ಹೆಡ್ ಮಾಸ್ಟರ್ ವರ್ಗಾವಣೆ ಮಾಡಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಹೊಳಲ್ಕೆರೆ

    ಶ್ರೀ ಕರಿಸಿದ್ದೇಶ್ವರ ಗ್ರಾಮಾಂತರ ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಜಪ್ಪ ರನ್ನು ಕೂಡಲೇ ವರ್ಗಾಯಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ರಾಮಗಿರಿ ಗ್ರಾಮದ ಶ್ರೀ ಕರಿಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ದಿಡೀರ್ ಪ್ರತಿಭಟನೆ ನಡೆಸಿದರು.

   ನಮ್ ಹೆಡ್ ಮಾಸ್ಟರ್ ರಾಜಪ್ಪ ಅವರನ್ನ ಟ್ರಾನ್ಸ್‍ಫರ್ ಮಾಡಿ, ಇಲ್ಲಂದ್ರ ನಮ್ಮೆಲ್ಲರಿಗೂ ಟಿಸಿ ಕೊಡಿ, ನಾವು ಯಾವುದಾದರೂ ಬೇರೆ ಶಾಲೆಗೆ ಸೇರ್ಕೋತೀವಿ, ಈ ಮೇಸ್ಟ್ರು ನಾಳೆ ಸ್ಕೂಲಿಗೆ ಬಂದ್ರೆ ನಾವು ಯಾರು ಶಾಲೆಗೆ ಬರಲ್ಲ. ನಮ್ದು ಒಂದು ವರ್ಷದ ಭವಿಷ್ಯ ಹಾಳಾದರೂ ಪರವಾಗಿಲ್ಲ. ನಾವು ಮಾತ್ರ ಶಾಲೆಯಲ್ಲಿ ಇರೋಲ್ಲ ಎಂದು ಗ್ರಾಮದ ಮುಖಂಡರ ಮುಂದೆ ತಮ್ಮ ಅಳಲು ತೋಡಿಕೊಂಡರು.

   ನಾವು ಎಸ್‍ಎಸ್‍ಎಲ್‍ಸಿ ಓದ್ತಾ ಇದೀವಿ ನಮ್ಗೆ ಸರಿಯಾಗಿ ಪಾಠನೇ ಮಾಡಿಲ್ಲ, ಹೆಡ್‍ಮೇಸ್ಟು ಸ್ಕೂಲಿಗೆ ಸರಿಯಾಗಿ ಬರಲ್ಲ, ಪಾಠ ಮಾಡ್ದೆ ಇದ್ರೆ ಪರೀಕ್ಷೆಯಲ್ಲಿ ನಾವು ಏನ್ ಬರಿಬೇಕು. ಕನ್ನಡ, ಇಂಗ್ಲೀಷ್, ಗಣಿತಕ್ಕೆ ಶಿಕ್ಷಕರಿಲ್ಲ, ಅತಿಥಿ ಶಿಕ್ಷಕರು ಬಂದ್ರೆ ಅವರಿಗೆ ಸಂಬಳ ಕೊಡೋದೇ ಇಲ್ಲ. ಇದ್ರಿಂದ ಅವರ ಬಿಟ್ಟು ಹೋಗ್ತಾರೆ. ಈ ಊರಾಗೆ ಟ್ಯೂಷನ್ ಕೂಡ ಯಾರು ಮಾಡಲ್ಲ, ಈವ್ರಿಂದ ನಮ್ ಭವಿಷ್ಯ ಹಾಳಾಯ್ತು, ನಮ್ ತಂದೆ ತಾಯಿಗೂ ಎಲ್ಲಾ ಹೇಳಿದ್ದೀವಿ.

    ಇನ್ನು ಒಂದು ಕೇಜಿ ಈರುಳ್ಳಿ ತಂದ್ರೆ ಒಂದು ವಾರ ಅಡುಗೆ ಮಾಡ್ತಾರೆ, ಸೊಪ್ಪು, ತರಕಾರಿ ಸರಿಯಾಗಿ ತರಲ್ಲ, ಬಿಸಿ ಊಟದ ಸಾಂಬರ್ ನಾಗೆ ಉಪ್ಪಿದ್ರೆ, ಹುಳಿ, ಖಾರ ಏನು ಇರಲ್ಲ. ಹೆಡ್‍ಮಾಸ್ಟ್ರುನ್ನ ಅಡುಗೆಯವರು ಕೇಳಿದ್ರೆ ಕೊಟ್ಟಿರೋದ್ರಲ್ಲೇ ಅಡುಗೆ ಮಾಡಿ ಇಲ್ಲಂದ್ರ ಬಿಟ್ಟು ಹೋಗಿ ಅಂತ ಜೋರ್ ಮಾಡ್ತಾರೆ.

    ಹುಷಾರಿಲ್ಲ, ಹಬ್ಬ ಹರಿದಿನ ಅಂತ ರಜೆ ಕೇಳಿದ್ರೆ ದಿನಕ್ಕೆ 10 ರೂ ಲಂಚ ಕೇಳ್ತಾರೆ. ರಜೆಯಿಂದ ಶಾಲೆಗೆ ಬರುವಾಗ ತೆಂಗಿನಕಾಯಿ, ಟೊಮೇಟೊ ಹಣ್ಣು, ತರಕಾರಿ, ಇನ್ನು ಅವ್ರು ಏನೇನ್ ಹೇಳ್ತಾರೋ ಅದನ್ನ ತರಬೇಕು. ಇಲ್ಲಂದ್ರೆ ಪರೀಕ್ಷೆಯಲ್ಲಿ ಫೇಲ್ ಮಾಡ್ತೀನಿ ಅಂತಾರೆ. ವಿದ್ಯಾರ್ಥಿನಿಯರು ಪಾಠ ಅರ್ಥವಾಗಿಲ್ಲ ಅಂದ್ರೆ ಅವಾಚ್ಯ ಪದಗಳಿಂದ ನಿಂದನೆ ಮಾಡ್ತಾರೆ. ಅವ್ರು ಮಾತಾಡೋ ಮಾತಿಗೆ ಹೆಣ್ಮಕ್ಲು ತಲೆ ತಗ್ಗಿಸಬೇಕು ಅಂತಹ ಪದಗಳ ಬಳಕೆ ಮಾಡ್ತಾರೆ ಎಂದು ದೂರಿನ ಸುರಿಮಳೆಯನ್ನೆ ಸುರಿಸಿದರು.

   ಮುಖಂಡ ರಾಮಗಿರಿ ರಾಮಣ್ಣ ಮಾತನಾಡಿ, ಮಕ್ಕಳನ್ನು ಸಮಾಧಾನ ಪಡಿಸಿ, ಶಾಲೆಯ ಒಳಗೆ ಕಳುಹಿಸಿ, ನಿಮ್ಮ ಸಮಸ್ಯೆ ಏನೇ ಇದ್ದರೂ ಬಗೆ ಹರಿಸೋಣ, ಮಕ್ಕಳು ಎಲ್ಲರೂ ಚೆನ್ನಾಗಿ ಓದಬೇಕು. ಯಾವ ಮಕ್ಕಳು ಶಾಲೆ ಬಿಡುವ ಮಾತನಾಡಬಾರದು, ಮುಖ್ಯ ಶಿಕ್ಷಕ ರಾಜಪ್ಪ ರನ್ನು ವರ್ಗಾವಣೆ ಮಾಡಿಸೋಣ, ಬೇರೆ ಮುಖ್ಯ ಶಿಕ್ಷಕರನ್ನ ಹಾಕಿಸೋಣ, ನಮಗೆ ಮಕ್ಕಳು, ಶಾಲೆಯ ಭವಿಷ್ಯ ಮುಖ್ಯ ಎಂದು ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿದರು. ಹಾಗೆಯೇ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ಇದೇ ಶಾಲೆಯಲ್ಲಿ ಓದಿದ ನೀವು ಈ ರೀತಿ ಮಾಡುವುದು ಸರಿಯಲ್ಲ. ಮಕ್ಕಳ ಭವಿಷ್ಯದ ಜೊತೆ ಆಟವಾಡಬೇಡಿ ಎಂದು ಎಚ್ಚರಿಸಿದರು.

   ಎಪಿಎಂಸಿ ಸದಸ್ಯ ಡಿ.ಬಿ.ಕುಮಾರ್, ಮುಖಂಡ ಷಡಾಕ್ಷರಿ ದೇವ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ಎನ್.ಜಯಣ್ಣ, ಕೆಂಚವೀರಪ್ಪರ ರುದ್ರಸ್ವಾಮಿ, ಪೋಷಕರು, ವಿದ್ಯಾರ್ಥಿಗಳು ಇದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link