ತುಮಕೂರು
ಪ್ರತಿಯೊಂದು ಇಂಜಿನಿಯರಿಂಗ್ ವಿಭಾಗಗಳಲ್ಲಿಯೂ ಅದರದೇ ಆದ ಸವಾಲುಗಳು ಹಾಗೂ ಅವಕಾಶಗಳಿವೆ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಹುಮುಖ ಕೌಶಲ್ಯಗಳು ಅಗತ್ಯವಾಗಿರುವುದರಿಂದ ವಿದ್ಯಾರ್ಥಿಗಳು ಜ್ಞಾನ ಮತ್ತು ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ನವದೆಹಲಿಯ ಮೈಕ್ರೋ ಎಲೆಕ್ಟ್ರಾನಿಕ್ ಡಿವೈಸೆಸ್ ಆ್ಯಂಡ್ ಕಾಂಪ್ಯುಟೇಶನಲ್ ಸಿಸ್ಟೆಮ್ಸ್ ಡಿಫೆನ್ಸ್ ರಿಸರ್ಚ್ ಡೆವೆಲಪ್ಮೆಂಟ್ ಆರ್ಗನೈಸೇಷನ್‍ನ ಡೈರೆಕ್ಟರ್ ಜನರಲ್ ಡಾ. ಸುಧೀರ್ ಕಾಮತ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ನಗರದ ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ಹತ್ತನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಒಂದು ಕಾಲೇಜಿನಿಂದ ಅಥವಾ ಒಂದು ವಿಶ್ವವಿದ್ಯಾಲಯದಿಂದ ಪದವಿ ಪಡೆಯುವುದು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಮೈಲಿಗಲ್ಲಾಗಿದೆ. ನಂತರ ಅವರು ತಮ್ಮ ಜೀವನದ ಭಿತ್ತಿಪತ್ರದ ಮೇಲೆ ಚಿತ್ರಿಸುವ ಸವಾಲುಗಳು ಹಾಗೂ ಅವಕಾಶಗಳು ಒಂದು ಸುಂದರ ಜಗತ್ತನ್ನು ರೂಪಿಸಿಕೊಳ್ಳುವಂತಾಗುತ್ತದೆ. ನಿಮ್ಮಂತಹ ವಿದ್ಯಾರ್ಥಿಗಳು ಸಂಸ್ಥೆಯ ಖ್ಯಾತಿಯನ್ನು ಹೆಚ್ಚಿಸುತ್ತೀರಿ ಹಾಗೂ ಅದನ್ನು ಅತ್ಯುತ್ತಮಗೊಳಿಸುತ್ತೀರಿ.
ಜೀವನದ ಮುಂದಿನ ಹಂತಗಳಲ್ಲಿ ಸಮರ್ಪಿತ ಉದ್ಯೋಗಿಗಳಾಗಿ, ಉದ್ಯಮಿಗಳಾಗಿ ಯಶಸ್ವಿ ಸಂಸ್ಥೆಗಳನ್ನು ನಿರ್ಮಿಸಿ, ಜವಬ್ದಾರಿಯುತ ನಾಗರಿಕರಾಗಿ ರಾಷ್ಟ್ರವನ್ನು ಶಕ್ತಿಯುತವಾಗಿಸುವ ಹೊಣೆ ನಿಮ್ಮೆಲ್ಲರ ಮೇಲಿದೆ ಎಂದರು.ಇಂದು ನಿಮ್ಮ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ ಬಗ್ಗೆ ನೀವು ಹೆಮ್ಮೆ ಪಡಬೇಕು. ಅದೇ ಸಮಯದಲ್ಲಿ ಈ ಸಂಸ್ಥೆಯಲ್ಲಿನ ಸುಂದರವಾದ ವಾತಾವರಣ ಹಾಗೂ ಸ್ನೇಹಿತರನ್ನು ತೊರೆಯುವ ದು:ಖವೂ ಇರುತ್ತದೆ.
ನೀವು ಇಲ್ಲಿ ಗಳಿಸಿದ ಅನುಭವ ಮತ್ತು ಜ್ಞಾನವು ಉತ್ತಮ ಹಾಗೂ ಫಲಪ್ರದವಾದ ನಾಳೆಗೆ ಒಂದು ಭದ್ರ ಬುನಾದಿಯಾಗಿ ಕಾರ್ಯನಿರ್ವಹಿಸುತ್ತದೆ. ನೀವು ಇಲ್ಲಿ ಕಳೆದ ಕ್ಷಣಗಳನ್ನು ಯಾವಾಗಲೂ ಪ್ರೀತಿಸಿ. ಕಲಿಕೆ ಶಾಶ್ವತ ಪ್ರಕ್ರಿಯೆಯಾಗಿರುವುದರಿಂದ ನಿಮ್ಮ ಜೀವನದ ಪ್ರತಿಕ್ಷಣವನ್ನು ಉಪಯೋಗಿಸಿಕೊಂಡು ಹೆಚ್ಚಿನ ಸಾಧನೆ ಮಾಡಿ ಎಂದು ಹೇಳಿದರು.
ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಬಾಲ್ಯದ ದಿನಗಳಿಂದಲೂ ಒಂದು ಕನಸನ್ನು ಹೊಂದಿರಬೇಕು, ಆ ಕನಸನ್ನು ಸಲಹಿರಬೇಕು ಹಾಗೂ ಅದನ್ನು ಪ್ರಬುದ್ಧತೆಯ ಸಮಯದೊಂದಿಗೆ ಪೋಷಿಸಿರಬೇಕು. ನಮ್ಮ ಪ್ರೀತಿಯ ಮಾಜಿ ರಾಷ್ಟ್ರಪತಿಗಳಾದ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕನಸಿನ ಬಗೆಗೆ ಹೇಳಿರುವುದು ಎಲ್ಲರಿಗೂ ನೆನೆಪಿರಬಹುದು.
ಕನಸು ನೀವು ಮಲಗುವಾಗ ನೋಡುವಂತಹದಲ್ಲ, ಅದು ನಿಮಗೆ ನಿದ್ರೆಮಾಡಲು ಬಿಡುವುದಿಲ್ಲ, ಕನಸು, ಕನಸು, ಕನಸು. ಕನಸು ಆಲೋಚನೆಗಳಾಗಿ ರೂಪಾಂತರಗೊಳ್ಳುತ್ತವೆ ಮತ್ತು ಆಲೋಚನೆಗಳು ಕ್ರಿಯೆಗೆ ಕಾರಣವಾಗುತ್ತದೆ ಎಂಬುದು ಅವರ ಸ್ಪೂರ್ಥಿದಾಯಕ ಚಿಂತನೆಯಾಗಿತ್ತು. ನೀವು ಚೈತನ್ಯಪೂರ್ಣ, ಸಮರ್ಪಣಾಭಾವ ಮತ್ತು ಕಠಿಣ ಪರಿಶ್ರಮದಿಂದ ಪೋಷಿಸುವ ಕ್ರಿಯೆಎಂದಿಗೂ ವ್ಯರ್ಥವಾಗುವುದಿಲ್ಲ. ನೀವು ಇಷ್ಟಪಡುವುದನ್ನು ನೀವು ಮಾಡಿದರೆ ಅಥವಾ ನೀವು ಮಾಡುವುದನ್ನು ನೀವು ಪ್ರೀತಿಸಿದರೆ ಎಲ್ಲವೂ ಸಾಧ್ಯ ಎಂದು ಡಾ. ಸುಧೀರ್ ಕಾಮತ್ ಹೇಳಿದರು.
ಇಂಜಿನಿಯರಿಂಗ್ ಮತ್ತು ತಂತ್ರ ಜ್ಞಾನ ಕ್ಷೇತ್ರಗಳು ಯಶಸ್ವಿಯಾಗಲು ನೀವು ಪದವಿ ಅಧ್ಯಯನದ ಸಮಯದಲ್ಲಿ ಪಡೆದ ಮೂಲ ಜ್ಞಾನವು ಕೇವಲ ಆರಂಭಿಕವಾದುದು. ವೈರ್‍ಲೆಸ್ ಮೈಕ್ರೊವೇವ್ ಸಂವಹನದ ಪಿತಾಮಹ ಸರ್ ಜೆ.ಸಿ. ಬೋಸ್ ನಿಮಗೆಲ್ಲರಿಗೂ ಖಂಡಿತವಾಗಿ ತಿಳಿದಿದೆ ಎಂದು ನಂಬಿದ್ದೇನೆ. ಅವರು ಜೈವಿಕ ವಿಜ್ಞಾನದ ಕ್ಷೇತ್ರಕ್ಕೂ ಮೂಲಭೂತ ಕೊಡುಗೆಗಳನ್ನು ನೀಡಿದ್ದಾರೆ. ಅವರ ಜೀವನ ಚರಿತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸೌಲಭ್ಯಗಳು ಇಲ್ಲದಿರುವುದು ಜೀವನದಲ್ಲಿ ಒಂದು ಸಮಸ್ಯೆಯೇ ಅಲ್ಲ.
ನಿಮ್ಮ ಇಚ್ಛಾಶಕ್ತಿ ಬಲವಾಗಿದ್ದಲ್ಲಿ, ಇಡೀ ಜಗತ್ತು ನಿಮ್ಮ ಗುರಿ ಸಾಧನೆಗೆ ಬೆಂಬಲಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.ಸಿದ್ಧಗಂಗಾ ಮಠಾದ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ತಂತ್ರಜ್ಞಾನ ಬೆಳವಣಿಗೆಯಾಗುತ್ತಾ ರಾಷ್ಟ್ರವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದೆ, ವಿದ್ಯಾರ್ಥಿಗಳು ಮುಂದೆ ಉತ್ತಮ ಸಂಶೋಧನೆ ಮಾಡುವ ಮೂಲಕ ಗ್ರಾಮೀಣ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಪದವಿ ಎಂಬುದು ಅವರ ಮುಂದಿನ ಬದುಕಿನ ಯಶಸ್ಸಿಗೆ ಮೈಲಿಗಲ್ಲು. ಈ ಯಶಸ್ಸಿನ ಶಕ್ತಿಯಾಗಿ ಜ್ಞಾನವನ್ನು ಬೆಳೆಸಿಕೊಳ್ಳಬೇಕು, ಛಲ ಬಿಡದೆ ತಮ್ಮ ಗುರಿ ಸಾಧಿಸಿ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ನೆರವಾಗಬೇಕು ಎಂದು ಸ್ವಾಮೀಜಿ ಸಲಹೆ ಮಾಡಿದರು.
ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ, ಎಸ್‍ಐಟಿಯ ನಿರ್ದೇಶಕರಾದ ಡಾ. ಎಂ. ಎನ್. ಚನ್ನಬಸಪ್ಪ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶಿವಕುಮಾರಯ್ಯ, ಎಸ್‍ಐಟಿ ಪ್ರಾಚಾರ್ಯರಾದ ಡಾ. ಕೆ.ಪಿ. ಶಿವಾನಂದ, ಆಡಳಿತ ಮಂಡಳಿ, ಮತ್ತು ಶೈಕ್ಷಣಿಕ ಮಂಡಳಿಯ ಸದಸ್ಯರು, ಡೀನ್ಸ್, ಅಧ್ಯಾಪಕರು ಭಾಗವಹಿಸಿದ್ದರು.