ಹಾನಗಲ್ಲ
ಶುದ್ಧ ನೀರು, ಗಾಳಿ, ಪ್ರಕೃತಿಯನ್ನು ಅನುಭವಿಸುವ ಕಾಲದ ಪುನರುತ್ಥಾನವಾಗಬೇಕಾಗಿದ್ದು ನಾಳೆಗಾಗಿ ಈಗಲೇ ಎಚ್ಚರಗೊಳ್ಳುವ ನಿಟ್ಟಿನಲ್ಲಿ ಪ್ರತಿ ಪ್ರಜೆ ಜವಾಬ್ದಾರಿ ನಿರ್ವಹಿಸಿಬೇಕಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.
ಮಂಗಳವಾರ ತಾಲೂಕಿನ ಸಾಂವಸಗಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕು ಪಂಚಾಯತ್ ಆಡಳಿತ ಆಯೋಜಿಸಿದ ತಾಲೂಕು ಮಟ್ಟದ ಸ್ವಚ್ಛಮೇವ ಜಯತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗ ಎಲ್ಲ ಗ್ರಾಮಗಳಲ್ಲಿ ಎಲ್ಲ ಮನೆಗಳಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗುತ್ತಿದೆ.
ಆರೋಗ್ಯವಂತ ಭಾರತ ಕಟ್ಟಲು ಎಲ್ಲರ ಶ್ರಮದ ಅವಶ್ಯಕತೆ ಇದೆ. ಸರಕಾರದ ಕೆಲಸ ನಮ್ಮ ಕೆಲಸ ಎಂಬ ಜವಾಬ್ದಾರಿಯನ್ನು ನಾವೆಲ್ಲರೂ ವಹಿಸಿದಾಗ ಎಲ್ಲ ಕಾರ್ಯಕ್ರಮಗಳ ಯಶಸ್ಸು ಸಾಧ್ಯ. ಸಾಂವಸಗಿ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸುವಲ್ಲಿ ನೀವೆಲ್ಲ ಒಟ್ಟಾಗಿ ಕಾರ್ಯ ನಿರ್ವಹಿಸಿ ಎಂದು ಕರೆ ನೀಡಿದ ಅವರು, ಜೂನ 21 ರಂದು ಜಾಗತಿಕ ಮಟ್ಟದಲ್ಲಿ ವಿಶ್ವಯೋಗ ದಿನಾಚರಣೆ ಆಚರಿಸುತ್ತಿದ್ದು ಆರೋಗ್ಯಕ್ಕಾಗಿ ಯೋಗ ಕಾರ್ಯಕ್ರಮಕ್ಕೆ ಒತ್ತು ನೀಡಬೇಕು. ಈ ಮೂಲಕ ಆರೋಗ್ಯವಂತ ಬಲಿಷ್ಠ ರಾಷ್ಟ್ರ ಕಟ್ಟಲು ಮುಂದಾಗೋಣ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರ ಚನ್ನಬಸಪ್ಪ ಹಾವಣಗಿ ಮಾತನಾಡಿ, ಪ್ರಸ್ತುತ ವರ್ಷವನ್ನು ಜಲವರ್ಷವನ್ನಾಗಿ ಆಚರಿಸುತ್ತಿದ್ದು ಒಂದು ತಿಂಗಳಿನಲ್ಲಿ ತಾಲೂಕಿನ ಎಲ್ಲ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಜುಲೈ 10 ರ ಒಳಗಾಗಿ ಈ ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು. ಈ ಮೂಲಕ ಆರೋಗ್ಯ ಮತ್ತು ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿ ಮಾಡಲು ಗುಡ್ ಮಾರ್ನಿಂಗ ತಂಡ ರಚಿಸಿ ಯೋಜನೆ ಜಾರಿಗೆ ತರಲಾಗುತ್ತದೆ. ಕಸ ವಿಲೇವಾರಿ ವಿಷಯದಲ್ಲಿ ಎಲ್ಲರೂ ಜಾಗೃತಿವಹಿಸಿಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು.
ಪ್ರತಿ ಗ್ರಾಮ ಮಟ್ಟದಲ್ಲಿ 5 ನೂರು ಸಸಿ ನೆಡುವ ಮೂಲಕ ಪರಿಸರ ಉಳಿಸುವ ಕಾರ್ಯನವನ್ನು ಮಾಡಲು ಎಲ್ಲರೂ ಸಹಕರಿಸಬೇಕು. ಕುಡಿಯುವ ನೀರು ಅಮೃತವಾಗುತ್ತಿದೆ. ಇದನ್ನು ಉಳಿಸಲು ಎಲ್ಲರೂ ಹಿತ ಮಿತವಾಗಿ ನೀರು ಬಳಸಬೇಕು. ನೀರನ್ನು ಉಳಿಸುವ ಹಾಗೂ ಕಳೆದು ಹೋಗದಂತೆ ಜಾಗೃತಿವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಸದಸ್ಯ ಬಸವರಾಜ ಬೂದಿಹಾಳ, ಗ್ರಾಪಂ ಅಧ್ಯಕ್ಷ ಸಾಲಿಯಾಬಾನು ಮುಲ್ಲಾ, ಶಿವಾಜಪ್ಪ ಕೊರಗರ, ಶಾಂತವ್ವ ಕಮ್ಮಾರ, ತಾಲೂಕು ವೈದ್ಯಾಧಿಕಾರಿ ಡಾ.ರವಿಂದ್ರ ಪಾಟೀಲ, ಸಿಡಿಪಿಓ ಸಾವೋಜಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಸವರಾಜ ಅರಿಷಿಣದ, ಎಫ.ಬಿ.ಸಾತೇನಹಳ್ಳಿ, ಬಸವರಾಜ ಯತ್ನಳ್ಳಿ, ಮಂಜುನಾಥ ಬಡಿಗೇರ, ಆರ್.ಬಿ.ಪಾಟೀಲ, ಎ.ಎಂ.ಚಲವಾದಿ ಮೊದಲಾದವರಿದ್ದರು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ