ಗುಬ್ಬಿ
ನೆಲಮೂಲ ಸಂಸ್ಕೃತಿ, ಸಾಹಿತ್ಯ ಮತ್ತು ಗ್ರಾಮೀಣ ಕಲೆಗಳು ಆಧುನಿಕ ವಿದ್ಯುನ್ಮಾಧ್ಯಮಗಳ ಭರಾಟೆಯಲ್ಲಿ ಮರೆಯಾಗುತ್ತಿರುವ ಸಂದರ್ಭದಲ್ಲಿ ನಮ್ಮ ಗ್ರಾಮೀಣ ಜನಪದ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುವಂತೆ ನಿವೃತ್ತ ಪ್ರಾಚಾರ್ಯ ಪ್ರೊ:ಎಂ.ಜಿ.ರಾಮಣ್ಣ ತಿಳಿಸಿದರು.
ತಾಲ್ಲೂಕಿನ ಕಡಬಾ ಹೋಬಳಿ ಮಲ್ಲೇನಹಳ್ಳಿ ಗ್ರಾಮದಲ್ಲಿ ಮೆಳೇಕಲ್ಲಹಳ್ಳಿ ಕುಸುಮ ಕಲಾ ಸಂಘದ ವತಿಯಿಂದ ಏರ್ಪಡಿಸಿದ್ದ ಸುಗ್ಗಿ ರಂಗಸಂಭ್ರಮ -2019 ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವನ ಸರ್ವತೋಮುಖ ಏಳಿಗೆಗೆ ರಂಗಕಲೆ ಅತ್ಯಂತ ಪ್ರೌಢ ಹಾಗೂ ಸಮರ್ಥ ರೀತಿಯಲ್ಲಿ ಜೀವನಾವಶ್ಯ ವಿಚಾರಗಳನ್ನು ಜನತೆಯ ಮನಸ್ಸಿಗೆ ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕಳೆದ ಇಪ್ಪತ್ಮೂರು ವರ್ಷಗಳಿಂದಲೂ ನಿರಂತರವಾಗಿ ನಡೆಸಿಕೊಂಡು ಬಂದಿರುವ ಸುಗಿ ರಂಗ ಸಂಭ್ರಮ ಇಂದಿನ ಯುವ ಪೀಳಿಗೆಗೆ ಹೆಚ್ಚು ಸಹಕಾರಿಯಾಗಿದೆ. ಅಲ್ಲದೆ ಮರೆಯಾಗುತ್ತಿರುವ ನಮ್ಮ ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ ಅವರು, ಮಾನವ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ, ಸಾಧನೆಯ ದಾವಂತ, ಕ್ಷಣಕ್ಷಣವು ಹೊಸ ಆಲೋಚನಗಳ ದಾರಿಯಲ್ಲಿ ಗೊಂದಲಗಳನ್ನು ಸೃಷ್ಟಿಸಿಕೊಂಡ ವ್ಯವಸ್ಥೆಗೆ ರಂಗಭೂಮಿಯ ಅತ್ಯವಶ್ಯಕತೆ ಮತ್ತು ಅನಿವಾರ್ಯವಾಗಿದೆ. ಅದೊಂದು ಸಂಜೀವಿನಿಯಿದ್ದಂತೆ ತನ್ನೆಲ್ಲಾ ನೋವುಗಳನ್ನ ಮರೆಸಿ ಸಜನಾನಾತ್ಮಕ ಜಗತ್ತಿಗೆ ಕೊಂಡೊಯ್ಯುತ್ತಾ ಉತ್ಸಾಹದ ಚಿಲುಮೆಯ ಚಿತ್ತಾರವನ್ನು ನಿರ್ಮಿಸಿ ಸದಾ ಚೈತನ್ಯತೆಯನ್ನು ನೀಡುವ ಗುಣ ಕಲೆಯಲ್ಲಿ ಮಾತ್ರ ಸಾಧ್ಯವೆಂದರು.
ತೊರೆಮಠದ ಶ್ರೀರಾಜಶೇಖರಸ್ವಾಮೀಜಿ ಮಾತನಾಡಿ ಕಲೆ ಮನುಷ್ಯನ ಅಜ್ಞಾನವನ್ನು ಅಳಿಸಿ ಉನ್ನತ ಆದರ್ಶಗಳನ್ನು ನೀಡುವುದರೊಟ್ಟಿಗೆ ಮನುಷ್ಯನ ಸರ್ವತೋಮುಖ ಏಳಿಗೆಗೆ ಸಹಕಾರಿಯಾಗಿದೆ. ಇಂಥಾ ಒಂದು ಮಾಧ್ಯಮವನ್ನು ನಾವು ನೀವೆಲ್ಲರು ಉಳಿಸಿ ಬೆಳೆಸಲು ಶ್ರಮಿಸಬೇಕಾಗಿದೆ ಎಂದರು. ಪಾರಂಪರಿಕವೈದ್ಯ ಸದಾಶಿವಯ್ಯ ಮಾತನ್ನಾಡಿ ಬೋಧನೆಗಿಂತ ಆಚಾರ ಬಹುಮುಖ್ಯ. ಸುಸಂಸ್ಕೃತ ವಿಚಾರಗಳನ್ನ ರಂಗಮಾಧ್ಯಮದ ಮೂಲ ತಿಳಿಸಿದಾಗ ನೋಡುಗರ ಸ್ಮತಿಪಟಲದಲ್ಲಿ ಅಚ್ಚಳಿಯದೆ ನಿಲ್ಲುತ್ತದೆ. ಶ್ರಮರಹಿತ ಬದುಕು ಮಾನವನನ್ನ ರೋಗ ಪೀಡಿತರನ್ನಾಗಿ ಮಾಡುತ್ತದೆ. ರಂಗಭೂಮಿ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಳ್ಳಲು ಉತ್ತಮ ನಿದರ್ಶನವಾಗಿದೆ ಎಂದರು.
ತೋಪಣ್ಣ ಮಾತನಾಡಿ ಹಿಂದಿನ ಮಾನವ ಸಮುದಾಯ ತನಗೆ ಖುಷಿಯಾದಾಗ ಈ ಹಾಡು ಕುಣಿತಗಳು ಒಂದೊಂದು ಕಾಲದಲ್ಲೂ ವಿಭಿನ್ನತೆಯಿಂದ ಸಮಾಜದ ಸರಿತಪ್ಪುಗಳನ್ನ ಗತಚರಿತೆಯನ್ನ ಮರುಸೃಷ್ಟಿಸಿ ಖುಷಿಪಡುವ ಆಯಾಮಗಳಿರುವುದು ರಂಗಭೂಮಿಯಲ್ಲಿ ಮಾತ್ರ ಸಾಧ್ಯವೆಂದರು. ಇದೆ ಸಂದರ್ಭದಲ್ಲಿ ಕುಸುಮ ಕಲಾ ಸಂಘದಿಂದ ಇವ್ರೇನ್ರಪ್ಪ ನಮ್ಮವರು ನಾಟಕ ಹಾಗೂ ನಾಟ್ಯಸರಸ್ವತಿ ಶಾಂತಲ ಕನ್ನಡ ಕಲಾ ಸಂಘ ದವರಿಂದ ವಿಕಟ ವಿಲಾಸ ನಾಟಕಗಳು ಪ್ರೇಕ್ಷಕ ಸಮೂಹವನ್ನು ನಗೆಗಡಲಿನಲ್ಲಿ ತೇಲಿಸುತ್ತಾ ಮಂತ್ರ ಮುದ್ದರನ್ನಾಗಿಸುವಲ್ಲಿ ಯಶಸ್ವಿಯಾದವು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬುಡೆನ್ಸಾಬ್, ಹಿರಿಯ ಕಲಾವಿದರಾದ ಗೋವಿಂದಯ್ಯ, ಶಶಿಕುಮಾರ್, ಕರಿಗೌಡ, ರಂಗಕರ್ಮಿ ರಮೇಶ್ ಮೆಳೇಕಲ್ಲಹಳ್ಳಿ ಮುಂತಾದವರು ಭಾಗವಹಿಸಿದ್ದರು.