ಖಾಸಗಿ ಸಹಭಾಗಿತ್ವದಡಿ ಕೆರೆಗಳ ಅಭಿವೃದ್ಧಿಗೆ ಕ್ರಮ: ಸಿ ಎಂ

ಬೆಂಗಳೂರು

   ಬೆಂಗಳೂರು ನಗರದ ಜೀವನಾಡಿಯಾಗಿದ್ದ ಕೆರೆಗಳನ್ನು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

  ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ತಮ್ಮ ನೇತೃತ್ವದಲ್ಲಿ ಬೆಂಗಳೂರು ನಗರ ಮತ್ತು ರಾಜ್ಯದ ಇತರೆ ಕೆರೆಗಳ ಸಂರಕ್ಷಣೆ ಮತ್ತು ಪುನಶ್ಚೇತನ ಕುರಿತ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ.ಬೆಂಗಳೂರಿನ ಕೆಲ ಕೆರೆಗಳನ್ನು ಖಾಸಗಿ ವಲಯದ ಜೊತೆಗೂಡಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಮಾರಗೊಂಡನಹಳ್ಳಿ ಕೆರೆ, ಶಿಕಾರಿಪಾಳ್ಯ ಕೆರೆ, ಯರಂಡಹಳ್ಳಿ ಕೆರೆ. ಕಮ್ಮಸಂದ್ರ ಕೆರೆ. ದೊಡ್ಡತೂಗೂರು ಕೆರೆ ಸೇರಿ ಇತರೆ ಕೆಲ ಕೆರೆಗಳನ್ನು ಖಾಸಗಿ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಲಾಗಿದೆ ಎಂದರು.

   ಹೊಸಕೋಟೆ ನಗರಾಭಿವೃದ್ಧಿ ಪ್ರಾಧಿಕಾರ 7 ಕೆರೆಗಳನ್ನು ಅಭಿವೃದ್ಧಿ ಮಾಡಲು ಮುಂದೆ ಬಂದಿದ್ದು, ಇದಕ್ಕೆ ಒಪ್ಪಿಗೆ ನೀಡಲಾಗಿದೆ. ಸಂಜೀವಿನಿ ಯೋಜನೆಯಲ್ಲಿ ಈಗಾಗಲೇ 651 ಕೆರೆಗಳನ್ನು ರಾಜ್ಯಾದ್ಯಂತ ಅಭಿವೃದ್ಧಿ ಮಾಡಲಾಗಿದೆ ಬಾಕಿ ಇರುವ ಕೆಲಸಗಳ ಪುನಶ್ಚೇತನವನ್ನು ಇಷ್ಟರಲ್ಲೇ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. 

  ಬೆಂಗಳೂರಿನ ಎಲ್ಲಾ ಕೆರೆಗಳಿಗೆ ಚರಂಡಿ ನೀರು ಸೇರುವುದನ್ನು ಕೂಡಲೇ ನಿಲ್ಲಿಸ; ಬೇಕು ಹಾಗೂ ಎಲ್ಲಾ ಕೆರೆಗಳಲ್ಲಿ ನೀರು ಸಂಸ್ಕರಣಾ ಘಟಕ ಅಳವಡಿಸಿ ನೀರನ್ನು ಸಂಸ್ಕರಿಸಿ ಪಾರ್ಕ್ ಮತ್ತು ಇತರೆ ಉದ್ದೇಶಕ್ಕೆ ಉಪಯೋಗಿಸಲು ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಬೆಳ್ಳಂದೂರು ಮತ್ತು ವರ್ತೂರು ಕೆರೆಗಳನ್ನು ಸಹ ಸಮಗ್ರವಾಗಿ ಅಭಿವೃದ್ಧಿಪಡಿಸಬೇಕಿದೆ. ಈ ಕೆರೆಗಳಲ್ಲಿ ಇನ್ನೂ ನೊರೆ ಹಾವಳಿ ನಿಂತಿಲ್ಲ. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು. ಚರಂಡಿ ನೀರು ಹರಿಯುವುದನ್ನು ತಡೆಗಟ್ಟಬೇಕು. ಸಂಸ್ಕರಿಸಿದ ನೀರನ್ನು ಪಕ್ಕದ ತಾಲ್ಲೂಕು ಮತ್ತು ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಶೀಘ್ರ ಯೋಜನೆ ರೂಪಿಸುವಂತೆ ಇಲಾಖೆ ಕಾರ್ಯದರ್ಶಿಗೆ ಯಡಿಯೂರಪ್ಪ ಸೂಚಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ