ತುರುವೇಕೆರೆ
ಜಿಲ್ಲೆಯ ರೈತರ ಜೀವನಾಡಿಯಾದ ಕೊಬ್ಬರಿಯ ಬೆಲೆ ಪಾತಾಳಕ್ಕಿಳಿದಿದ್ದು ಕೂಡಲೆ ಸರ್ಕಾರ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡದಿದ್ದಲ್ಲಿ ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪಾದಯಾತ್ರೆಯೊಂದಿಗೆ ಧರಣಿ ನಡೆಸಲಾಗುವುದು ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ರೈತರ ಪ್ರಮುಖ ಬೆಳೆಯಾದ ಕೊಬ್ಬರಿ ರೂ. 9000 ಕ್ಕೆ ಇಳಿಕೆಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೆ ಸರ್ಕಾರ ಗಮನ ಹರಿಸಿ ಹತ್ತು ದಿನಗಳೊಳಗಾಗಿ 15,000 ರೂ. ಬೆಂಬಲ ಬೆಲೆ ನೀಡಬೇಕು.
ಇಲ್ಲವೆ ನ್ಯಾಫೆಡ್ ಕೇಂದ್ರವನ್ನು ಶೀಘ್ರವೆ ಸರ್ಕಾರ ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರದ ವೈಫಲ್ಯದ ವಿರುದ್ದ ತಾಲ್ಲೂಕಿನ ರೈತರು ಹಾಗೂ ಜೆಡಿಎಸ್‍ನ ಸಾವಿರಾರು ಕಾರ್ಯಕರ್ತರೊಡಗೂಡಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ತೆರಳಿ, ಧರಣಿ ಕೂರಲಾಗುವುದು ಎಂದು ಎಚ್ಚರಿಸಿದರು.
ಬಡ ಕಾರ್ಮಿಕರಿಗೆ ಕೆಲಸ ನೀಡುವ ಉದ್ದೇಶದಿಂದ ಎನ್‍ಆರ್‍ಇಜಿ ಯೋಜನೆ ಜಾರಿಯಿದೆ. ಇದರ ಕಾಮಗಾರಿಗಳನ್ನು ಹಾಲಿ ಶಾಸಕರು ತನ್ನ ಹಿಂಬಾಲಕರಿಗೆ ನೀಡುತ್ತಿದ್ದು, ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಎನ್‍ಆರ್‍ಇಜಿ ಗೆ ಯಾವುದೇ ಚೀಟಿ ಕೊಟ್ಟರೂ ಅಧಿಕಾರಿಗಳು ಪರಿಗಣಿಸದ ಕಾರಣ ಜೂನ್ 8 ರ ನಂತರ ಜಿಪಂ ಕಚೇರಿ ಮುಂದೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪ್ರತಿಭಟಿಸುವುದು ಅನಿವಾರ್ಯವಾಗಿದೆ ಎಂದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ 1600 ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗಿದ್ದು, ಅಂತಹ ಫಲಾನುಭವಿಗಳು ತಾವು ನಿರ್ಮಾಣ ಮಾಡಿಕೊಂಡ ಮನೆಗಳಿಗೆ 4 ವರ್ಷವಾದರೂ ಹಣ ಸಂದಾಯವಾಗಿಲ್ಲ. ಬಿಜೆಪಿ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ. ಹಾಲಿ ಶಾಸಕರು ರಾಜ್ಯ ಹಾಗೂ ಕೇಂದ್ರದಲ್ಲಿ ಅವರದೆ ಸರ್ಕಾರವಿದ್ದರೂ ಸಹ ಇದುವರೆವಿಗೂ ಒಂದು ಮನೆಯನ್ನೂ ತರಲು ಸಾಧ್ಯವಾಗಿಲ್ಲ ಹಾಗೂ ನನ್ನ ಬೆಂಬಲಿಗರಿಗೆ ವಿನಾ ಕಾರಣ ತೊಂದರೆ ನೀಡುವ ಪ್ರವೃತ್ತಿ ನಿಲ್ಲಿಸಬೇಕು. ಹೀಗೆಯೇ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರೊಡಗೂಡಿ ತಾಲ್ಲೂಕು ಪಂಚಾಯಿತಿ ಸರ್ಕಾರಿ ಕಚೇರಿ ಮುಂದೆ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಕೊಳಾಲ ಗಂಗಾಧರ್, ತಾ.ಯುವ ಜನತಾದÀಳ ಅಧ್ಯಕ್ಷ ಬಾಣಸಂದ್ರ ರಮೇಶ್, ಜೆಡಿಎಸ್ ಮುಖಂಡರಾದ ವೆಂಕಟೇಶ್ ಮೂರ್ತಿ, ವೆಂಕಟಾಪುರ ಯೋಗೀಶ್, ಬಸವರಾಜು, ಅಫ್ಜಲ್, ರಾಘು ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
