿ ಪೂರ್ವಯೋಜಿತವಾಗುತ್ತಿದೆ.ಶುಲ್ಕ ಕಡಿಮೆ ಮಾಡಲು ಹೊರಾಡುವ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸುತ್ತಿರುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ನೀತಿಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ. ಎಸ್ಎಫ್ಐ ರಾಣೇಬೆನ್ನೂರ ತಾಲ್ಲೂಕು ಅಧ್ಯಕ್ಷೆ ಜ್ಯೋತಿ ಪೋಲಿಸ್ಗೌಡ್ರ. ಡಿವೈಎಫ್ಐ ಮುಖಂಡ ಪ್ರಕಾಶ್ ಹೊಟ್ಟೂರು. ಅಭಿಷೇಕ ಕಲಾಲ್.ನೇತ್ರ ಹುಲಸೊಗ್ಗಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ