ಬಾಗಿಲು ಮುಚ್ಚದೇ ಬಸ್ ಓಡಿಸಿದರೆ ಸೂಕ್ತ ಕ್ರಮ

ದಾವಣಗೆರೆ:

     ಬಾಗಿಲು ಮುಚ್ಚದೇ ಬಸ್ ಚಲಾಯಿಸುವ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ನಗರ ಸಾರಿಗೆಗಳಲ್ಲಿ ಬಸ್‍ಗಳಲ್ಲಿ ಆಟೋಮ್ಯಾಟಿಕ್ ಡೋರ್ ವ್ಯವಸ್ಥೆ ಇದ್ದರೂ ಚಾಲಕರು ಬಾಗಿಲು ಹಾಕದೇ ಹಾಕುತ್ತಿಲ್ಲ. ಆದ್ದರಿಂದ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸೂಕ್ತ ಆದೇಶ ಹೊರಡಿಸಿ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.

ಖಾಸಗಿ ಬಸ್ ವಶಕ್ಕೆ:

      ಡೋರ್ ಹಾಕದ ಖಾಸಗಿ ಬಸ್‍ಗಳನ್ನು ಆರ್‍ಟಿಓ ಅಧಿಕಾರಿಗಳು ವಶಪಡಿಸಿಕೊಂಡು ಸೂಕ್ತ ಕ್ರಮ ಜರುಗಿಸಬೇಕು. ಅಲ್ಲದೇ, ಡೋರ್ ಹಾಕದ ಶಾಲಾ ವಾಹನಗಳ ಅನುಮತಿಯನ್ನು ರದ್ದುಪಡಿಸಬೇಕೆಂದು ಸೂಚಿಸಿದರು.

ಎಇಇ ತಬ್ಬಿಬ್ಬು:

     ಮಹಾನಗರ ಪಾಲಿಕೆ ಎಇಇ ಪೂವಯ್ಯ ಮಾತನಾಡಿ, ಕಳೆದ ಸಭೆಯಲ್ಲಿ ಚರ್ಚಿಸಿದಂತೆ ಪಾಲಿಕೆ ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಬೀದಿ ದೀಪಗಳ ನಿರ್ವಹಣೆಗೆ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

     ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾತನಾಡಿ, ವಾರ್ಡ್‍ವಾರು ರಸ್ತೆ ಗುಂಡಿ(ಟಾರ್ ಪ್ಯಾಚ್) ಮುಚ್ಚುತ್ತಿರುವ ಬಗ್ಗೆ ಮಾಹಿತಿ ನೀಡಿ ಎಂದಾಗ, ಪೂವಯ್ಯ ಉತ್ತರಿಸದೇ ತಬ್ಬಿಬ್ಬಾದರು. ಆಗ ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಹಾಜರಾದರೆ ಅವರಿಗೆ ಮಾಹಿತಿ ತಿಳಿದಿರುತ್ತದೆ. ಅನ್ಯರಿಗೆ ನಿಯೋಜಿಸಿದರೆ ಸಭೆಯ ಉದ್ದೇಶ ಸಫಲವಾಗುವುದಿಲ್ಲ ಎಂದು ಎಸ್ಪಿ ಚೇತನ್ ಬೇಸರ ವ್ಯಕ್ತಪಡಿಸಿದರು.

ಟ್ಯಾಕ್ಸಿ ಸ್ಟ್ಯಾಂಡ್ ಸ್ಥಳಾಂತರಿಸಿ:

     ಯುಬಿಡಿಟಿ ಕಾಲೇಜಿ ಸಹಾಯಕ ರಿಜಿಸ್ಟ್ರಾರ್ ರಂಗನಾಥಸ್ವಾಮಿ ಹೆಚ್ ಆರ್ ಮಾತನಾಡಿ, ಯುಬಿಡಿಟಿ ಕಾಲೇಜಿನ ಎದುರು ಟ್ಯಾಕ್ಸಿ ಸ್ಟ್ಯಾಂಡ್ ಇದೆ. ಇದರಿಂದ ವಿದ್ಯಾರ್ಥಿನಿಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ 2011ರಿಂದಲೇ ಟ್ಯಾಕ್ಸಿ ಸ್ಟ್ಯಾಂಡ್ ಅನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ನಿರಂತರವಾಗಿ ಮನವಿ ಮಾಡುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

      ಈ ವೇಳೆ ಪ್ರತ್ರಿಕ್ರಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್, ಟ್ಯಾಕ್ಸಿ ಸ್ಟ್ಯಾಂಡ್ ಅನ್ನು ಸ್ಥಳಾಂತರಿಸಿದ ನಂತರ ಬೇರೆ ಬೀದಿ ಬದಿ ವ್ಯಾಪಾರಿ ಅಥವಾ ಇನ್ನಿತರೆ ಸ್ಟ್ಯಾಂಡ್ ಆಗದಂತೆ ಭದ್ರತೆ ಮಾಡಿಕೊಳ್ಳುವುದಾದರೆ, ಟ್ಯಾಕ್ಸಿ ಮಾಲೀಕರಿಗೂ ಅನುಕೂಲಕರವಾಗುವ ಪಕ್ಕದ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಭರವಸೆ ನೀಡಿದರು.

ನಿಲುಗಡೆಗೆ ಜಾಗ ಕೊಡಿ:

     ಮೂರು ಮತ್ತು ನಾಲ್ಕು ಚಕ್ರಗಳ ಸರಕು ಸಾಗಣಿಕೆ ವಾಹನಗಳ ನಿಲುಗಡೆಗೆ ನಿಲ್ದಾಣವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಸೂಕ್ತ ಸ್ಥಳದಲ್ಲಿ ನಿಲುಗಡೆಗೆ ಜಾಗವನ್ನು ಗುರುತಿಸಿಕೊಡಬೇಕೆಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಓ ಹೆಚ್.ಬಸವರಾಜೇಂದ್ರ, ನಗರದ ಹೊರ ವಲಯದಲ್ಲಿ ಮೂರು ಮತ್ತು ನಾಲ್ಕು ಚಕ್ರಗಳ ಸರಕು ಸಾಗಣಿಕೆ ವಾಹನಗಳ ನಿಲುಗಡೆಗೆ ಯಾರ್ಡ್ ಮಾಡಿಕೊಂಡು, ಫೋನ್ ಮೂಲಕ ಬಾಡಿಗೆದಾರರನ್ನು ಸಂಪರ್ಕಿಸಬಹುದಲ್ಲದವೇ ಎನ್ನುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಪದ್ಮಾಂಜಲಿ ಟಾಕೀಸ್ ಮುಂಭಾಗದಲ್ಲಿ ನಿಲುಗಡೆಗೆ ಸ್ಥಳ ನೀಡಬಹು ಎಂದು ಸಲಹೆ ನೀಡಿದರು.

ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ:

       ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಫುಲ್ಲಾ ಮಾತನಾಡಿ, ಪಿ.ಬಿ ರಸ್ತೆಯಲ್ಲಿರುವ ಬಿಎಸ್‍ಎನ್‍ಎಲ್ ಬಳಿ ಫ್ಲೈಓವರ್ ಕೂಡ ಆಗಿದ್ದು, ಟ್ರಾಫಿಕ್ ಸಮಸ್ಯೆ ಇನ್ನೂ ಹೆಚ್ಚಾಗಿದೆ. ಸಿಗ್ನಲ್‍ಗಳನ್ನು ಯಾರೂ ಸರಿಯಾಗಿ ಪಾಲಿಸುತ್ತಿಲ್ಲ. ಹೀಗಾಗಿ ಇಲ್ಲಿ ದಿನನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೇ ಇವೆ. ಇಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಬ್ಯಾರಿಕೇಡ್ ಅಥವಾ ಇನ್ನಿತರೆ ರೀತಿಯಲ್ಲಿ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

      ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಮಾತನಾಡಿ, ಹರಿಹರದಿಂದ ದಾವಣಗೆರೆಗೆ ಓಡಾಡುವ ಕೆಎಸ್‍ಆರ್‍ಟಿಸಿ ಬಸ್‍ಗಳು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಸಹೋಗದೇ, ಗಾಂಧಿ ವೃತ್ತದಲ್ಲಿಯೇ ತಿರುಗಿಸಿಕೊಂಡು ಬರುವುದರಿಂದ ಅಲ್ಲಿ ವಾಹನ ಮತ್ತು ಜನದಟ್ಟನೆ ಹೆಚ್ಚುತ್ತದೆ. ಅದನ್ನು ನಿಯಂತ್ರಿಸಲು ಬಸ್ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದವರೆಗೆ ಬಿಡಬೇಕೆಂದು ಸಲಹೆ ನೀಡಿದರು.

     ರಾತ್ರಿ ವೇಳೆಯಲ್ಲಿ ಸಂಚರಿಸುವ ಲಾರಿ ಮತ್ತು ಬಸ್‍ಗಳಲ್ಲಿ ಹೈಭಿಮ್ ಲೈಟ್ ಹಾಕುವುದರಿಂದ, ಎದುರಿನಿಂಬ ಬರುವ ವಾಹನ ಚಾಲಕರ ಕಣ್ಣು ಕುಕ್ಕಿದಂತಾಗಿ ಅಪಘಾತ ಹೆಚ್ಚಾಗುತ್ತಿದೆ. ಆದ್ದರಿಂದ ಹೈಭಿಮ್ ಲೈಟ್ ಬಳಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆರ್‍ಟಿಓ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾತನಾಡಿ, ಕಳೆದ ಸಭೆಯಲ್ಲಿ ಶಾಮನೂರು ರಸ್ತೆಯಲ್ಲಿರುವ ಗುಂಡಿಗೆ ಮಣ್ಣು ಹಾಕಲು ತಿಳಿಸಲಾಗಿತ್ತು. ಹಾಗೂ ಹರಿಹರ-ಹೊನ್ನಾಳಿ ರಸ್ತೆಯಲ್ಲಿ ರಸ್ತೆಗಿಂತ ಅರ್ಧ ಅಡಿ ಟಾರ್ ರಸ್ತೆ ಎತ್ತರ ಇದ್ದು ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳೆರಡೂ ಕೆಳಗೆ ಇಳಿಸಲು ಆಗದೇ ಹೆಚ್ಚಿನ ಅಪಘಾತ ಸಂಭವಿಸುತ್ತಿದೆ. ಆದ್ದರಿಂದ ಪಿಡಬ್ಲ್ಯುಡಿ ಯವರು ಕೂಡಲೇ ಇಲ್ಲಿ ಮಣ್ಣು ಹಾಕಿಸಿ ಸಮತಟ್ಟಾಗಿಸಬೇಕೆಂದರು.

     ಜಿಲ್ಲಾ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಹಿಂದಿನ ಸಮಿತಿ ಸಭೆಯಲ್ಲಿ ಚರ್ಚಿಸಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೇರಿದಂತೆ ಈ ಬಾರಿ ಚರ್ಚಿತವಾಗುವ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap