ಸ್ವಚ್ಛ-ಪಾರದರ್ಶಕ ಆಡಳಿತಕ್ಕಾಗಿ ಬಿಜೆಪಿ ಬೆಂಬಲಿಸಿ

ದಾವಣಗೆರೆ:

   ಸ್ವಚ್ಛ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿಯನ್ನು ಬೆಂಬಲಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‍ಜೀ ಕರೆ ನೀಡಿದರು.

    ನಗರದ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಗುರುವಾರ ಸಂಜೆ ಮಂಥನ, ದಾವಣಗೆರೆ ವತಿಯಿಂದ ಏರ್ಪಡಿಸಿದ್ದ ಸಮರ್ಥ-ಸದೃಢ-ಸ್ವಾಭಿಮಾನಿ ಭಾರತಕ್ಕಾಗಿ ಮೋದಿ ಮತ್ತೊಮ್ಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಆರೋಪ ಇಲ್ಲದಂತೆ, 20 ಲಕ್ಷ ಕೋಟಿ ಮೊತ್ತದ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ, ಯಾವುದರಲ್ಲೂ ಪರ್ಸೆಂಟೇಜ್ ವ್ಯವಹಾರವಾಗಿಲ್ಲ. ಅಷ್ಟೊಂದು ಸ್ವಚ್ಛ, ಪಾರದರ್ಶಕ ಆಡಳಿತವನ್ನು ಮೋದಿ ನೀಡಿದ್ದಾರೆ ಎಂದು ಹೇಳಿದರು.

    ಮೇಲ್ಮಟ್ಟದಲ್ಲಿ ಸುಧಾರಣೆಯಾಗಿರುವ ಪಾರದರ್ಶಕ ಅಡಳಿತ ಕೆಳಮಟ್ಟದ ಆರ್‍ಟಿಓ ಕಚೇರಿ, ಗ್ರಾಮ ಪಂಚಾಯಿತಿ, ಪೊಲೀಸ್ ಠಾಣೆಗಳಲ್ಲೂ ಬರುವಂತಾಗಲು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತರಬೇಕೆಂದು ಕಿವಿಮಾತು ಹೇಳಿದರು.

      ಕಳೆದ ಅವಧಿಯಲ್ಲಿ ನಾವೇನೂ ರಾಮರಾಜ್ಯ ತಂದಿಲ್ಲದಿರಬಹುದು. ಆದರೆ, ರಾವಣ ರಾಜ್ಯದ ಉಪಟಳವಂತೂ ನಿಯಂತ್ರಣಕ್ಕೆ ತಂದಿದ್ದೇವೆ. ಇನ್ನೂ ಸಾಧಿಸಬೇಕಾದ್ದು ಬಹಳಷ್ಟಿದೆ. ದಶಕಗಳ ನಂತರ ಬೆಲೆ ಏರಿಕೆ, ಭ್ರಷ್ಟಾಚಾರ ವಿಷಯಗಳು ಚರ್ಚೆಗೆ ಬರದೆ ಚುನಾವಣೆ ನಡೆಯುತ್ತಿರುವುದೇ ಮೋದಿ ಸರ್ಕಾರದ ಹೆಗ್ಗಳಿಕೆಯಾಗಿದೆ ಎಂದರು.

      ಕೆಲ ವಿರೋಧ ಪಕ್ಷಗಳು, ಎನ್‍ಜಿಓಗಳು, ವಿದೇಶಿ ಶಕ್ತಿಗಳು ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರದ ಹುಯಿಲೆಬ್ಬಿಸುತ್ತಿವೆ. ಆದರೆ ರಾಹುಲ್ ಗಾಂಧಿ ಎಷ್ಟೇ ಬೊಬ್ಬೆ ಹೊಡೆದರೂ ಆರೋಪ ಸಾಬೀತುಪಡಿಸುವ ಒಂದಂಶದ ಸಾಕ್ಷಿಯೂ ಸಿಕ್ಕಿಲ್ಲ. ತನಿಖಾ ಸಂಸ್ಥೆಗಳೇ ಮೋದಿ ಸರ್ಕಾರಕ್ಕೆ ಕ್ಲೀನ್‍ಚಿಟ್ ನೀಡಿವೆ ಎಂದು ಹೇಳಿದರು.

     ನರೇಂದ್ರ ಮೋದಿಯವರ ಆಡಳಿತದಲ್ಲಿ ದೇಶ ಸ್ವಚ್ಛವಾಗುವ ಜೊತೆಗೆ ಜನರ ಮನಃಸ್ಥಿತಿಯೂ ಬದಲಾಗಿದೆ. ಮೋದಿ ಕರೆಯ ಮೇರೆಗೆ 1.7 ಕೋಟಿ ಜನರು ಗ್ಯಾಸ್ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. ಪ್ರತಿ ವಾರ ಜನರು ತಮ್ಮದೇ ಕೆಲಸವೆಂಬಂತೆ ಸ್ವಯಂಪ್ರೇರಿತರಾಗಿ ಸ್ವಚ್ಛತೆ ಕಡೆಗೆ ಗಮನ ಹರಿಸಿದ್ದಾರೆ. ಸಮಾಜಕ್ಕೆ ಪ್ರೇರಣೆ ಕೊಡುವ ಇಂತಹ ಪ್ರಧಾನಿ ದೇಶಕ್ಕೆ ಸಿಕ್ಕು ಬಹಳ ವರ್ಷವಾಗಿತ್ತು. ಐದು ವರ್ಷದ ಮುಂಚೆ ದೇಶದಲ್ಲಿ ನಿರಾಶೆ ವಾತಾವರಣವಿತ್ತು. ನಿರ್ಣಯ ಕೈಗೊಳ್ಳುವ ಶಕ್ತಿ, ಸ್ವಾತಂತ್ರ್ಯವಿಲ್ಲದ ಪ್ರಧಾನಿ 10 ವರ್ಷ ಆಳಿದ್ದರಿಂದಾಗಿ ದೇಶವು ಯಜಮಾನನಿಲ್ಲದ ಮನೆಯಂತಿತ್ತು.

      ಅಲ್ಲದೇ, ಎಲ್ಲೆಂದರಲ್ಲಿ ಯಾವಾಗ ಬೇಕೋ ಅವಾಗ ಜಿಹಾದಿ ಭಯೋತ್ಪಾದಕರು, ಮಾವೋವಾದಿ ನಕ್ಸಲರು ಅಟ್ಟಹಾಸ ಮೆರೆಯುತ್ತಿದ್ದರಿಂದ ಜನರು ಅಭಧ್ರತೆ ಭಾವನೆಯಲ್ಲಿದ್ದರು. ನಮ್ಮ ಸರ್ಕಾರ ಜನರಿಗೆ ಭದ್ರತೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವೈದ್ಯ ಡಾ.ರವೀಂದ್ರನಾಥ್ ಆಶಯ ನುಡಿಗಳನ್ನಾಡಿದರು. ಸಂಘ ಪರಿವಾರದ ಮುಖಂಡರು, ನಾಗರೀಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap