ಕೈಮಗ್ಗ ಮಹಾಮಂಡಳದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ

 ಚಳ್ಳಕೆರೆ

         ರಾಜ್ಯದ ಉಣ್ಣೆ ಕೈಮಗ್ಗ ಮಹಾಮಂಡಳದ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯವಿರುವ ಹೆಚ್ಚಿನ ಅನುದಾನವನ್ನು ಸರ್ಕಾರಿ ಮಟ್ಟದಲ್ಲಿ ಪಡೆದು ಮಹಾಮಂಡಳದ ಅಭಿವೃದ್ಧಿಗೆ ಹೆಚ್ಚಿನ ಶ್ರಮವನ್ನು ವಹಿಸಲಾಗುವುದು ಎಂದು ಮಹಾಮಂಡಳದ ನೂತನ ಅಧ್ಯಕ್ಷ ಗೊರ್ಲತ್ತು ಎನ್.ಜಯರಾಂ ತಿಳಿಸಿದ್ಧಾರೆ.

          ಮಹಾಮಂಡಳದ ಅಧ್ಯಕ್ಷರಾಗಿ ಆಯ್ಕೆಯಾಗಿ ನಿರ್ಗಮನ ಅಧ್ಯಕ್ಷ ಸೂರನಹಳ್ಳಿ ಜಗದೀಶ್‍ರವರಿಂದ ಅಧಿಕಾರ ಸ್ವೀಕರಿಸಿ, ನಿರ್ದೇಶಕರನ್ನು ಉದ್ದೇಶಿಸಿ ತಮ್ಮ ಮೊಟ್ಟ ಮೊದಲ ಸಭೆಯನ್ನು ನಡೆದಿ ಅವರು, ಕಳೆದ ಅವಧಿಯಲ್ಲಿ ಸರ್ಕಾರದ ವತಿಯಿಂದ ನಿರ್ಗಮನ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ, ಮಾಜಿ ಜಿಲ್ಲಾ ಉಸ್ತುವಾರಿ ಎಚ್.ಆಂಜನೇಯ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ ಹಾಗೂ ಪ್ರಸ್ತುತ ಶಾಸಕ ಟಿ.ರಘುಮೂರ್ತಿಯವರ ಸಹಕಾರದಿಂದ ನಿರೀಕ್ಷೆಗೂ ಮೀರಿ ಹೆಚ್ಚಿನ ಅನುದಾನವನ್ನು ಪಡೆಯಲಾಗಿದೆ.

          ಪ್ರಸ್ತುತ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಇರುವ ಉಣ್ಣೆ ಕೈಮಗ್ಗ ಮಾರುಕಟ್ಟೆ ಉತ್ತಮ ಲಾಭದತ್ತ ನಡೆದಿದ್ದು, ಪ್ರತಿ ಭಾನುವಾರ ನಡೆಯುವ ಸಂತೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕಂಬಳಿ ಖರೀದಿದಾರರು ಆಗಮಿಸಿ ಕಂಬಳಿಯನ್ನು ಖರೀದಿಸುತ್ತಿದ್ದಾರೆ. ಕಂಬಳಿ ನೇಕಾರರಿಗೆ ಸಹ ಮಹಾಮಂಡಳ ವತಿಯಿಂದ ನೂಲು ಹಾಗೂ ಇನ್ನಿತರೆ ಕಚ್ಚಾವಸ್ತುಗಳನ್ನು ಸಹ ರಿಯಾಯ್ತಿ ದರದಲ್ಲಿ ಒದಗಿಸಲಾಗುತ್ತಿದೆ.

            ಜಿಲ್ಲೆಯಲ್ಲಿ ನಿರಂತರ ಬರಗಾಲದ ಹಿನ್ನೆಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ನೀರಸವಾಗಿದ್ದು, ಇಲ್ಲಿನ ನೇಕಾರರಿಗೆ ಉಣ್ಣೆ ಕಂಬಳಿ ತಯಾರಿಕೆಗೆ ಹೆಚ್ಚು ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿವಿಧೆಡೆ ಸಮೀಕ್ಷೆಯನ್ನು ಸಹ ನಡೆಸಲಾಗಿದೆ. ಉಣ್ಣೆ ಕೈಮಗ್ಗ ನೇಕಾರರ ಮಹಾಮಂಡಳಿ ಒಟ್ಟು 42 ವಿವಿಧ ಸಹಕಾರ ಸಂಘಗಳನ್ನು ಹೊಂದಿದ್ದು, 22ಕ್ಕೂ ಹೆಚ್ಚು ಸಹಕಾರಿ ಸಂಘಗಳು ಈಗಾಗಲೇ ಮಹಾಮಂಡಳ ವ್ಯಾಪ್ತಿಯಲ್ಲಿ ನೊಂದಾಣೆ ಮಾಡಿಕೊಂಡಿವೆ.

           10 ಸಹಕಾರಿ ಸಂಘಗಳು ಬೇರೆ ಮಂಡಳದಡಿ ಕಾರ್ಯನಿರ್ವಹಿಸುತ್ತಿದ್ದು, ಬಾಕಿ ಉಳಿದಿರುವ ಇನ್ನೂ 10 ಸಹಕಾರಿ ಸಂಘಗಳನ್ನು ಶೀಘ್ರದಲ್ಲೇ ನಮ್ಮ ಮಹಾಮಂಡಳ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯದರ್ಶಿ ಎಂ.ಪಾತಲಿಂಗಪ್ಪನವರಿಗೆ ಸೂಚನೆ ನೀಡಿದ್ದು, ಸಹಕಾರಿ ಸಂಘಗಳ ಅಧ್ಯಕ್ಷರಿಗೆ ಕೂಡಲೇ ಪತ್ರ ಬರೆಯಲು ಸೂಚನೆ ನೀಡಲಾಗಿದೆ ಎಂದರು.

          ಚಳ್ಳಕೆರೆ ನಗರ ರಾಜ್ಯದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ ಪ್ರದೇಶವಾಗಿದ್ದು, ಕಳೆದ ಹಲವಾರು ದಶಕಗಳಿಂದ ಉಣ್ಣೆ ಕಂಬಳಿ ವ್ಯಾಪಾರದಲ್ಲಿ ನಿರತರಾಗಿರುವ ಸಾವಿರಾರು ವ್ಯಾಪಾರಸ್ಥರು ಹಾಗೂ ಖರೀದಿದಾರರಿಗೆ ಇಲ್ಲಿನ ಮಾರುಕಟ್ಟೆಯಲ್ಲೇ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸಲಾಗುವುದು. ಸಂಘದ ಎಲ್ಲಾ ನಿರ್ದೇಶಕರು ಮಹಾ ಮಂಡಳದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಂಪೂರ್ಣ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದ್ಧಾರೆ.

            ಗ್ರಾಮೀಣ ಪ್ರದೇಶದ ಕಂಬಳಿ ನೇಕಾರರಿಗೂ ಸಹ ಮಹಾಮಂಡಳ ವ್ಯಾಪ್ತಿಯಲ್ಲಿ ದೊರೆಯುವ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಮಹಾಮಂಡಳದ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮನವಿ ನೀಡಲಾಗುವುದು ಎಂದಿದ್ಧಾರೆ.

           ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಿಂಧನೂರಿನ ಶರಣಪ್ಪ ಬಿ.ಬರಸಿ ಮಾತನಾಡಿ, ನನಗೆ ಇದೇ ಮೊದಲ ಬಾರಿ ಉಪಾಧ್ಯಕ್ಷ ಸ್ಥಾನ ದೊರಕಿದ್ದು, ಸಂತಸ ತಂದಿದೆ. ಕಳೆದ ಅವಧಿಯಲ್ಲೂ ಸಹ ಉಪಾಧ್ಯಕ್ಷ ಸ್ಥಾನ ಬಳ್ಳಾರಿ ಜಿಲ್ಲೆಗೆ ದೊರಕಿದ್ದು, ಈ ಬಾರಿ ಮುಂದುವರೆದಿದೆ. ಈಗಾಗಲೇ ರಾಜ್ಯದ ವಿವಿಧ ಉಣ್ಣೆ ಕೈಮಗ್ಗ ಸಹಕಾರಿ ಸಂಘಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಮತ್ತಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಂದಿನ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದಿದ್ಧಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap