ಚಿತ್ರದುರ್ಗ
ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುವ ಮನಸು ಸ್ವಯಂ ಪ್ರೇರಿತವಾಗಿ ಎಲ್ಲರಲ್ಲೂ ಜಾಗೃತಗೊಳ್ಳಬೇಕು. ಅಂದಾಗ ಮಾತ್ರ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಹೇಳಿದರು.
ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಚಿತ್ರದುರ್ಗದ ಡಿಹೆಚ್‍ಒ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರಿಗಾಗಿ ಗುರುವಾರದಂದು ಏರ್ಪಡಿಸಿದ ಮಾಧ್ಯಮ ಅಧಿವೇಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡೆಂಗ್ಯು, ಚಿಕೂನ್‍ಗುನ್ಯಾ, ಮೆದುಳುಜ್ವರ ಮುಂತಾದ ಬಹುತೇಕ ಮಾರಣಾಂತಿಕ ರೋಗಗಳು ಸೊಳ್ಳೆಗಳಿಂದಲೇ ಹರಡುತ್ತವೆ. ‘ಕೀಟ ಚಿಕ್ಕದು- ಕಾಟ ದೊಡ್ಡದು’ ಎಂಬಂತೆ, ಗಾತ್ರದಲ್ಲಿ ಚಿಕ್ಕದಾದರೂ, ಸೊಳ್ಳೆಗಳು ಮಾನವನನ್ನು ಕಾಡುವ ಪರಿ ನಿಜಕ್ಕೂ ಆತಂಕಕಾರಿ ಯಾದುದು. ಮಲೇರಿಯಾ ರೋಗ ಸುಮಾರು 1852 ರಿಂದಲೂ ಭಾರತ ಸೇರಿದಂತೆ ವಿಶ್ವದ ನೂರಾರು ದೇಶಗಳನ್ನು ಕಾಡುತ್ತಿರುವ ಪ್ರಾಚೀನ ರೋಗವಾಗಿದ್ದು, ತೀರ ಇತ್ತೀಚಿನ ವರ್ಷಗಳಲ್ಲಿ ಡೆಂಗ್ಯು, ಚಿಕುನ್‍ಗುನ್ಯಾ ನಂತಹ ಮಾರಕ ರೋಗಗಳು ದೇಶಕ್ಕೆ
ಪರಿಚಿತಗೊಂಡಿವೆ ಎಂದರು
ಈ ಹಿಂದೆ ಗ್ರಾಮಗಳಲ್ಲಿ ಇಂತಹ ಮಾರಕ ರೋಗಗಳು ಬಂದರೆ ಊರಿಗೆ ಊರೇ ಸಂಕಷ್ಟಕ್ಕೆ ಸಿಲುಕುತ್ತಿತ್ತು. ಇದರ ಜೊತೆಗೆ ಮೂಢನಂಬಿಕೆಗಳಿಗೂ ಜನರು ಒಳಗಾಗುತ್ತಿದ್ದರು. ಮಲೇರಿಯಾ ರೋಗ ಬರುವುದು ಅನೈರ್ಮಲ್ಯ ಪ್ರದೇಶದಲ್ಲಿ ವಾಸಿಸುವ ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದಾದರೆ, ಡೆಂಗ್ಯು ಮತ್ತು ಚಿಕುನ್‍ಗುನ್ಯಾ ರೋಗಗಳು ಶುದ್ಧ ಹಾಗೂ ನಿಂತ ನೀರಿನಲ್ಲಿ ಬೆಳೆಯುವ ಈಡಿಸ್ ಸೊಳ್ಳೆಯಿಂದಾ ಗಿದೆ. ಬಹುತೇಕ ಪ್ರದೇಶಗಳಲ್ಲಿ ಚರಂಡಿಯಲ್ಲಿ ಕಸ, ತ್ಯಾಜ್ಯ ಹಾಕುವುದರಿಂದ, ನೀರು ಸರಾಗವಾಗಿ ಹರಿಯದೆ, ಅನೈರ್ಮಲ್ಯ ಸೃಷ್ಟಿಯಾಗಿ,
ರೋಗಗಳಿಗೆ ಕಾರಣವಾಗುತ್ತದೆ ಎಂದು ವಿವರಿಸಿದರು
ಸಾರ್ವಜನಿಕರು ಪ್ರತಿಯೊಂದಕ್ಕೂ ಗ್ರಾಮ ಪಂಚಾಯತ್ ಅಥವಾ ಸ್ಥಳೀಯ ಸಂಸ್ಥೆಗಳು, ಆರೋಗ್ಯ ಇಲಾಖೆಯತ್ತಲೇ ಬೊಟ್ಟು ಮಾಡುತ್ತಾರೆಯೇ ಹೊರತು, ಅವರಿಗೂ ಸಾಮಾಜಿಕ ಜವಾಬ್ದಾರಿ ಇದೆ ಎನ್ನುವುದನ್ನು ಮರೆಯಬಾರದು. ಜಿಲ್ಲೆಯಲ್ಲಿ ಪ್ರತಿ ಶನಿವಾರದಂದು ಸ್ವಚ್ಛ ಶನಿವಾರವನ್ನಾಗಿ ಆಚರಿಸಲಾಗುತ್ತಿದ್ದು, ಇದು ಕೇವಲ ಸ್ವಚ್ಛತೆಯ ಜಾಗೃತಿ ಮೂಡಿಸುವ ಸಾಂಕೇತಿಕ ಕಾರ್ಯಕ್ರಮವಾಗಿರುತ್ತದೆ.
ಹೀಗಾದರೂ, ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಲಿ ಎಂಬುದು ಸರ್ಕಾರದ ಆಶಯವಾಗಿದೆ. ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಆರೋಗ್ಯ ಮಿಷನ್ ಬಂದಾಗಿನಿಂದ, ತಳ ಮಟ್ಟದಲ್ಲಿ ಆರೋಗ್ಯ ಕಾರ್ಯಕ್ರಮಗಳು ಜನರನ್ನು ತಲುಪುತ್ತಿವೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮಲೇರಿಯಾ ರೋಗ ಹರಡುವಿಕೆಯಲ್ಲಿ ವಿಶ್ವದಲ್ಲಿಯೇ ಭಾರತ 4 ನೇ ಸ್ಥಾನದಲ್ಲಿರುವುದು ನಮಗೆಲ್ಲ ಎಚ್ಚರಿಕೆಯ ಸಂದೇಶವಾಗಿದೆ.
ಹೀಗಾಗಿ ಈ ವರ್ಷದ ಮಲೇರಿಯಾ ದಿನವನ್ನು ‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಎನ್ನುವ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಆರೋಗ್ಯ ಚೆನ್ನಾಗಿದ್ದರೆ, ಸದೃಢ ದೇಶ ನಿರ್ಮಾಣ ಸಾಧ್ಯ. ಹೀಗಾಗಿ ಜನರಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಅರಿವು ಮೂಡಿಸುವ ಕಾರ್ಯ ಹೆಚ್ಚು, ಹೆಚ್ಚು ಆಗಬೇಕಿದೆ. ಜನರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮಗಳ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಹೇಳಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಬಿ. ಜಯಮ್ಮ ಅವರು ಮಾತನಾಡಿ, ಸರ್ಕಾರವು ದೇಶದಲ್ಲಿ ಮಲೇರಿಯಾ ನಿವಾರಣೆಗೆ ಗುರಿಯನ್ನು ಹಾಕಿಕೊಂಡಿದ್ದು, ರಾಷ್ಟ್ರೀಯ ಮಲೇರಿಯಾ ನಿವಾರಣಾ ಚೌಕಟ್ಟು ಕ್ರಿಯಾ ಯೋಜನೆಯನ್ವಯ 2025 ರೊಳಗೆ ಕರ್ನಾಟಕವನ್ನು ಮಲೇರಿಯಾ ಮುಕ್ತ ರಾಜ್ಯವನ್ನಾಗಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ 2014 ರ ಬಳಿಕ ಮಲೇರಿಯಾದಿಂದಾಗಿ ಯಾರೂ ಮೃತಪಟ್ಟಿಲ್ಲ. ವರ್ಷದಿಂದ ವರ್ಷಕ್ಕೆ ಮಲೇರಿಯಾ ಪ್ರಕರಣಗಳು ಕಡಿಮೆಯಾಗುತ್ತಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ 2014 ರಲ್ಲಿ 37 ಮಲೇರಿಯಾ ಪ್ರಕರಣ ವರದಿಯಾಗಿತ್ತು. 2015- 22, 2016- 15, 2017-17, 2018- 14 ಪ್ರಕರಣ ವರದಿಯಾಗಿದ್ದರೆ, ಈ ವರ್ಷ ಇದುವರೆಗೂ 3 ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಬೇಸಿಗೆಯಲ್ಲಿ ಸೊಳ್ಳೆಗಳಿಂದ ಹರಡಬಹುದಾದ ರೋಗ ಉಲ್ಬಣವಾಗುವ ಸಾಧ್ಯತೆಗಳಿರುವುದರಿಂದ, ಜನರು ಮುಂಜಾಗ್ರತಾಕ್ರಮ ವಹಿಸಬೇಕು.
ಯಾವುದೇ ಜ್ವರ ಇರಲಿ, ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತ ಮಾದರಿ ಸಂಗ್ರಹಿಸಿ, ಪರೀಕ್ಷೆ ಮಾಡಲಾಗುವುದು. ರೋಗಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳು ಲಭ್ಯವಿದೆ ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಎಲ್. ಪಾಲಾಕ್ಷ ಅವರು ಮಾತನಾಡಿ, ಜಿಲ್ಲೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈ ಜೋಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ ಸ್ವಾಗತಿಸಿದರು, ಹಿರಿಯ ಆರೋಗ್ಯ ಸಹಾಯಕ ಎಂ.ಬಿ. ಹನುಮಂತಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಮಾಧ್ಯಮ ಪ್ರತಿನಿಧಿಗಳು ಪಾಲ್ಗೊಂಡಿದ್ದರು.