ಸುಕೋ ಬ್ಯಾಂಕ್‍ಗೆ ಬೆಳ್ಳಿ ಹಬ್ಬದ ಸಂಭ್ರಮ

ಚಳ್ಳಕೆರೆ

    ರಾಜ್ಯದ ನಾನಾ ಭಾಗಗಳಲ್ಲಿ ಕಳೆದ 25 ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ನಿರತರಾಗಿರುವ ಸುಕೋ ಬ್ಯಾಂಕ್ ಈ ವರೆಗೂ ಸುಮಾರು 1125 ಕೋಟಿ ವ್ಯವಹಾರವನ್ನು ನಡೆಸುವ ಮೂಲಕ ಸಹಕಾರಿ ಬ್ಯಾಂಕ್‍ಗಳ ಕ್ಷೇತ್ರದ ನಂ.1 ಬ್ಯಾಂಕಾಗಿ ಕಾರ್ಯನಿರ್ವಹಿ ಸುತ್ತಿದ್ದು, ಬ್ಯಾಂಕ್‍ನ ಪ್ರಗತಿಯಲ್ಲಿ ಸಹಕಾರ ನೀಡುತ್ತಿರುವ ಗ್ರಾಹಕ ಬಂಧುಗಳಿಗೆ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಸುಕೋ ಬ್ಯಾಂಕ್‍ನ ಅಧ್ಯಕ್ಷ ಮೋಹಿತ್ ಮಸ್ಕಿ ತಿಳಿಸಿದರು.

     ಅವರು, ಶನಿವಾರ ಪ್ರವಾಸಿ ಮಂದಿರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ಚಳ್ಳಕೆರೆ ನಗರದಲ್ಲಿ ಪ್ರಾರಂಭವಾದ ಸುಕೋ ಬ್ಯಾಂಕ್ ಮೇ-13ರಿಂದ ನೂತನ ನವೀಕೃತ ಕಟ್ಟಡಕ್ಕೆ ಸ್ಥಳಾಂತರವಾಗಲಿದ್ದು, ಬ್ಯಾಂಕ್‍ನ ಬೆಳ್ಳಿ ಹಬ್ಬದ ಹಿನ್ನೆಲೆಯಲ್ಲಿ ದೂರದರ್ಶನ ಬಾಲಗಾಯಕರ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

      ಬ್ಯಾಂಕ್‍ನ ನೂತನ ನವೀಕೃತ ಶಾಖೆ ಹಾಗೂ ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮೇ-13ರ ಸೋಮವಾರ ಸಂಜೆ 5.30ಕ್ಕೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಜಿಲ್ಲಾ ಛೇಂಬರ್ ಆಫ್ ಕಾರ್ಮಸ್ ಅಧ್ಯಕ್ಷ ಎನ್.ಸತೀಶ್ ಭಾಗವಹಿಸುವರು. ಚಿತ್ರದುರ್ಗ ರಸ್ತೆಯ ನೂತನ ಕಟ್ಟಡದಲ್ಲಿ ಬ್ಯಾಂಕ್‍ನ ಶಾಖೆ ತನ್ನ ಕಾರ್ಯಾರಂಭ ಮಾಡಲಿದೆ.

      ಜಗ ಜೀವನರಾಂ ಭವನದ ಆವರಣದಲ್ಲಿ ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಲಕ್ಷಾಂತರ ಸಂಗೀತಗಾರರ ಮನಸನ್ನು ಸೂರೆಗೊಳ್ಳಿಸಿರುವ ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಜ್ಞಾನೇಶ್ ಬಳ್ಳಾರಿ, ಭೂಮಿಕ ಹೊಸಪೇಟೆ ಹಾಗೂ ಕನ್ನಡ ಕೋಗಿಲೆ ಖ್ಯಾತಿಯ ಕೊಪ್ಪಳದ ಅರ್ಜುನ ಇಟಗಿ ಇವರಿಂದ ಸಂಗೀತ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು.

      ಸಹಕಾರಿ ಕ್ಷೇತ್ರದ ಬ್ಯಾಂಕ್‍ಗಳಲ್ಲಿ ಆಗ್ರಸ್ಥಾನ ಪಡೆದ ಸುಕೋ ಬ್ಯಾಂಕ್ 3 ಮೇ 1994ರಲ್ಲಿ ಸಿಂಧನೂರಿನಲ್ಲಿ ತನ್ನ ಪ್ರಥಮ ಶಾಖೆಯನ್ನು ಪ್ರಾರಂಭಿಸಿ, ಪ್ರಸ್ತುತ ರಾಜ್ಯದಲ್ಲಿ 28 ಶಾಖೆಗಳನ್ನು ಹೊಂದಿದೆ. 6 ನವೆಂಬರ್ 2016ರಲ್ಲಿ ಚಳ್ಳಕೆರೆ ನಗರದಲ್ಲಿ ಪ್ರಾರಂಭವಾದ ಸುಕೋ ಬ್ಯಾಂಕ್ ಈಗಾಗಲೇ 40 ಕೋಟಿ ವ್ಯವಹಾರವನ್ನು ನಡೆಸಿದೆ. ಸಹಕಾರಿ ಕ್ಷೇತ್ರದಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡ ಪ್ರಥಮ ಬ್ಯಾಂಕ್ ಆಗಿ ಸುಕೋ ಬ್ಯಾಂಕ್ ಹೊರಹೊಮ್ಮಿದೆ.

      ಈಗಾಗಲೇ ವಾಣಿಜ್ಯೋದ್ಯಮ, ಕೃಷಿ, ಹೈನುಗಾರಿಕೆ ಮುಂತಾದ ಯೋಜನೆಗಳಲ್ಲಿ ಗ್ರಾಹಕರಿಗೆ ಸಾಲ ನೀಡುವ ಮೂಲಕ ಗ್ರಾಹಕರ ನೆರವಿಗೆ ದಾವಿಸಿದೆ. ಮುಂಬರುವ ದಿನಗಳಲ್ಲಿ ಸುಕೋ ಸೋಲಾರ ಶಕ್ತಿ ಯೋಜನೆಯನ್ನು ಅಳವಡಿಸಲು ಚಿಂತನೆ ನಡೆಸಿದೆ. ರೂಪೇ ಪ್ಲಾಟಿನಂ ಬಳಕೆಯಲ್ಲಿದೆ ಎಂದರು.

      ವ್ಯವಸ್ಥಾಪಕ ನಿರ್ದೇಶಕ ಪರಿಮಳ ಎಸ್.ಅಗ್ನಿಹೋತ್ರಿ ಮಾತನಾಡಿ, ಬ್ಯಾಂಕ್‍ನ ಸಂಸ್ಥಾಪಕ ಅಧ್ಯಕ್ಷರಾದ ಮನೋಹರ ಮಸ್ಕಿಯವರ ಮಾರ್ಗದರ್ಶನದಲ್ಲಿ ಬ್ಯಾಂಕ್ ಮುನ್ನಡೆ ಸಾಧಿಸುತ್ತಿದ್ದು, ಹಲವಾರು ಹೊಸ ಹೊಸ ಕ್ಷೇತ್ರಗಳಲ್ಲೂ ಸಹ ತನ್ನ ವ್ಯವಹಾರವನ್ನು ಮುಂದುವರೆ ಸಿದೆ . ಶೀಘ್ರದಲ್ಲೇ ಜೀವ ವಿಮಾ ವ್ಯವಹಾರವನ್ನು ಸಹ ನಮ್ಮ ಶಾಖೆ ಮೂಲಕವೇ ನಡೆಸಲಾಗುವುದು. ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ ಸಹ ನಮ್ಮಲ್ಲಿದ್ದು, ಗ್ರಾಹಕರ ಉತ್ತಮ ಸೇವೆಯೇ ನಮ್ಮ ಏಕೈಕ ಧೇಯವೆಂದರು.

      ಪತ್ರಿಕಾಗೋಷ್ಠಿಯಲ್ಲಿ ಮಾತೃಶ್ರೀ ಎನ್.ಮಂಜುನಾಥ, ಸಾವಯವ ಕೃಷಿ ನಿರ್ದೇಶಕ ರಾಮದಾಸ್, ನಿವೃತ್ತ ಬೆಸ್ಕಾಂ ಅಧಿಕಾರಿ ಪಿ.ರುದ್ರಮೂರ್ತಿ ಮುಂತಾದವರು ಉಪಸ್ಥಿತರಿದ್ದರು. ನೂತನ ಬ್ಯಾಂಕ್‍ನ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಪೂಜೆ ಮತ್ತು ಹೋಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಖ್ಯಾತ ಪುರೋಹಿತ ಪ್ರದೀಪ್ ಶರ್ಮ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link