ಚಿಕ್ಕನಾಯಕನಹಳ್ಳಿ
ಬಿಸಿಲ ಬೇಗೆಯಿಂದ ಬಾಯಾರಿದ ಜನರ ನೀರಿನ ದಾಹ ನೀಗಿಸಲು ತಿಪಟೂರು-ಚಿ.ನಾ.ಹಳ್ಳಿ ಗಡಿ ಭಾಗದಲ್ಲಿ ಗ್ರಾಮಸ್ಥರು ಅರವಂಟಿಕೆ ಕೇಂದ್ರ ಆರಂಭಿಸಿದ್ದಾರೆ. ಅರವಂಟಿಕೆಯಲ್ಲಿ ನೀರನ್ನು ಶೇಖರಿಸಿ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿ ಅವರ ಮೆಚ್ಚುಗೆ ಗಳಿಸಿದ್ದಾರೆ.
ಅರವಂಟಿಕೆ ಕೇಂದ್ರದಲ್ಲಿ ತುಮಕೂರಿನ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿಯವರ ಭಾವಚಿತ್ರವನ್ನು ಬರೆದು ಅವರು ಮಠದಲ್ಲಿ ನೆರವೇರಿಸುತ್ತಿದ್ದ ಸಾಮಾಜಿಕ ಸೇವೆಯಂತೆ ಈ ಭಾಗದ ಗ್ರಾಮಸ್ಥರು ಪ್ರಯಾಣಿಕರಿಗೆ ನೆರವಾಗಲು ನೀರಿನ ಆಸರೆ ನೀಡಿದ್ದಾರೆ. ಅರವಂಟಿಕೆ ಕೇಂದ್ರ ಆರಂಭಿಸಿರುವ ಸ್ಥಳದಿಂದ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸಂಪರ್ಕಿಸುವ ರಸ್ತೆಯಿದೆ. ಇಲ್ಲಿಂದ ಬೇರೆ ಗ್ರಾಮಗಳಿಗೆ ಅಥವಾ ತಾಲ್ಲೂಕಿಗೆ ಸೇರಬೇಕೆಂದರೆ ಸಾಕಷ್ಟು ಸಮಯ ಬೇಕಾಗುತ್ತದೆ.
ಈ ವೇಳೆ ನೀರಿಗಾಗಿ ಹಾತೊರೆಯುವ ಜನರಿಗೆ ಅರವಂಟಿಕೆ ಕೇಂದ್ರ ಸಹಾಯವಾಗಿದೆ. ಬೇಸಿಗೆ ಕಾಲದಲ್ಲಿ ದೂರದೂರುಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ನೀರಿನ ಆಸರೆ ನೀಡುತ್ತಿರುವ ಗ್ರಾಮಸ್ಥರ ಈ ಕಾರ್ಯಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.
ಇದೇ ರೀತಿ ಮದಲಿಂಗನಕಣಿವೆ ಬಳಿ ಪಟ್ಟಣದ ಯುವಕರು ಸಂಘಟನೆಯಾಗಿ ಪ್ರಾಣಿ-ಪಕ್ಷಿಗಳಿಗೆ ನೀರಿನ ಅನುಕೂಲವಾಗಲೆಂದು ನೀರಿನ ತೊಟ್ಟಿಯೊಂದನ್ನು ಕಟ್ಟಿ ಅದರಲ್ಲಿ ನೀರಿನ ಶೇಖರಣೆ ಮಾಡಿದ್ದಾರೆ. ಇದರಿಂದ ಗುಡ್ಡಗಾಡು ಪ್ರದೇಶದಿಂದ ಬರುವ ವನ್ಯಜೀವಿಗಳಿಗೆ ನೀರಿನ ಅನುಕೂಲವಾಗಲಿದೆ. ಬೇಸಿಗೆ ಅವಧಿಯಲ್ಲಿ ಸಾಮಾನ್ಯವಾಗಿ ನೀರಿನ ಸಮಸ್ಯೆ ಎದುರಾಗುತ್ತದೆ. ಇತ್ತೀಚೆಗೆ ಮಳೆ ಕೊರತೆಯಿಂದಾಗಿ ಅರಣ್ಯ ಪ್ರದೇಶದಲ್ಲೂ ನೀರಿನ ತಾಣಗಳಿಲ್ಲ, ಕೆರೆ-ಕಟ್ಟೆಗಳಲ್ಲೂ ನೀರು ಬತ್ತಿ ಹೋಗಿವೆ. ಹೀಗಾಗಿ ಕಾಡುಪ್ರಾಣಿಗಳು ನೀರಿಗಾಗಿ ನಾಡಿಗೆ ವಲಸೆ ಬರುವುದು ಹೆಚ್ಚಾಗುತ್ತದೆ. ಹಾಗಾಗಿ ಅಲ್ಲಲ್ಲಿ ಇಂತಹ ನೀರಿನ ಅರವಂಟಿಕೆಗಳನ್ನು ನಿರ್ಮಿಸಿದರೆ ನಶಿಸಿ ಹೋಗುತ್ತಿರುವ ಪ್ರಾಣಿ-ಪಕ್ಷಿ ಸಂಕುಲಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಜನ-ಜಾನುವಾರುಗಳಿಗೂ ಇಂತಹ ಕೇಂದ್ರಗಳು ಸಹಾಯವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
