ಸಣ್ಣ ಪತ್ರಿಕೆಗಳಿಗೆ ಅಸ್ತಿತ್ವ ಉಳಿಸಿಕೊಳ್ಳುವುದೇ ಸವಾಲು..!

ಚಿತ್ರದುರ್ಗ:

   ಸ್ಪರ್ಧಾತ್ಮಕ ಜಗತ್ತಿನಲ್ಲಿ ಏರಿಳಿತ ದಿಢೀರ್ ಬೆಳವಣಿಗೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಪತ್ರಿಕೆಗಳನ್ನು ನಡೆಸುವುದು ಸವಾಲಿನ ಕೆಲಸ ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಹೇಳಿದರು.

    ಕರ್ನಾಟಕ ರಾಜ್ಯ ಎಸ್ಪಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದಿಂದ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಭಾನುವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಅನೇಕ ವಿಧವಾದ ಸವಾಲುಗಳಿರುವುದರಿಂದ ಪತ್ರಿಕೆ ನಡೆಸುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಪತ್ರಿಕೆಗಳನ್ನು ನಡೆಸಬೇಕೆಂದರೆ ಪ್ರಯಾಸ ಪಡಬೇಕು. ದೊಡ್ಡ ದೊಡ್ಡ ಪತ್ರಿಕೆಗಳು ಸ್ಪರ್ಧೆ ಒಡ್ಡುತ್ತಿರುವುದರಿಂದ ಸಣ್ಣ ಪತ್ರಿಕೆಗಳು ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಸವಾಲು ಸಿದ್ದಾಂತಗಳ ಮೇಲೆ ಪತ್ರಿಕೆಗಳು ಓದುಗರನ್ನು ಮುಟ್ಟುವ ಪ್ರಯತ್ನ ಮಾಡಬೇಕು. ಸೈದ್ದಾಂತಿಕ ನಿಲುವಿನ ಮೇಲೆ ನಡೆಸುವುದು ಇನ್ನು ಕಠಿಣ. ರಾಜಿ ಮಾಡಿಕೊಳ್ಳುವವರು ಸುಲಭವಾಗಿ ಪತ್ರಿಕೆಗಳನ್ನು ನಡೆಸುತ್ತಾ ಆರಾಮವಾಗಿರಬಹುದು. ಸೈದ್ದಾಂತಿಕ ನಿಲುವಿರುವ ಪತ್ರಕರ್ತರು ಎಂತಹ ಸನ್ನಿವೇಶ ಎದುರಾದರೂ ರಾಜಿ ಮಾಡಿಕೊಳ್ಳಬಾರದು ಎಂದು ಕರೆ ನೀಡಿದರು.

    ಬುದ್ದ, ಬಸವ, ಅಂಬೇಡ್ಕರ್ ಇವರು ಸಮಾಜ ಸುಧಾರಣೆಗಾಗಿ ಬದುಕನ್ನು ಮುಡುಪಾಗಿಟ್ಟವರು. ಈ ಮೂವರ ವಿಚಾರಗಳನ್ನು ಯಾರು ಓದುತ್ತಾರೋ ಅವರು ಬದ್ದತೆಗೆ ಒಳಗಾಗುತ್ತಾರೆ. ಬದ್ದತೆ, ಪ್ರಬುದ್ದತೆ ಜೊತೆ ಸಾಗುವುದು ಒಂದು ಸವಾಲು. ಆದರ್ಶ, ವಿಚಾರ, ಮೌಲ್ಯಗಳನ್ನಿಟ್ಟುಕೊಂಡು ಪತ್ರಿಕೆಗಳನ್ನು ನಡೆಸಬೇಕು. ಸಂಪಾದಕರು, ಪತ್ರಕರ್ತರು ರಾಜಿ ಮಾಡಿಕೊಂಡರೆ ಪತ್ರಿಕಾರಂಗಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಸಾಮಥ್ರ್ಯ ಸಾಧಿಸಬೇಕಿದೆ. ಬುದ್ದ, ಬಸವ, ಅಂಬೇಡ್ಕರ್ ವಿಚಾರಗಳನ್ನಿಟ್ಟುಕೊಂಡು ಇದೇ 13 ರಂದು ಬೆಂಗಳೂರಿನಲ್ಲಿ ಮಹಾಬೆರಗು ಪುಸ್ತಕ ಬಿಡುಗಡೆಗೊಳಿಸುವ ಮೂಲಕ ನಾಟಕ ಪ್ರದರ್ಶಿಸಲಾಗುವುದೆಂದರು.

    ಮಾಜಿ ಸಚಿವ ದಿವಂಗತ ಬಿ.ರಾಚಯ್ಯನವರ ಸ್ಮರಣಾರ್ಥ ಕೊಡಮಾಡುವ ರಾಜ್ಯ ಮಟ್ಟದ ವಾರ್ಷಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ, ವೈಚಾರಿಕ ಚಿಂತಕ ಡಿ.ಉಮಾಪತಿ ಕೂಲಿಗಾಗಿ ಪತ್ರಕರ್ತನಾಗಿ ಕೆಲಸ ಮಾಡುತ್ತಿರುವ ನನ್ನನ್ನು ಕರೆಸಿ ಇಲ್ಲಿ ಸನ್ಮಾನ ಮಾಡಿರುವುದನ್ನು ಅತ್ಯಂತ ಖುಷಿಯಿಂದ ಸ್ವೀಕರಿಸಿದ್ದೇನೆ. ನಾನು ವರದಿಗಾರಿಕೆಯನ್ನು ಆರಂಭಿಸಿದಾಗ ಬಿ.ರಾಚಯ್ಯ ರಾಮಕೃಷ್ಣ ಹೆಗಡೆರವರ ಮಂತ್ರಿ ಮಂಡಲದಲ್ಲಿ ಗೃಹ ಸಚಿವರಾಗಿದ್ದರು. ಸರಳ, ಸಜ್ಜನರ ಹೆಸರಿನಲ್ಲಿ ಪ್ರಶಸ್ತಿ ತೆಗೆದುಕೊಳ್ಳುತ್ತಿರುವುದು ಸಂತೋಷವಾಗಿದೆ ಎಂದು ನುಡಿದರು.

    ಬುದ್ದ, ಬಸವ, ಅಂಬೇಡ್ಕರ್‍ರವರ ವಿಚಾರಗಳು ಬರೀ ವೇದಿಕೆ, ಭಾಷಣಗಳಿಗೆ ಸೀಮಿತವಾಗಿದೆ. ಜೀವನದಲ್ಲಿ ಅಳವಡಿಸಿಕೊಳ್ಳುವವರು ತುಂಬಾ ವಿರಳ. ಸಮ ಸಮಾಜದ ಆಶಯಗಳಿಗೆ ಪ್ರಾಣ ತೆತ್ತವರ ವಿಚಾರ, ಆದರ್ಶಗಳು ಪಾಲನೆಯಾಗಬೇಕು. ಎಲ್ಲಿಯವರೆಗೂ ಅಸಮಾನತೆ ಇರುತ್ತದೆ ಅಲ್ಲಿಯತನಕ ಅಂಬೇಡ್ಕರ್ ವಿಚಾರಗಳು ಜೀವಂತವಾಗಿರುತ್ತವೆ. ಮಾಯಾವತಿ ಬರೀ ಅಂಬೇಡ್ಕರ್ ಪ್ರತಿಮೆಯನ್ನು ನಿಲ್ಲಿಸಲಿಲ್ಲ. ಅವರ ವಿಚಾರಗಳನ್ನು ಜನತೆಗೆ ಹೇಳಿದರು. ಅಂಬೇಡ್ಕರ್ ಕನಸು ಇನ್ನು ನನಸಾಗಿಲ್ಲ. ಸಂವಿಧಾನವನ್ನು ತಿದ್ದಿ ಬರೆಯುತ್ತೇವೆಂದು ಹೇಳಿಕೊಂಡು ಎದೆ ನಿಮಿರಿಸಿಕೊಂಡು ಒಂದು ವರ್ಗ ಹೋಗುತ್ತಿರುವುದು ನಿಜಕ್ಕೂ ಅಂಬೇಡ್ಕರ್‍ಗೆ ಅವಮಾನ ಮಾಡಿದಂತೆ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯ ಸಮ್ಮಿಶ್ರ ಸರ್ಕಾರ ಡಾಂಭಿಕತೆ, ಆಷಾಡಭೂತಿತನವನ್ನು ಪ್ರದರ್ಶಿಸುತ್ತಿದೆ. ಅಂಬೇಡ್ಕರ್ ಆಶಯವಾಗಿದ್ದ ಅಸ್ಪೃಶ್ಯತೆ, ಅಸಮಾನತೆಯನ್ನು ಹೋಗಲಾಡಿಸಲು ಯಾವುದೇ ರಾಜಕೀಯ ಪಕ್ಷಗಳಿಂದ ಇನ್ನು ಸಾಧ್ಯವಾಗಿಲ್ಲ.

      ದಲಿತರಿಗೆ ಮತಾಂತರದ ದಾರಿಯನ್ನು ಅಂಬೇಡ್ಕರ್ ತೋರಿದರು. ಕೋಮುವಾದಿ ಪಕ್ಷ ಮೀಸಲಾತಿಯನ್ನು ಅಂತ್ಯಗೊಳಿಸುವ ದಮ್ಕಿ ಹಾಕುತ್ತಿದೆ. ಓಟಿಗಾಗಿ ಅಂಬೇಡ್ಕರ್ ವರ್ಚಸ್ಸನ್ನು ದೋಚಲಾಗುತ್ತಿದೆ. ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳ ಮೇಲೆ ಹಲ್ಲೆ ನಡೆಯುತ್ತಿದೆ. ಕೃಷಿಕರ ಆತ್ಮಹತ್ಯೆಯಾಗುತ್ತಿದೆ. ದಲಿತರು, ಆದಿವಾಸಿಗಳ ಜೀವನ ಅಪಾಯದಲ್ಲಿದೆ. ಆದರೂ ಕೋಮುವಾದಿಗಳಿಗೆ ಮತ ನೀಡುತ್ತಿರುವುದು ದುಃಖದ ಸಂಗತಿ ಎಂದರು.

      ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಹಾಗೂ ರೈತರನ್ನು ಮಾಧ್ಯಮಗಳು ನಿರ್ಲಕ್ಷಿಸುತ್ತಿವೆ. ಧ್ವನಿಗಾರುಡಿಗ ರಾಜಕಾರಣ ನಡೆಯುತ್ತಿದೆ. ಎಸ್ಸಿ/ಎಸ್ಟಿಗಳ ಪತ್ರಿಕೆ ಗುಣಮಟ್ಟದಿಂದ ಹೊರಬರಬೇಕಾದರೆ ಕಸುಬುದಾರಿಕೆ, ಪ್ರಾಮಾಣಿಕತೆ, ವೃತ್ತಿ ನಿಷ್ಟೆಯಿರಬೇಕು. ಪತ್ರಿಕೆಗಳನ್ನು ಅಂದವಾಗಿ ಮುದ್ರಿಸಿ ಓದುಗರ ಕೈಗೆ ನೀಡಿದಾಗ ಶೋಷಣೆ ಮಾಡುವವರು ನೋಡುತ್ತಾರೆ ಎಂದು ಸಲಹೆ ನೀಡಿದರು.

       ಕರ್ನಾಟಕ ರಾಜ್ಯ ಎಸ್ಪಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ವರ್ಷ ಬೆಂಗಳೂರಿನಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸುತ್ತಿದ್ದೆವು. ಮೂರು ವರ್ಷದಿಂದ ಬಿ.ರಾಚಯ್ಯನವರ ಸ್ಮರಣಾರ್ಥ ರಾಜ್ಯ ಮಟ್ಟದ ವಾರ್ಷಿಕ ಪ್ರಶಸ್ತಿಯನ್ನು ನೀಡುತ್ತ ಬರುತ್ತಿದ್ದೇವೆ. ಅದರಂತೆ ಈ ಬಾರಿ ಚಿತ್ರದುರ್ಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಿ ಪ್ರಶಸ್ತಿಗೆ ಪತ್ರಕರ್ತ ಡಿ.ಉಮಾಪತಿಯನ್ನು ಆಯ್ಕೆ ಮಾಡಿಕೊಂಡಿರುವುದು ಸಂಘಕ್ಕೆ ಸಿಕ್ಕ ಗೌರವ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.ಎಸ್ಸಿ/ಎಸ್ಟಿ ಪತ್ರಿಕೆಗಳಿಗೆ ನೀಡುವ ಒಂದು ಪುಟ ಜಾಹಿರಾತನ್ನು ಎರಡು ಪುಟಗಳಿಗೆ ಹೆಚ್ಚಿಸಬೇಕು.ಹತ್ತು ವರ್ಷ ಪೂರೈಸಿರುವ ಪತ್ರಿಕೆಗಳಿಗೆ ನೀಡುತ್ತಿರುವ ಅರ್ಧ ಪುಟ ಜಾಹಿರಾತನ್ನು ಪೂರ್ಣಪುಟಕ್ಕೆ ಏರಿಸಿ.
ಶೇ.25 ರಷ್ಟು ಹೆಚ್ಚುವರಿ ಬಿಲ್ ವಾವತಿಸಿ.

      ಸಂಘದ ವತಿಯಿಂದ ನೀಡುವ ರಾಜ್ಯ ಮಟ್ಟದ ವಾರ್ಷಿಕ ಪ್ರಶಸ್ತಿಯನ್ನು ಹಿರಿಯ ಸಂಪಾದಕ ಶಂಕರಪ್ಪ ಹುಸನಪ್ಪ ಛಲವಾದಿಗೆ ಪ್ರದಾನ ಮಾಡಲಾಯಿತು.ರಾಜ್ಯ ಎಸ್ಸಿ/ಎಸ್ಟಿ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಚೆಲುವರಾಜು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಶ.ಮಂಜುನಾಥ್, ವಾರ್ತಾ ಇಲಾಖೆ ನಿರ್ದೇಶಕ ಬೃಂಗೇಶ್ ವಾರ್ತಾಧಿಕಾರಿ ಬಿ.ಧನಂಜಯಪ್ಪ, ಎಸ್ಸಿ. ಎಸ್ಟಿ ಪತ್ರಿಕಾ ಸಂಪಾದಕರುಗಳ ಸಂಘದ ಉಪಾಧ್ಯಕ್ಷರುಗಳಾದ ಅನೂಪ್‍ಕುಮಾರ್, ಸುರೇಶ್ ಸಿಂಧೆ, ಸಹ ಕಾರ್ಯದರ್ಶಿಗಳಾದ ಮೈಲಾರಪ್ಪ ವೇದಿಕೆಯಲ್ಲಿದ್ದರು.
ಕಾರ್ಯಕ್ರಮ ಸಂಚಾಲಕರುಗಳಾದ ಡಿ.ಎನ್.ಮೈಲಾರಪ್ಪ, ಜಿ.ಓ.ಎನ್.ಮೂರ್ತಿ, ಎಂ.ಕೆ.ಪ್ರಕಾಶ್, ಗೊಂಡಬಾಳ್ ಬಸವರಾಜ್, ಗಣೇಶ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap