ಬಳ್ಳಾರಿ
ನಗರದಲ್ಲಿ ಬಯಲು ಶೌಚಮುಕ್ತ ವನ್ನಾಗಿಸಲು ಹಾಗೂ ಹಸಿ ಕಸ ಮತ್ತು ಒಣ ಕಸವನ್ನಾಗಿ ವಿಂಗಡಿಸಿ ಪಾಲಿಕೆಯ ವಾಹನಗಳಿಗೆ ನೀಡುವುದರ ಮೂಲಕ ನಿರ್ಮಲ ನಗರವನ್ನಾಗಿಸಲು ಸಾರ್ವಜನಿಕರು ಮುಂದಾಗಬೇಕು ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಸುಶೀಲ ಬಾಯಿ ಅವರು ಕರೆ ನೀಡಿದರು.
ಬಳ್ಳಾರಿ ಹಾಗೂ ಕಲಬುರ್ಗಿ ಕ್ಷೇತ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ನಗರ), ಸರ್ಕಾರಿ ಆದರ್ಶ ವಿದ್ಯಾಲಯ, ಉರ್ದು ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆದರ್ಶ ವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಗರ ಪ್ರದೇಶಗಳು ಇಂದು ನೈರ್ಮಲ್ಯದ ಕೊರತೆ ಹಾಗೂ ಅನಾರೋಗ್ಯ ಕಾರಣಗಳಿಂದಾಗಿ ನಾಗರಿಕರು ಹಲವು ಬಗೆಯ ವೆಚ್ಚಗಳನ್ನು ಮಾಡುತ್ತಿದ್ದಾರೆ.
ನಗರಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗಿ ಕಲುಷಿತ ಒಳಚರಂಡಿ ಹಾಗೂ ಜನ ಸಂಪನ್ಮೂಲಕ್ಕೆ ದೊಡ್ಡ ಬೆದರಿಕೆಯಾಗುತ್ತಿದ್ದು ಅದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿ ನಿಲ್ಲುತ್ತದೆ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳಾದ ಡಾ.ದೊಡ್ಡ ಹನುಮಂತ ರವರು ಮಾತನಾಡಿ ಜನರು ಸ್ವಚ್ಛತೆಯ ಕಡೆಗೆ ಗಮನಹರಿಸಬೇಕು, ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಇರುತ್ತದೆ. ಕಲುಷಿತ ನೀರು ಕುಡಿಯುವುದರಿಂದ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜನರು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದರು.
ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕರಾದ ಡಾ.ಜಿ.ಡಿ.ಹಳ್ಳಿಕೇರಿ ರವರು ಮಾತನಾಡಿ ಸ್ವಚ್ಛ ಭಾರತ ಅಭಿಯಾನ, ಬಯಲು ವಿಸರ್ಜನೆ ತೊಡೆದು ಹಾಕುವುದು, ವೈಜ್ಞಾನಿಕ ರೀತಿಯಲ್ಲಿ ಘನ ತ್ಯಾಜ್ಯವಸ್ತು ನಿರ್ವಹಣೆ ಮಾಡುವುದು, ಸ್ವಚ್ಛತೆಯ ಬಗ್ಗೆ ಜನರ ನಡವಡಿಕೆಯಲ್ಲಿ ಪರಿವರ್ತನೆ ತರುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಮಹಾನಗರ ಪಾಲಿಕೆ ಪರಿಸರ ಅಭಿಯಂತರರಾದ ಟಿ.ಶ್ರೀನಿವಾಸ್ ಸ್ವಚ್ಛತೆ ಹಾಗೂ ಸಾವಯವ ಗೊಬ್ಬರ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು.
ಜಾಗೃತಿ ಜಾಥಾ: ಕಾರ್ಯಕ್ರಮದ ಅಂಗವಾಗಿ ಜಾಗೃತಿ ಜಾಥಾವನ್ನು ಏರ್ಪಡಿಸಲಾಯಿತು. ಈ ಜಾಥಾಗೆ ಮಹಾನಗರ ಪಾಲಿಕೆ ಸದಸ್ಯ ಶಾಸಾಬ್ ಅವರು ಚಾಲನೆ ನೀಡಿದರು.
ಸರ್ಕಾರಿ ಆದರ್ಶ ಶಾಲೆಯ ಶಿಕ್ಷಕಿ ವೀಣಾ ಅವರು ನಿರೂಪಿಸಿದರು, ಕ್ಷೇತ್ರ ಪ್ರಚಾರ ಸಹಾಯಕ ಎನ್.ರಾಮಕೃಷ್ಣ ಅವರು ವಂದಿಸಿದರು.
ಶಾಲಾ ಮಕ್ಕಳಿಗಾಗಿ ಚಿತ್ರ ಕಲಾಸ್ಪರ್ಧೆ, ರಂಗೋಲಿ ಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯ ಆಂಜನೇಯ.ಕೆ.ಜಿ, ಉರ್ದು ಬಾಲಕಿಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ರಫೀಕ್, ಸಮಗ್ರ ಶಿಶು ಅಭಿವೃದ್ಧಿಯೋಜನೆಯ ಮೇಲ್ವಿಚಾರಕಿ ನಿರ್ಮಲ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








