ಹಾವೇರಿ
ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಸ್ವಚ್ಛಮೇವ ಜಯತೆಯ ಘೋಷಣೆಯೊಂದಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ ಮಿಷನ್ ಸಹಯೋಗದಲ್ಲಿ ಹಾವೇರಿ ನಗರದ ಶತಾಯುಷಿಗಳ ಸಾರೋಟ ಮೆರವಣಿಗೆ ಮೂಲಕ ಶೌಚಾಲಯ ಬಳಕೆ ಕುರಿತಂತೆ ಜಾಗೃತಿ ಮೂಡಿಸಲು ನಗರದಲ್ಲಿ ವಿನೂತನ ಕಾರ್ಯಕ್ರಮ ನಡೆಸಲಾಯಿತು.
ಸೋಮವಾರ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಶತಾಯುಷಿಗಳ ಸಾರೋಟ ಮೆರವಣಿಗೆ ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರುಗಳು ಚಾಲನೆ ನೀಡಿದರು.
ಅಲಂಕೃತ ಸಾರೋಟಿನಲ್ಲಿ ಹಾವೇರಿ ತಾಲೂಕಿನ ಯತ್ತಿನಹಳ್ಳಿಯ ಶತಾಯುಷಿಗಳಾದ ಗುಡ್ಡಪ್ಪ ನಿಂಗಪ್ಪ ಕರಿಹೊಳಿ, ಹೊಸಳ್ಳಿಯ ಈರಮ್ಮ ಹೊಳೆಪ್ಪ ಸಾಬಳದ, ಕಬ್ಬೂರ ಗ್ರಾಮದ ಈರಪ್ಪ ಚನ್ನಬಸಪ್ಪ ತೋಟಗಾರ, ಶಿವಲಿಂಗಪ್ಪ ಸಿದ್ದಪ್ಪ ತೋಟದ, ಶಿವಬಸಪ್ಪ ಮಲ್ಲಪ್ಪ ಒಡೆಯರ, ಬಸವಣ್ಣೆಪ್ಪ ಸಿದ್ದಪ್ಪ ಬಾಗಾರ, ದೇವಿಹೊಸೂರಿನ ಕನ್ನಮ್ಮ ಅಡಿವೆಪ್ಪ ಉಪ್ಪುಣಷಿ, ಹಾವೇರಿ ನಗರದ ಮೃತ್ಯುಂಜಯಸ್ವಾಮಿ ಹಿರೇಮಠ, ಚನ್ನಮ್ಮ ಬೀಮಪ್ಪ ಮಡಿವಾಳರ ಸ್ವಚ್ಛಮೇವ ಜಯತೆ ಜಾಗೃತಿ ಜಾತಾದ ಸಾರೋಟದಲ್ಲಿ ಕುಳಿತು ಶೌಚಾಲಯ ಬಳಕೆ ಕುರಿತಂತೆ ಜಾಗೃತಿ ಮೂಡಿಸಿದರು.
ಈ ಕುರಿತಂತೆ ಹಿರಿಯರು ಮಾತನಾಡಿ, ನಾವೆಲ್ಲ ಶೌಚಾಲಯವನ್ನು ಬಳಕೆಮಾಡಿ ಶತಾಯುಷಿಗಳಾಗಿ ಆರೋಗ್ಯವಂತರಾಗಿ ಬಾಳುತ್ತಿದ್ದೇವೆ. ಇಂದಿನ ವಾತಾವರಣದಲ್ಲಿ ಪ್ರತಿಯೊಬ್ಬರೂ ಶೌಚಾಲಯ ಬಳಕೆ ಮಾಡುವುದು ಅಗತ್ಯವಿದೆ. ಶೌಚಾಲಯ ಬಳಕೆಯಿಂದ ಉತ್ತಮ ಪರಿಸರ ಹಾಗೂ ಆರೋಗ್ಯದ ಬದುಕು, ಸುದೀರ್ಘ ಆಯುಷ್ಯನ್ನು ಹೊಂದಬಹುದು. ನಮ್ಮಂತೆಯೇ ಇತರರು ಬಾಳಲು ಶೌಚಾಲಯ ಬಳಕೆ ಕುರಿತಂತೆ ಜಾಗೃತಿ ಮೂಡಿಸಲು ನಮಗೆ ಅವಕಾಶ ಸಿಕ್ಕಿರಿವುದು ಸಂತಸವಾಗಿದೆ ಎಂದರು.
ಮೈಲಾರ ಮಹದೇವಪ್ಪ ವೃತ್ತ, ಗಾಂಧಿ ವೃತ್ತ, ಎಂ.ಜಿ.ರಸ್ತೆ , ಜೆ.ಎಚ್.ಪಟೇಲ್ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಆಕರ್ಷಕ ಸಾರೋಟಿನಲ್ಲಿ ಶತಾಯುಷಿಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಸಾರೋಟಿನ ಅಕ್ಕಪಕ್ಕ ಅಲಂಕೃತವಾದ ಶ್ವೇತವರ್ಣದ ಕುದುರೆಗಳು ಮೆರವಣಿಗೆ ಮೆರಗು ತಂದವು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ವಿವಿಧ ಅಧಿಕಾರಿಗಳು ಮೆರವಣಿಗೆಯೂದ್ಧಕ್ಕೂ ಕಾಲ್ನಡಿಗೆಯಲ್ಲಿ ಭಾಗವಹಿಸಿ ಗಮನಸೆಳೆದರು.
ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವ ಶೌಚಾಲಯ ದಿನದ ಜಾಗೃತಿಗಾಗಿ ಗಾಳಿಪಟ, ರಂಗೋಲಿ ಹಾಗೂ ಪೇಟಿಂಗ್ ಸ್ಪರ್ಧೆಗಳನ್ನು ನಡೆಸಿ ಜಾಗೃತಿ ಮೂಡಿಸಲಾಯಿತು. ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾತನಾಡಿ, ಹಾವೇರಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ. ಶೌಚಾಲಯದ ಬಳಕೆ ಕುರಿತಂತೆ ಜಾಗೃತಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ವಚ್ಛತೆಯಿಂದ ಆರೋಗ್ಯ ಹಾಗೂ ಆಯುಷ್ಯ ವೃದ್ಧಿಯಾಗುತ್ತದೆ. ಎಲ್ಲರೂ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಹಾಗೂ ಶೌಚಾಲಯ ಬಳಕೆಯಲ್ಲಿ ರಾಜ್ಯದ ಮಾದರಿ ಜಿಲ್ಲೆ ಎಂಬ ಹೆಸರನ್ನು ತರಲು ಎಲ್ಲರೂ ಸಹಕರಿಸಬೇಕು. ಶತಾಯುಷಿಗಳು ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವ ಸಮೂಹಕ್ಕೆ ಶೌಚಾಲಯ ಬಳಕೆ ಕುರಿತಂತೆ ಸಂದೇಶ ನೀಡುತ್ತಿರುವುದು ಸಂತಸವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಅವರು ಮಾತನಾಡಿ, ಎಲ್ಲರೂ ಶೌಚಾಲಯ ಬಳಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸ್ವಚ್ಛತೆಕಾಪಾಡಿಕೊಳ್ಳುವುದರಿಂದ ರೋಗ ರುಜಿನಗಳು ಬರದಂತೆ ತಡೆಯಬಹುದು. ಬಯಲು ಬಹಿರ್ದೆಸೆ ಮುಕ್ತ ವಾತಾವರಣ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ದೀಪಾ ಅತ್ತಿಗೇರಿ, ತಾಲೂಕು ಪಂಚಾಯತಿ ಅಧ್ಯಕ್ಷ ಕರಿಯಲ್ಲಪ್ಪ ಉಂಡಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಬಿ.ಸಿ.ಎಂ.ಅಧಿಕಾರಿ ಜಮಖಾನೆ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಪರಮೇಶ್ವರ ಹುಬ್ಬಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಣ್ಣ, ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ